ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರು ಮತ್ತು ಯುವಪೀಳಿಗೆಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಧೂಮಪಾನ! ಮಹಿಳೆಯರು ಮತ್ತು ಯುವಪೀಳಿಗೆ ಧೂಮಪಾನದ ಗೀಳಿಗೆ ಬಿದ್ದು ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇನ್ನು ಅತಿಯಾದ ಧೂಮಪಾನದಿಂದ ಹೊರಬರುವ ಹೊಗೆಯಿಂದಾಗಿ ಮಾಲಿನ್ಯ ಮಟ್ಟ ಹೆಚ್ಚಾಗುತ್ತಿದ್ದು, ಧೂಮಪಾನ ಮಾಡದೇ ಇರುವ ಮತ್ತು ಕಡಿಮೆ ಧೂಮಪಾನ ಮಾಡುತ್ತಿರುವ ವ್ಯಕ್ತಿಗಳಲ್ಲಿಯೂ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶ್ವ ಶ್ವಾಸಕೋಶ ದಿನದ ಹಿನ್ನೆಲೆಯಲ್ಲಿ ಈ ಆತಂಕಕಾರಿ ಅಂಶಗಳ ಹೊರಬಿದ್ದಿವೆ.
ಸಂಪ್ರದ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ನ ಮೆಡಿಕಲ್ ಅಂಕಾಲಾಜಿಸ್ಟ್ ಅಂಡ್ ಹೆಮಟಾಲಾಜಿಸ್ಟ್ ಡಾ.ರಾಧೇಶ್ಯಾಂ ನಾಯಕ್ ಅವರು ಕ್ಯಾನ್ಸರ್ ಕಾಯಿಲೆ ಬಗ್ಗೆ ಮಾಹಿತಿ ನೀಡಿದ್ದಾರೆ. 'ಶೇ.80 ಕ್ಕಿಂತಲೂ ಅಧಿಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಧೂಮಪಾನ ಮತ್ತು ತಂಬಾಕಿನ ಇತರ ಮಾದರಿಯ ಬಳಕೆಯಿಂದ ಬರುತ್ತಿವೆ. ಧೂಮಪಾನದ ಅವಧಿ ಮತ್ತು ದಿನಕ್ಕೆ ಒಬ್ಬರು ಸೇದುವ ಸಿಗರೇಟುಗಳ ಸಂಖ್ಯೆಯೊಂದಿಗೆ ಅಪಾಯದ ಮಟ್ಟವೂ ಹೆಚ್ಚಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮಾಡುವುದು ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಧೂಮಪಾನದ ಜೊತೆಗೆ ಕಲ್ಲುನಾರಿನಂತಹ ಕಾರ್ಸಿನೋಜೆನ್ಗಳಿಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಕ್ಯಾನ್ಸರ್ ಗಂಭೀರ ಸ್ವರೂಪಕ್ಕೆ ತಿರುಗಿ ಅಪಾಯವನ್ನು ಹಲವಾರು ಪಟ್ಟು ಹೆಚ್ಚು ಮಾಡುತ್ತದೆ. ಪ್ಯಾಸಿವ್ ಸ್ಟೋಕಿಂಗ್ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಇದರ ಪ್ರಮಾಣ ಶೇ.5 ರಷ್ಟಿರುತ್ತದೆ. ಅಲ್ಲದೇ ವಾಹನ ದಟ್ಟಣೆ ಮತ್ತು ಮನೆಯ ಅಡುಗೆ ಕೋಣೆಯಲ್ಲಿ ಬಳಸುವ ಉರುವಲು ಅಥವಾ ಇಂಧನಗಳನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯದಿಂದ ಧೂಮಪಾನ ಮಾಡದಿದ್ದವರಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುತ್ತದೆ' ಎಂದು ತಿಳಿಸಿದ್ದಾರೆ.
'ಪ್ರತಿ 1 ಲಕ್ಷ ಜನರಲ್ಲಿ ಶೇ.5.6 ಜನರಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.5.9 ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾದರೆ, ಕ್ಯಾನ್ಸರ್ ಸಂಬಂಧಿ ಮರಣ ಪ್ರಮಾಣ ಶೇ.8 ರಷ್ಟಿದೆ. ಶ್ವಾಸಕೋಶ ಕ್ಯಾನ್ಸರ್ ಜೀವನದ 4 ಮತ್ತು 5 ನೇ ದಶಕದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪೈಕಿ ಅತ್ಯಧಿಕ ಶ್ವಾಸಕೋಶ ಕ್ಯಾನ್ಸರ್ ಕಂಡುಬರುವುದು 55 ರಿಂದ 64 ವರ್ಷದ ಜನರಲ್ಲಿ. ಹೀಗೆ ಶ್ವಾಸಕೋಶ ಕ್ಯಾನ್ಸರ್ ಬಂದ ವ್ಯಕ್ತಿಗಳು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷದವರೆಗೆ ಬದುಕಬಲ್ಲರು. ಕೇವಲ ಶೇ.10-15 ರಷ್ಟು ರೋಗಿಗಳು 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಬದುಕಬಲ್ಲರು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಪ್ರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಿವೆಂಟಿವ್ ಅಂಕಾಲಾಜಿಸ್ಟ್ ಡಾ.ವಿನೋದ್ ಕೆ.ರಮಣಿ ಮಾತನಾಡಿ, ಬಹುತೇಕ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳನ್ನು 3 ಮತ್ತು 4 ನೇ ಹಂತ ತಲುಪಿದಾಗ ಪತ್ತೆ ಮಾಡಲಾಗುತ್ತದೆ. ಆ ವೇಳೆಯಲ್ಲಿ ಕ್ಯಾನ್ಸರ್ ರೋಗವು ಗಂಭೀರ ಸ್ವರೂಪಕ್ಕೆ ತಿರುಗಿರುತ್ತದೆ. ಇನ್ನು 1 ಮತ್ತು 2 ನೇ ಹಂತದಲ್ಲಿದ್ದಾಗ ರೋಗ ಪತ್ತೆ ಕೇವಲ ಶೇ.20-30 ರಷ್ಟಾಗಿದೆ ಎಂದಿದ್ದಾರೆ.