ಕರ್ನಾಟಕ

karnataka

ಸುಡಾನ್​ನಲ್ಲಿ ಮುಂದುವರಿದ ಸಂಘರ್ಷ: 28 ಸಾವು, 46 ಜನರಿಗೆ ಗಾಯ - Sudan Conflict

By ETV Bharat Karnataka Team

Published : Aug 12, 2024, 12:55 PM IST

ಸುಡಾನ್​ನ ಸಶಸ್ತ್ರ ಪಡೆಗಳ ಮಧ್ಯದ ಹೋರಾಟ ಮತ್ತೆ ಭುಗಿಲೆದ್ದಿದ್ದು, ಸಂಘರ್ಷದಲ್ಲಿ 28 ಜನ ಸಾವಿಗೀಡಾಗಿದ್ದಾರೆ.

ಸುಡಾನ್​ನಲ್ಲಿ ಸಂಘರ್ಷ ನಿರತ ಬಂಡುಕೋರರು
ಸುಡಾನ್​ನಲ್ಲಿ ಸಂಘರ್ಷ ನಿರತ ಬಂಡುಕೋರರು (IANS)

ಖಾರ್ಟೂಮ್ : ಪಶ್ಚಿಮ ಸುಡಾನ್ ನ ಉತ್ತರ ಡಾರ್ಫರ್ ರಾಜ್ಯದ ರಾಜಧಾನಿ ಎಲ್ ಫಾಶರ್ ಮೇಲೆ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (ಆರ್ ಎಸ್ ಎಫ್) ಬಂಡುಕೋರರು ನಡೆಸಿದ ದಾಳಿಯಲ್ಲಿ ಕನಿಷ್ಠ 28 ನಾಗರಿಕರು ಮೃತಪಟ್ಟಿದ್ದು, 46 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯದ ಹಂಗಾಮಿ ಗವರ್ನರ್ ಅಲ್-ಹಫೀಜ್ ಬಖೀತ್ ತಿಳಿಸಿದ್ದಾರೆ.

"ಮಾರುಕಟ್ಟೆಗಳು ಮತ್ತು ವಸತಿ ಪ್ರದೇಶಗಳ ಮೇಲೆ ವ್ಯವಸ್ಥಿತ ಶೆಲ್ ದಾಳಿ ನಡೆಸುವುದು ಮತ್ತು ನಾಗರಿಕರ ಮನೆಗಳಿಗೆ ನುಗ್ಗಿ ಅವುಗಳನ್ನು ನಾಶಪಡಿಸುವ ಮೂಲಕ ಆರ್​ಎಸ್ಎಫ್ ಮಿಲಿಶಿಯಾ ಹೊಸ ರೀತಿಯ ಹತ್ಯಾಕಾಂಡಗಳನ್ನು ನಡೆಸಿದೆ" ಎಂದು ಅವರು ಭಾನುವಾರ ಹೇಳಿದರು.

ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಮತ್ತು ಡಾರ್ಫರ್ ಪ್ರದೇಶದ ಸಶಸ್ತ್ರ ಪಡೆಗಳ ಜಂಟಿ ಪಡೆ ಆರ್​ಎಸ್ಎಫ್ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಶನಿವಾರ ಆರ್​ಎಸ್​ಎಫ್​ಗೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.

"ಎಲ್ ಫಾಶರ್ ಹೆದರದೆ ದೃಢವಾಗಿ ದಾಳಿಗಳನ್ನು ಎದುರಿಸಲಿದೆ ಮತ್ತು ಶೀಘ್ರದಲ್ಲೇ ಎಲ್ಲಾ ಬಂಡುಕೋರರನ್ನು ಇಲ್ಲಿಂದ ಹೊರಗಟ್ಟಲಾಗುವುದು" ಎಂದು ಗವರ್ನರ್ ಹೇಳಿದರು.

ದಾಳಿಯ ಬಗ್ಗೆ ಆರ್​ಎಸ್ಎಫ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೇ 10 ರಿಂದ, ಎಲ್ ಫಾಶರ್​ನಲ್ಲಿ ಎಸ್ಎಎಫ್ ಮತ್ತು ಆರ್​ಎಸ್ಎಫ್ ನಡುವೆ ತೀವ್ರ ಘರ್ಷಣೆಗಳು ನಡೆಯುತ್ತಿವೆ.

