ಟಲ್ಸಾ (ಓಕ್ಲಾ- ಅಮೆರಿಕ) : ಮನೆ ಒಳಗೆ ನಾಯಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಜಗಿದಿದ್ದರಿಂದ ಬ್ಯಾಟರಿ ಸ್ಫೋಟಗೊಂಡು ಮನೆಗೆ ಬೆಂಕಿ ಹತ್ತಿರುವ ಘಟನೆ ಅಮೆರಿಕದ ಓಕ್ಲಾದಲ್ಲಿ ಮೇ ತಿಂಗಳಲ್ಲಿ ನಡೆದಿದೆ. ವಿಡಿಯೋವನ್ನು ಟಲ್ಸಾ ಅಗ್ನಿಶಾಮಕ ದಳ 7 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಕುಟುಂಬದ ಸುರಕ್ಷತೆಗಾಗಿ ವಿಡಿಯೋವನ್ನು ಎಲ್ಲರೂ ನೋಡುವಂತೆ ವಿನಂತಿಸಿದೆ.
"ನಿಮ್ಮ ಮನೆಯಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಗಳಿದ್ದರೆ, ಅವುಗಳ ಬಳಕೆ, ಚಾರ್ಜಿಂಗ್ಗಳ ಬಗ್ಗೆ ಖಚಿತಪಡಿಸಿಕೊಳ್ಳಿ. ದೇಶದಾದ್ಯಂತ ಲಿಥಿಯಂ ಐಯಾನ್ ಬ್ಯಾಟರಿಗಳಿಂದಾಗುತ್ತಿರುವ ಬೆಂಕಿ ಘಟನೆಗಳನ್ನು ನೋಡುತ್ತಿದ್ದೇವೆ" ಎಂದು ಟಲ್ಸಾ ಅಗ್ನಿಶಾಮಕ ದಳ ಹೇಳಿದೆ.
ನಾಯಿ ಮಾಡಿದ್ದಾದರೂ ಏನು?: 1 ನಾಯಿ 1 ಬೆಕ್ಕು ಮನೆಯ ಲಿವಿಂಗ್ ರೂಮ್ನಲ್ಲಿ ಕುಳಿತುಕೊಂಡಿದ್ದರೆ, ಮತ್ತೊಂದು ನಾಯಿ ತನ್ನ ಬಾಯಿಯಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಚಾರ್ಜರ್ ಸಮೇತ ತೆಗೆದುಕೊಂಡು ಬಂದು ನೆಲದ ಮೇಲೆ ಹಾಸಿದ್ದ ಸಣ್ಣ ಬೆಡ್ ಮೇಲೆ ಹಾಕಿ ಕಚ್ಚಲು ಶುರು ಮಾಡುತ್ತದೆ. ಸ್ವಲ್ಪ ಹೊತ್ತು ಬ್ಯಾಟರಿಯನ್ನು ನಾಯಿ ಜಗಿಯತ್ತಾ ಇರಬೇಕಾದರೆ ಮೊದಲು ಅದರಲ್ಲಿ ಸಣ್ಣ ರೀತಿಯ ಸ್ಪಾರ್ಕ್ ಬರುತ್ತದೆ. ತಕ್ಷಣ ಆ ಬ್ಯಾಟರಿಯನ್ನು ಬಾಯಿಯಿಂದ ಬಿಟ್ಟ ನಾಯಿ ಹಿಂದಕ್ಕೆ ಸರಿಯುತ್ತದೆ.