ಪೇಶಾವರ, ಪಾಕಿಸ್ತಾನ:ಪಾಕಿಸ್ತಾನದ ಖೈಬರ್ ಕಣಿವೆಯ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬಜೌರ್ ಜಿಲ್ಲೆಯ ಮುಲ್ಲಾ ಸೈದ್ ಬಂದಾ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಭಯೋತ್ಪಾದಕರೊಂದಿಗಿನ ಘರ್ಷಣೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ 11 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಪೊಲೀಸರು ತಿಳಿಸಿದ್ದಾರೆ. ಉಗ್ರರ ನಡುವೆಯೂ ಸಾವು ನೋವುಗಳು ಸಂಭವಿಸಿವೆ. ಆದರೆ ತಕ್ಷಣಕ್ಕೆ ನಿಖರವಾದ ಸಾವಿನ ಸಂಖ್ಯೆ ತಿಳಿದಿಲ್ಲ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ 13 ಉಗ್ರರ ಸಾವು:ಗುರುವಾರ ಪಾಕ್ ಸೇನೆ ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಗಳ ವೇಳೆ ಪಾಕಿಸ್ತಾನಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿದ್ದು, 13 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ ಮಿಲಿಟರಿಯ ಮಾಧ್ಯಮ ವಿಭಾಗ ಮಾಹಿತಿ ನೀಡಿತ್ತು