ಗಾಜಾ: ಗಾಜಾ ಪಟ್ಟಿಯ ನುಸೆರಾತ್ ಶಿಬಿರದಲ್ಲಿ ನಿರಾಶ್ರಿತರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವತ್ತು ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಗುರುವಾರ ಬೆಳಗ್ಗೆ ಮಾಧ್ಯಮಗಳಿಗೆ ತಿಳಿಸಿವೆ. ಸಾವನ್ನಪ್ಪಿದವರಲ್ಲಿ ಅನೇಕರು ಮಕ್ಕಳು ಮತ್ತು ಮಹಿಳೆಯರಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಇಸ್ರೇಲಿ ಫೈಟರ್ ಜೆಟ್ ಶಾಲೆಯ ಮೂರು ತರಗತಿ ಕೊಠಡಿಗಳ ಮೇಲೆ ಹಲವಾರು ಕ್ಷಿಪಣಿಗಳ ಮೂಲಕ ಬಾಂಬ್ ದಾಳಿ ನಡೆಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು "ಭಯಾನಕ ಹತ್ಯಾಕಾಂಡ" ಎಂದು ಹಮಾಸ್ ನಡೆಸುತ್ತಿರುವ ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ತನ್ನ ಹೇಳಿಕೆಯಲ್ಲಿ ಖಂಡಿಸಿದೆ. "ಇಸ್ರೇಲಿ ಸೇನೆಯು ನಿರಂತರವಾಗಿ ಈ ರೀತಿಯ ದಾಳಿಗಳನ್ನು ನಡೆಸುತ್ತಿರುವುದು ನಾಗರಿಕರ ವಿರುದ್ಧದ ಅಪರಾಧಗಳ ಸ್ಪಷ್ಟ ಪುರಾವೆಯಾಗಿದೆ" ಎಂದು ಅದು ಹೇಳಿದೆ.
ಮಾನವೀಯತೆಗೆ ಅಪಾಯವ ಉಂಟುಮಾಡುವ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಈ ಅಪರಾಧಗಳಿಗೆ ಇಸ್ರೇಲ್ ಮತ್ತು ಯುಎಸ್ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು ಎಂದು ಮಾಧ್ಯಮ ಕಚೇರಿ ತಿಳಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಹಮಾಸ್ ಉಗ್ರರು ಗಾಜಾದಲ್ಲಿನ ಈ ಶಾಲೆಯಲ್ಲಿ ಅಡಗಿಕೊಂಡಿದ್ದರಿಂದಲೇ ಇದರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ.
ಕದನ ವಿರಾಮಕ್ಕೆ ಮತ್ತೆ ಹಿನ್ನಡೆ: ಕದನ ವಿರಾಮ ಜಾರಿಯಾಗಬೇಕಾದರೆ ಇಸ್ರೇಲ್ ಗಾಜಾ ಮೇಲಿನ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಸ್ರೇಲ್ ಸೇನೆ ಗಾಜಾದಿಂದ ಸಂಪೂರ್ಣವಾಗಿ ಹಿಂತೆಗೆಯಬೇಕೆಂದು ಹಮಾಸ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಮುಂದಿಟ್ಟಿದ್ದ ಕದನ ವಿರಾಮ ಪ್ರಸ್ತಾಪಕ್ಕೆ ಸ್ಪಷ್ಟವಾಗಿ ಹಿನ್ನಡೆಯಾಗಿದೆ. ಹಮಾಸ್ನ ಪ್ರಮುಖ ನಾಯಕ ಇಸ್ಮಾಯಿಲ್ ಹನಿಯೆಹ್ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಏತನ್ಮಧ್ಯೆ ಉಭಯ ಪಕ್ಷಗಳ ಮಧ್ಯೆ ಕದನ ವಿರಾಮ ಜಾರಿಗೊಳಿಸಲು ಅಮೆರಿಕ ಈಗಲೂ ಪ್ರಯತ್ನಿಸುತ್ತಿದೆ. ಈ ಪ್ರಯತ್ನಗಳ ಭಾಗವಾಗಿ ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಬುಧವಾರ ದೋಹಾದಲ್ಲಿ ಕತಾರ್ ಮತ್ತು ಈಜಿಪ್ಟ್ನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸಿದರು.
ನವೆಂಬರ್ನಲ್ಲಿ ಏರ್ಪಟ್ಟಿದ್ದ ಒಂದು ವಾರದ ಸಂಕ್ಷಿಪ್ತ ಕದನ ವಿರಾಮದ ನಂತರ, ಕದನ ವಿರಾಮವನ್ನು ಏರ್ಪಡಿಸುವ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಇಸ್ರೇಲ್ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಹಮಾಸ್ ಬೇಡಿಕೆ ಇಟ್ಟಿದ್ದರೆ, ಹಮಾಸ್ ಅನ್ನು ಸಂಪೂರ್ಣ ನಿರ್ನಾಮಗೊಳಿಸುವವರೆಗೂ ತಾತ್ಕಾಲಿಕ ಕದನ ವಿರಾಮಕ್ಕೆ ಮಾತ್ರ ತಾನು ಬದ್ಧ ಎಂದು ಇಸ್ರೇಲ್ ಹೇಳುತ್ತಿದೆ.
ಇದನ್ನೂ ಓದಿ: 'ಮಾಲ್ಡೀವ್ಸ್ನಿಂದ ಇಸ್ರೇಲಿಗರು ತಕ್ಷಣ ಹೊರಬನ್ನಿ': ಇಸ್ರೇಲ್ ಸರ್ಕಾರದ ಸೂಚನೆ - Maldives bans Israelis