ಕರ್ನಾಟಕ

karnataka

ETV Bharat / international

ಗಾಜಾ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್: 40 ಪ್ಯಾಲೆಸ್ಟೈನಿಯರ ಸಾವು, 224 ಜನರಿಗೆ ಗಾಯ - Israeli Attacks In Gaza

ಗಾಜಾ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಯಲ್ಲಿ 40 ಪ್ಯಾಲೆಸ್ಟೈನಿಯರು ಸಾವಿಗೀಡಾಗಿದ್ದು, ನೂರಾರು ಜನ ಗಾಯಗೊಂಡಿದ್ದಾರೆ.

ಗಾಜಾದಲ್ಲಿ ನಡೆದ ಯುದ್ಧದ ಒಂದು ದೃಶ್ಯ
ಗಾಜಾದಲ್ಲಿ ನಡೆದ ಯುದ್ಧದ ಒಂದು ದೃಶ್ಯ (IANS)

By ETV Bharat Karnataka Team

Published : Jun 30, 2024, 2:26 PM IST

ಗಾಜಾ: ಕಳೆದ 24 ಗಂಟೆಗಳಲ್ಲಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 40 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, 224 ಜನ ಗಾಯಗೊಂಡಿದ್ದಾರೆ ಎಂದು ಹಮಾಸ್ ನಿಯಂತ್ರಣದಲ್ಲಿರುವ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ಸಾವುನೋವುಗಳು ಪ್ಯಾಲೆಸ್ಟೈನಿಯರ ಒಟ್ಟು ಸಾವಿನ ಸಂಖ್ಯೆಯನ್ನು 37,834 ಕ್ಕೆ ತಂದಿವೆ.

ಇಂಧನ ಕೊರತೆ ಮತ್ತು ಇಸ್ರೇಲಿ ಪಡೆಗಳು ಹಾಗೂ ಪ್ಯಾಲೆಸ್ಟೈನ್ ಸಶಸ್ತ್ರ ಬಣಗಳ ನಡುವಿನ ತೀವ್ರ ಘರ್ಷಣೆಗಳಿಂದಾಗಿ ವಿಶೇಷವಾಗಿ ದಕ್ಷಿಣ ಗಾಜಾದ ರಫಾ ನಗರ ಮತ್ತು ಪೂರ್ವ ಗಾಜಾ ನಗರದ ಶುಜಯಾ ನೆರೆಹೊರೆಯಲ್ಲಿ ದಾಳಿ ನಡೆದ ಪ್ರದೇಶಗಳನ್ನು ತಲುಪುವಲ್ಲಿ ರಕ್ಷಣಾ ತಂಡಗಳಿಗೆ ತೀವ್ರ ಅಡ್ಡಿಯುಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ಮೇಲಿನ ಇತ್ತೀಚಿನ ದಾಳಿಯನ್ನು ಇಸ್ರೇಲ್ ಸಮರ್ಥಿಸಿಕೊಂಡಿದ್ದು, ಇಸ್ರೇಲಿ ಪಡೆಗಳು ಶುಜಯಾ ಪ್ರದೇಶದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ವಕ್ತಾರ ಅವಿಚೈ ಅಡ್ರೈ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲ ಗಂಟೆಗಳಲ್ಲಿ ಇಸ್ರೇಲ್ ಪಡೆಗಳು ಹಲವಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿವೆ ಮತ್ತು ಈ ಪ್ರದೇಶದ ಶಾಲಾ ಸಂಕೀರ್ಣದೊಳಗೆ ಶಸ್ತ್ರಾಸ್ತ್ರ ಡಿಪೋವನ್ನು ಪತ್ತೆ ಮಾಡಿರುವುದಾಗಿ ಅವರು ಹೇಳಿದರು.

ಲಕ್ಷಾಂತರ ಗಾಜಾ ನಿವಾಸಿಗಳು ಆಶ್ರಯ, ಆಹಾರ, ಔಷಧಿ ಮತ್ತು ಶುದ್ಧ ನೀರಿನ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ನಿಯರ್ ಈಸ್ಟ್​ ಪ್ರದೇಶದಲ್ಲಿನ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಕೆಲಸ ಮಾಡುವ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಯು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಮಾನವೀಯ ನೆರವು ವಿತರಣೆಗೆ ಅನುಕೂಲವಾಗುವಂತೆ ಗಾಜಾ ಕರಾವಳಿಯಲ್ಲಿ ಲಂಗರು ಹಾಕಿರುವ, ಅಮೆರಿಕ ನಿರ್ವಹಿಸುತ್ತಿರುವ ತಾತ್ಕಾಲಿಕ ಹಡಗನ್ನು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ತೆರವುಗೊಳಿಸಲಾಗಿದೆ ಎಂದು ಪೆಂಟಗನ್ ಶುಕ್ರವಾರ ಪ್ರಕಟಿಸಿದೆ. ಹೀಗಾಗಿ ಗಾಜಾ ನಿವಾಸಿಗಳಿಗೆ ತಲುಪಿಸಲಾಗುತ್ತಿದ್ದ ಅಲ್ಪಸ್ವಲ್ಪ ಸಹಾಯವೂ ಈಗ ನಿಂತು ಹೋದಂತಾಗಿದೆ.

ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲಿ ಗಡಿಯಲ್ಲಿ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಇಸ್ರೇಲ್ ಮೇಲಿನ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗರು ಕೊಲ್ಲಲ್ಪಟ್ಟರು ಮತ್ತು ಸುಮಾರು 250 ಜನರನ್ನು ಹಮಾಸ್​ ಉಗ್ರರು ಒತ್ತೆಯಾಳುಗಳಾಗಿ ಅಪಹರಿಸಿಕೊಂಡು ಹೋದರು.

ಇದನ್ನೂ ಓದಿ : ಭಾರತದೊಂದಿಗೆ ಶಾಶ್ವತ ದ್ವೇಷ ಬಯಸುವುದಿಲ್ಲ: ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್ - India Pakistan Relations

ABOUT THE AUTHOR

...view details