ಹೈದರಾಬಾದ್: ವಿದ್ಯಾರ್ಥಿಗಳು ಶಾಲೆಗಳ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಶಿಕ್ಷೆಗೆ ಗುರಿಯಾಗುವುದು ಸಾಮಾನ್ಯ. ಆದರೆ, ಪ್ರಾಂಶುಪಾಲರು ವಿಧಿಸಿದ ಕಠಿಣ ಶಿಕ್ಷೆಯಿಂದಾಗಿ ಯುವತಿಯರು ಗಂಭೀರ ಪರಿಣಾಮಕ್ಕೆ ಒಳಗಾಗಿ ಅಸ್ವಸ್ಥಗೊಂಡಿರುವ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ರಂಪಚೋಡವರಂನಲ್ಲಿ ನಡೆದಿದೆ.
ಏನಿದು ಘಟನೆ?: ಇಲ್ಲಿನ ಎಪಿಆರ್ ಯುವತಿಯರ ಜ್ಯೂನಿಯರ್ ಕಾಲೇಜ್ನ ಪ್ರಾಂಶಪಾಲರಾದ ಪ್ರಸುನಾ ಮತ್ತು ಪಿಡಿ ಕೃಷ್ಣಕುಮಾರಿ ಈ ರೀತಿಯ ಶಿಕ್ಷೆ ನೀಡಿದ್ದಾರೆ. ಕಾಲೇಜಿನ ಮೊದಲ ಮತ್ತು ಎರಡನೇ ವರ್ಷದ ಇಂಟರ್ ವಿದ್ಯಾರ್ಥಿನಿಯರಿಗೆ ಶಿಸ್ತು ಕಲಿಸುವ ಉದ್ದೇಶದಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಸಂಗತಿ ಬಯಲಾಗಿದೆ.
ಶಾಲೆಯ ನಿಯಮಗಳನ್ನು ಪಾಲನೆ ಮಾಡದಿರುವುದಕ್ಕೆ ಶಿಕ್ಷೆ: ವಿದ್ಯಾರ್ಥಿನಿಯರು ಶಾಲೆಗಳ ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆ ಸತತ ನಾಲ್ಕು ದಿನ, ದಿನವೊಂದಕ್ಕೆ 100 ರಿಂದ 200 ಬಸ್ಕಿ ಹೊಡೆಯಬೇಕು ಎಂದು ಆದೇಶಿಸಿದ್ದಾರೆ. ಅದರ ಅನುಸಾರ ವಿದ್ಯಾರ್ಥಿನಿಯರು ಮೂರು ದಿನಗಳ ಕಾಲ 100 ರಿಂದ 200 ಬಸ್ಕಿ ಹೊಡೆದಿದ್ದಾರೆ. ಆದರೆ, ನಾಲ್ಕನೇ ದಿನದ ಬಸ್ಕಿ ವೇಳೆ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಕಾಲಿನ ತೀವ್ರ ನೋವಿನಿಂದಾಗಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಂಬಂಧ ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಕಾಲೇಜಿಗೆ ಆಗಮಿಸಿದ ಪೋಷಕರು ಪ್ರಜ್ಞೆ ತಪ್ಪಿ ಬಿದ್ದ ತಮ್ಮ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಏಕಾಏಕಿ ಅಷ್ಟು ಪ್ರಮಾಣದಲ್ಲಿ ಬಸ್ಕಿ ಹೊಡೆದ ಪರಿಣಾಮ ತೀವ್ರವಾದ ಕಾಲು ನೋವು ಮತ್ತು ದೇಹ ನೋವಿಗೆ ಒಳಗಾಗಿದ್ದು, ಪ್ರಜ್ಞೆ ತಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗೆ ಶಾಸಕರ ಸೂಚನೆ: ಈ ಘಟನೆ ಸಂಬಂಧ ಮಾತನಾಡಿರುವ ರಂಪಚೋಡವರಂ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮಿರಿಯಲ ಶ್ರಿರಿಶಾದೇವಿ ಈ ರೀತಿಯ ಶಿಕ್ಷೆ ನೀಡುವುದು ಖಂಡನಾರ್ಹವಾಗಿದ್ದು, ಇದು ಹೀನ ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯುವತಿಯರನ್ನು ಶಿಸ್ತು ಎಂಬ ಹೆಸರಿನಲ್ಲಿ ಈ ರೀತಿಯ ಕಠಿಣ ಶಿಕ್ಷೆಗೆ ಒಳಪಡಿಸಬಾರದು. ಈ ಸಂಬಂಧ ನಿಗದಿತ ಕಾಲದೊಳಗೆ ತನಿಖೆಗೆ ನಡೆಸಿ ವರದಿ ನೀಡುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಈ ನಡುವೆ ಮಕ್ಕಳು ಅಸ್ವಸ್ಥಗೊಂಡಿರುವ ವಿಚಾರ ಸಂಬಂಧ ಪ್ರಿನ್ಸಿಪಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ನಡುವೆ ಐಟಿಡಿಎ ಅಧಿಕಾರಿ ಕಟ್ಟಾ ಸಿಮ್ಹಾಚಲಂ ಕೂಡ ಘಟನೆ ಸಂಬಂದ ತನಿಖೆಗೆ ಆಗ್ರಹಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿರುವ ಅವರು ವಿದ್ಯಾರ್ಥಿಗಳಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಈ ಗ್ರಾಮಕ್ಕಿಲ್ಲ ರಸ್ತೆ: ತುಂಬು ಗರ್ಭಿಣಿಯರನ್ನ 6 ಕಿಮೀ ಹೊತ್ತು ತಂದು ಆಸ್ಪತ್ರೆಗೆ ಸೇರಿಸಿದ ಊರಿನ ಜನ