ಗಾಜಾ/ಜೆರುಸಲೇಂ: ತಾನು ಬಂಧಿಯಾಗಿಟ್ಟುಕೊಂಡಿರುವ ಇಸ್ರೇಲಿ ಒತ್ತೆಯಾಳುಗಳ ಪೈಕಿ 33 ಜನ ಇಸ್ರೇಲ್ ದಾಳಿಯಿಂದಾಗಿಯೇ ಮೃತಪಟ್ಟಿದ್ದಾರೆ ಮತ್ತು ಇನ್ನೂ ಕೆಲವರು ಕಾಣೆಯಾಗಿದ್ದಾರೆ ಎಂದು ಹಮಾಸ್ ಹೇಳಿದೆ. ಒತ್ತೆಯಾಳುಗಳನ್ನು ಇರಿಸಲಾಗಿದ್ದ ಸ್ಥಳಗಳ ಮೇಲೆ ಇಸ್ರೇಲ್ನಿಂದ ದಾಳಿ ನಡೆದಿರುವ ದೃಶ್ಯಾವಳಿಗಳು ಹಾಗೂ ಕೆಲ ಒತ್ತೆಯಾಳುಗಳ ಸಂದೇಶಗಳನ್ನು ಒಳಗೊಂಡ ವೀಡಿಯೊವೊಂದನ್ನು ಸೋಮವಾರ ಹಮಾಸ್ ಬಿಡುಗಡೆ ಮಾಡಿದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಠಮಾರಿತನ ಮತ್ತು ನಿರಂತರ ಆಕ್ರಮಣದಿಂದ ಒತ್ತೆಯಾಳುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಮಾಸ್ ಎಚ್ಚರಿಸಿದೆ. "ಯುದ್ಧದ ಉನ್ಮಾದ ಮುಂದುವರಿದಲ್ಲಿ ನೀವು ನಿಮ್ಮ ಜನರನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ತಡವಾಗುವ ಮೊದಲು ಕಾರ್ಯಪ್ರವೃತ್ತರಾಗಿರಿ." ಎಂದು ಹಮಾಸ್ ಹೇಳಿದೆ.
ಅಮೆರಿಕ ಪೌರತ್ವ ಹೊಂದಿರುವ ಇಸ್ರೇಲಿ ಕೈದಿಯನ್ನು ಗಾಜಾದಲ್ಲಿ ಬಂಧಿಸಿ ಇಡಲಾಗಿರುವ ವೀಡಿಯೊವನ್ನು ಅಲ್-ಖಸ್ಸಾಮ್ ಬ್ರಿಗೇಡ್ಸ್ ಶನಿವಾರ ಬಿಡುಗಡೆ ಮಾಡಿದ ಎರಡು ದಿನಗಳ ನಂತರ ಹಮಾಸ್ ಈ ವೀಡಿಯೊ ಬಿಡುಗಡೆ ಮಾಡಿದೆ.
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅಮೆರಿಕ ಪೌರತ್ವ ಹೊಂದಿರುವ ಇಸ್ರೇಲಿ ಕೈದಿ ಎಡನ್ ಅಲೆಕ್ಸಾಂಡರ್ ಮಾತನಾಡುವಾಗ ಭಾವನಾತ್ಮಕ ಸಂಕಟದಿಂದ ಹಲವಾರು ಬಾರಿ ತಡೆದು ತಡೆದು ಮಾತನಾಡಿರುವುದು ಕಂಡು ಬರುತ್ತದೆ. ತನ್ನನ್ನು 420 ದಿನಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿಡಲಾಗಿದೆ ಎಂದು ಹೇಳಿದ ಆತ ಗಾಜಾದಲ್ಲಿ ಉಳಿದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಳ್ಳುವಂತೆ ಇಸ್ರೇಲ್ ಸರ್ಕಾರ ಮತ್ತು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದರು.
ಮೇಲಿನ ಪ್ರಕರಣಗಳನ್ನು ಹೊರತುಪಡಿಸಿ, ಈ ಹಿಂದೆ ಗಾಜಾದಲ್ಲಿ ಒತ್ತೆಯಾಳಾಗಿದ್ದ ಇಸ್ರೇಲಿ-ಅಮೆರಿಕನ್ ಸೈನಿಕ ಈಗ ಸತ್ತಿದ್ದಾನೆ ಎಂದು ಭಾವಿಸಲಾಗಿದೆ ಎಂದು ಇಸ್ರೇಲ್ ಸೇನೆ ಸೋಮವಾರ ಪ್ರಕಟಿಸಿದೆ. ಮೃತ ಸೈನಿಕನನ್ನು ಕ್ಯಾಪ್ಟನ್ ಒಮರ್ ಮ್ಯಾಕ್ಸಿಮ್ ನ್ಯೂಟ್ರಾ (21) ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ಈತ ಕೊಲ್ಲಲ್ಪಟ್ಟಿದ್ದಾನೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಅವರ ಮೃತ ದೇಹವನ್ನು ಹಮಾಸ್ ಗಾಜಾದಲ್ಲಿ ಇಟ್ಟುಕೊಂಡಿದೆ ಎಂದು ಅದು ಹೇಳಿದೆ.
ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲಿ ಗಡಿಯಲ್ಲಿ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ನಡೆಸುತ್ತಿದೆ. ಹಮಾಸ್ ದಾಳಿಯಲ್ಲಿ ಸುಮಾರು 1,200 ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 250 ಜನರನ್ನು ಒತ್ತೆಯಾಳುಗಳಾಗಿ ಕರೆದೊಯ್ಯಲಾಯಿತು.
ಇದನ್ನೂ ಓದಿ : 'ಇಸ್ರೇಲಿ ಒತ್ತೆಯಾಳುಗಳನ್ನು ಬಿಡದಿದ್ದರೆ...': ಹಮಾಸ್ಗೆ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