ಕಾಬೂಲ್ (ಅಫ್ಘಾನಿಸ್ತಾನ):ತಾಲಿಬಾನ್ ಆಡಳಿತ ಇರುವ ಆಫ್ಘಾನಿಸ್ತಾನದಲ್ಲಿ ಈ ವರ್ಷ (2024) ಸುಮಾರು 30 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲಿದ್ದಾರೆ ಎಂದು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಎಚ್ಚರಿಕೆ ನೀಡಿದ್ದಾಗಿ ವರದಿಯಾಗಿದೆ.
ತಾಲಿಬಾನ್ ಆಡಳಿತ ವಹಿಸಿಕೊಂಡಾಗಿನಿಂದ ದೇಶದಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಕಳೆದ ವರ್ಷದಿಂದ ವಿದೇಶಿ ನೆರವು ಕೂಡ ಕಡಿತವಾಗಿದೆ. ಇದರಿಂದಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಸಂಸ್ಥೆ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ವಿಶ್ವ ಆಹಾರ ಕಾರ್ಯಕ್ರಮ ಮುಖ್ಯಸ್ಥ ಮೋನಾ ಶೇಖ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹೇಳಿಕೆಯೊಂದನ್ನು ಪೋಸ್ಟ್ ಮಾಡಿದ್ದು, "ನಾವು ಸುಮಾರು 1.6 ಮಿಲಿಯನ್ ಅಪೌಷ್ಟಿಕ ಮಕ್ಕಳಿಗೆ ಸಹಾಯ ಮಾಡುವಷ್ಟು ಶಕ್ತರಾಗಿದ್ದೇವೆ" ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ನೆರವಿನಲ್ಲೇ ಕೊರತೆ:ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಅನೇಕ ಕುಟುಂಬಗಳು ತಮ್ಮ ಮಕ್ಕಳಿಗೆ ಸೂಕ್ತ ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ತಾಲಿಬಾನ್ ಆಡಳಿತ ವಹಿಸಿಕೊಂಡ ಬಳಿಕ ಅಲ್ಲಿ ಭೀಕರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದು ಈಗಾಗಲೇ ಅನಿಶ್ಚಿತ ಪರಿಸ್ಥಿತಿ ಉಲ್ಬಣಗೊಳ್ಳುವಂತೆ ಮಾಡಿದೆ. ವಿಶೇಷವಾಗಿ ಇದು ಮಕ್ಕಳು ಮತ್ತು ಮಹಿಳೆಯಲ್ಲಿ ವ್ಯಾಪಕವಾಗಿ ಹರಡಿದೆ ಎಂದು ಹೇಳಿವೆ.
ಇದರ ಜೊತೆಗೆ, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿನ ಹಣಕಾಸು ಕೊರತೆಯಿಂದಾಗಿ ಅಫ್ಘಾನಿಸ್ತಾನದಲ್ಲಿ ಪರಿಹಾರ ಪ್ರಯತ್ನಗಳಿಗೆ ಗಮನಾರ್ಹ ಹಿನ್ನಡೆ ಉಂಟಾಗಿದೆ. ಇದು ಲಕ್ಷಾಂತರ ಜನರನ್ನು ಕ್ಷಾಮದ ಅಪಾಯಕ್ಕೆ ಸಿಲುಕಿಸಿದೆ. ಅಗತ್ಯವಿರುವ ಜನರಿಗೆ ಮಾನವೀಯ ನೆರವು ಸಿಗದೇ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಮಾನವೀಯ ಬಿಕ್ಕಟ್ಟು ಇನ್ನಷ್ಟು ಜಟಿಲವಾಗುತ್ತಿದೆ.