ಟೆಲ್ ಅವೀವ್: ಇಸ್ರೇಲ್ನ ಉತ್ತರ ಭಾಗದಲ್ಲಿರುವ ಫುಟ್ಬಾಲ್ ಮೈದಾನದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ 11 ಮಕ್ಕಳು, ಯುವಕರು ಸಾವಿಗೀಡಾಗಿದ್ದು, ಇನ್ನೂ ಹಲವಾರು ಜನ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಇಸ್ರೇಲ್ನ ಉತ್ತರ ದಿಕ್ಕಿನ ಗಡಿಯಲ್ಲಿ ಇಸ್ರೇಲ್ ಮತ್ತು ಲೆಬನಾನ್ನ ಹಿಜ್ಬುಲ್ಲಾ ಉಗ್ರವಾದಿಗಳ ಗುಂಪಿನ ನಡುವೆ ಆರಂಭವಾದ ಸಂಘರ್ಷದ ನಂತರ ಇದು ಇಸ್ರೇಲ್ ಮೇಲೆ ನಡೆದ ಅತ್ಯಂತ ದೊಡ್ಡ ದಾಳಿಯಲ್ಲಿ ಒಂದಾಗಿದೆ. ಇದರಿಂದ ಇಸ್ರೇಲ್ ಹಿಜ್ಬುಲ್ಲಾ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಆರಂಭಿಸುವ ಆತಂಕ ಎದುರಾಗಿದೆ.
ನಮ್ಮ ಪಾತ್ರವಿಲ್ಲ-ಹಿಜ್ಬುಲ್ಲಾ: ಇಸ್ರೇಲಿ ನಿಯಂತ್ರಿತ ಗೋಲನ್ ಹೈಟ್ಸ್ ಮೇಲೆ ನಡೆದ ಈ ದಾಳಿಗೆ ಹಿಜ್ಬುಲ್ಲಾ ಕಾರಣ ಎಂದು ಇಸ್ರೇಲ್ ದೂಷಿಸಿದೆ. ಆದರೆ ಈ ದಾಳಿಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
ನೆತನ್ಯಾಹು ಎಚ್ಚರಿಕೆ: ಈ ದಾಳಿ ಮಾಡಿದ್ದಕ್ಕೆ ಹಿಜ್ಬುಲ್ಲಾ ಈ ಹಿಂದೆ ಎಂದೂ ನೋಡಿರದಷ್ಟು ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಗಾಜಾದ ಮೇಲೆ ಇಸ್ರೇಲ್ ಯುದ್ಧ ಆರಂಭಿಸಲು ಕಾರಣವಾಗಿದ್ದ ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ ಇಸ್ರೇಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಇಸ್ರೇಲ್ ಮಿಲಿಟರಿಯ ಮುಖ್ಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ದಾಳಿಯಲ್ಲಿ ಕನಿಷ್ಠ 20 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
"ಹಿಜ್ಬುಲ್ಲಾ ಎಲ್ಲಾ ಮಿತಿಗಳನ್ನು ಮೀರಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಮತ್ತು ಅದಕ್ಕೆ ಪ್ರತಿಕ್ರಿಯೆಯನ್ನು ನೋಡಲಿದೆ. ಪೂರ್ಣ ಪ್ರಮಾಣದ ಯುದ್ಧ ಆರಂಭವಾಗುವ ಸಮಯ ಹತ್ತಿರವಾಗುತ್ತಿದೆ" ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಇಸ್ರೇಲಿ ಚಾನೆಲ್ 12 ಗೆ ತಿಳಿಸಿದರು.
ಮಜ್ದಾಲ್ ಶಮ್ಸ್ ಮೇಲೆ ನಡೆದ ದಾಳಿಯ ಹಿಂದೆ ತನ್ನ ಕೈವಾಡವಿಲ್ಲ ಎಂದು ಹಿಜ್ಬುಲ್ಲಾ ಮುಖ್ಯ ವಕ್ತಾರ ಮೊಹಮ್ಮದ್ ಅಫಿಫ್ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದ್ದಾರೆ. ಆದರೆ ಹಿಜ್ಬುಲ್ಲಾ ದಾಳಿಯನ್ನು ನಿರಾಕರಿಸಿದ್ದು ಅಸಾಮಾನ್ಯವಾಗಿದೆ.
ಸದ್ಯ ಪ್ರಧಾನಿ ನೆತನ್ಯಾಹು ಅಮೆರಿಕ ಪ್ರವಾಸದಲ್ಲಿದ್ದು, ಭೇಟಿಯನ್ನು ಮೊಟಕುಗೊಳಿಸಿ ಶೀಘ್ರದಲ್ಲೇ ಇಸ್ರೇಲ್ಗೆ ಮರಳುವುದಾಗಿ ಅವರು ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆ ತಿಳಿಸಿದೆ. ಪ್ರಧಾನಿಯ ಆಗಮನದ ನಂತರ ರಕ್ಷಣಾ ಕ್ಯಾಬಿನೆಟ್ನ ಸಭೆ ನಡೆಯಲಿದೆ ಎಂದು ಅದು ಹೇಳಿದೆ. ಹಿಜ್ಬುಲ್ಲಾ ವಿರುದ್ಧ ಅತ್ಯಂತ ಕಠಿಣ ದಾಳಿ ನಡೆಸಬೇಕೆಂದು ನೆತನ್ಯಾಹು ಸರ್ಕಾರದಲ್ಲಿನ ಬಲಪಂಥೀಯರು ಆಗ್ರಹಿಸಿದ್ದಾರೆ.
ಗೋಲನ್ ಹೈಟ್ಸ್ನ ಮಜ್ದಾಲ್ ಶಮ್ಸ್ ಪ್ರದೇಶದ ಡ್ರೂಜ್ ಪಟ್ಟಣದ ಮೇಲೆ ರಾಕೆಟ್ಗಳು ಅಪ್ಪಳಿಸಿ ದೊಡ್ಡ ಪ್ರಮಾಣದ ಸ್ಫೋಟಗಳು ಸಂಭವಿಸಿರುವ ದೃಶ್ಯಗಳನ್ನು ಇಸ್ರೇಲ್ನ್ ಚಾನೆಲ್ 12 ಪ್ರಸಾರ ಮಾಡಿದೆ. 1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಗೋಲನ್ ಹೈಟ್ಸ್ ಅನ್ನು ಸಿರಿಯಾದಿಂದ ಇಸ್ರೇಲ್ ವಶಪಡಿಸಿಕೊಂಡಿತ್ತು. ನಂತರ 1981 ರಲ್ಲಿ ಅದನ್ನು ತನ್ನ ದೇಶದ ಭಾಗವಾಗಿ ಘೋಷಿಸಿತ್ತು.
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ರನಿಲ್ ವಿಕ್ರಮಸಿಂಘೆ ನಿರ್ಧಾರ - elections in Sri Lanka