ಏಪ್ರಿಲ್ 15, 2023 ರಿಂದ ಸುಡಾನ್​ನ ಎಸ್ಎಎಫ್ ಮತ್ತು ಆರ್​ಎಸ್ಎಫ್ ನಡುವೆ ಭೀಕರ ಹೋರಾಟ ನಡೆಯುತ್ತಿದೆ. ಇದರ ಪರಿಣಾಮವಾಗಿ ಕನಿಷ್ಠ 16,650 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸುಡಾನ್​ನಲ್ಲಿ ಅಂದಾಜು 10.7 ಮಿಲಿಯನ್ ಜನ ಈಗ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಸುಮಾರು 2.2 ಮಿಲಿಯನ್ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

ಜಿನೀವಾದಲ್ಲಿ ಶಾಂತಿ ಮಾತುಕತೆ:ಯುನೈಟೆಡ್ ಸ್ಟೇಟ್ಸ್ ಈ ವಾರ ಜಿನೀವಾದಲ್ಲಿ ಸುಡಾನ್ ಕುರಿತು ಶಾಂತಿ ಮಾತುಕತೆಗಳನ್ನು ಮುಂದುವರಿಸಲಿದೆ. ಸುಡಾನ್ ಸೇನೆಯು ಮಾತುಕತೆಯಲ್ಲಿ ಭಾಗವಹಿಸಲಿದೆಯಾ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಮಾತುಕತೆಗಳು ಮುಂದುವರೆಯಲಿವೆ. ಸುಡಾನ್ ಬಿಕ್ಕಟ್ಟನ್ನು ಕೊನೆಗೊಳಿಸಲು ಸ್ವಿಟ್ಜರ್ಲೆಂಡ್​ನಲ್ಲಿ ತುರ್ತು ಅಂತರರಾಷ್ಟ್ರೀಯ ಮಾತುಕತೆಗಳಿಗಾಗಿ ಸೌದಿ ಅರೇಬಿಯಾದಿಂದ ಜಿನೀವಾಗೆ ಆಗಮಿಸಿದ್ದೇನೆ ಎಂದು ಸುಡಾನ್​ನಲ್ಲಿನ ಯುಎಸ್ ವಿಶೇಷ ರಾಯಭಾರಿ ಟಾಮ್ ಪೆರಿಯೆಲ್ಲೊ ಹೇಳಿದ್ದಾರೆ.

ಭಾನುವಾರ, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸುಡಾನ್ ಸರ್ಕಾರ ಮತ್ತು ಯುಎಸ್ ನಡುವಿನ ಮಾತುಕತೆಗಳು ಜಿನೀವಾ ಶಾಂತಿ ಮಾತುಕತೆಗಳಲ್ಲಿ ಸೈನ್ಯ ಅಥವಾ ಸರ್ಕಾರದ ನಿಯೋಗ ಭಾಗವಹಿಸುತ್ತದೆಯೇ ಎಂಬ ಬಗ್ಗೆ ಒಪ್ಪಂದವಿಲ್ಲದೆ ಕೊನೆಗೊಂಡಿತು. ಇದು ಆಗಸ್ಟ್ 14 ರಂದು ಪ್ರಾರಂಭವಾಗಲಿರುವ ಕದನ ವಿರಾಮ ಮಾತುಕತೆಗಳ ಸಫಲತೆಯ ಬಗ್ಗೆ ಅನುಮಾನ ಮೂಡಿಸಿದೆ.

ಇದನ್ನೂ ಓದಿ : ಭಾರತೀಯ ಶಾಕಾಹಾರಿ ಊಟಕ್ಕೆ ಬೇಡಿಕೆ: ಪಾಕಿಸ್ತಾನದ ಕರಾಚಿಯಲ್ಲಿ ಹೊಸ ಟ್ರೆಂಡ್​ - Indian Food in Karachi

ABOUT THE AUTHOR

...view details