ಇಸ್ಲಾಮಾಬಾದ್(ಪಾಕಿಸ್ತಾನ): ಶಾಂಘೈ ಸಹಕಾರ ಒಕ್ಕೂಟ (ಎಸ್ಸಿಒ) ಸರ್ಕಾರಗಳ ಮುಖ್ಯಸ್ಥರ ಮಂಡಳಿಯ 23ನೇ ಸಭೆಯಲ್ಲಿ ಭಾಗವಹಿಸಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ಆಗಮಿಸಿದರು. ಎಸ್ಸಿಒ ಸಿಎಚ್ಜಿ ಸಭೆ ಬುಧವಾರ ಬಿಗಿ ಭದ್ರತೆಯ ಮಧ್ಯೆ ಇಸ್ಲಾಮಾಬಾದ್ನಲ್ಲಿ ಪ್ರಾರಂಭವಾಗಲಿದೆ.
ಈ ಸಭೆಯಲ್ಲಿ ಒಕ್ಕೂಟದ ವ್ಯಾಪಾರ ಮತ್ತು ಆರ್ಥಿಕ ಕಾರ್ಯಸೂಚಿಯ ಮೇಲೆ ಪ್ರಮುಖವಾಗಿ ಚರ್ಚಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
"ಎಸ್ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (ಸಿಎಚ್ಜಿ)ನ 23ನೇ ಸಭೆ 2024ರ ಅಕ್ಟೋಬರ್ 16 ರಂದು ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನದ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರತಿವರ್ಷ ನಡೆಯುವ ಎಸ್ಸಿಒ ಸಿಎಚ್ಜಿ ಸಭೆಯಲ್ಲಿ ಒಕ್ಕೂಟದ ವ್ಯಾಪಾರ ಮತ್ತು ಆರ್ಥಿಕ ಕಾರ್ಯಸೂಚಿಯ ಮೇಲೆ ಪ್ರಮುಖವಾಗಿ ಚರ್ಚೆಗಳು ನಡೆಯುತ್ತವೆ" ಎಂದು ಎಂಇಎ ಹೇಳಿದೆ.
"ಎಸ್ಸಿಒದ ಸಭೆಯಲ್ಲಿ ಜೈಶಂಕರ್ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಎಸ್ಸಿಒ ಚೌಕಟ್ಟಿನೊಳಗೆ ವಿವಿಧ ಕಾರ್ಯವಿಧಾನಗಳು ಮತ್ತು ಉಪಕ್ರಮಗಳು ಸೇರಿದಂತೆ ಎಸ್ಸಿಒದ ಸ್ವರೂಪದಲ್ಲಿ ಭಾರತ ಸಕ್ರಿಯವಾಗಿ ತೊಡಗಿಸಿಕೊಂಡಿದೆ" ಎಂದು ಪ್ರಕಟಣೆ ತಿಳಿಸಿದೆ.
ಸಚಿವ ಜೈಶಂಕರ್ ಅವರು ಇಸ್ಲಾಮಾಬಾದ್ನಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆಯೇ ಸ್ಪಷ್ಟಪಡಿಸಿದೆ. ಎಸ್ಸಿಒದ ಪ್ರಮುಖ ಸದಸ್ಯನಾಗಿ ಮಾತ್ರ ನಾನು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿದ್ದೇನೆ ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ.
ದೇಶ-ವಿದೇಶಗಳ ನೂರಾರು ಗಣ್ಯವ್ಯಕ್ತಿಗಳು ಇಸ್ಲಾಮಾಬಾದ್ಗೆ ಆಗಮಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ. ಶೃಂಗಸಭೆಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಭೆ ನಡೆಯುವ ಸ್ಥಳ, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ಕೆಂಪು ವಲಯ ಪ್ರದೇಶವನ್ನು ರಕ್ಷಿಸಲು ಪಾಕಿಸ್ತಾನ ಸೇನೆಯನ್ನು ನಿಯೋಜಿಸಲಾಗಿದೆ.
ಹೆಚ್ಚುವರಿಯಾಗಿ, ರಾಜಧಾನಿಯಾದ್ಯಂತ ರೇಂಜರ್‌ಗಳನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ವ್ಯಾಪಾರ ವ್ಯವಹಾರಗಳನ್ನು ಕೂಡ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಪ್ರಮುಖ ಮಾರ್ಗಗಳನ್ನು ಸಹ ಮುಚ್ಚಲಾಗಿದೆ. ಇಸ್ಲಾಮಾಬಾದ್ನಲ್ಲಿ ಸದ್ಯ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸಲಿರುವ ಸುಮಾರು 900 ಪ್ರತಿನಿಧಿಗಳ ಭದ್ರತೆಗಾಗಿ ಸರ್ಕಾರ 10,000ಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಿದೆ. ಪ್ರತಿನಿಧಿಗಳು 'ಕೆಂಪು ವಲಯ'ದ ಒಳಗೆ ಅಥವಾ ಸುತ್ತಮುತ್ತಲಿನ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಉಳಿದುಕೊಳ್ಳಲಿದ್ದಾರೆ. ರಾಜಧಾನಿಯ 14 ಸ್ಥಳಗಳಲ್ಲಿ ಅವರ ವಸತಿಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಡಾನ್ ವರದಿ ಮಾಡಿದೆ. ಅತಿಥಿಗಳ ಪ್ರಯಾಣಕ್ಕಾಗಿ 124 ವಾಹನಗಳನ್ನು ಸಜ್ಜುಗೊಳಿಸಲಾಗಿದೆ. 84 ವಾಹನಗಳು ರಾಷ್ಟ್ರಗಳ ಮುಖ್ಯಸ್ಥರಿಗೆ ಬೆಂಗಾವಲು ನೀಡಲಿದ್ದು, 40 ವಾಹನಗಳು ಇತರ ಪ್ರತಿನಿಧಿಗಳಿಗೆ ಸೇವೆ ಸಲ್ಲಿಸಲಿವೆ.
ಇದನ್ನೂ ಓದಿ:ಭಾರತ, ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣ, ಹಿನ್ನೆಲೆಯೇನು? ಸಂಪೂರ್ಣ ಮಾಹಿತಿ