ಬೆಂಗಳೂರು:ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಹೊಗೆ ಸೇವನೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಧೂಮಪಾನದಿಂದ ಫಸ್ಟ್ ಹ್ಯಾಂಡ್ ಹೊಗೆ ಸೇವನೆ ಮಾಡುತ್ತಿದ್ದರೆ, ಧೂಮಪಾನ ಮಾಡುವವರ ಸುತ್ತಲೂ ಇರುವವರು ಸೆಕೆಂಡ್ ಹ್ಯಾಂಡ್ ಮತ್ತು ಥರ್ಡ್ ಹ್ಯಾಂಡ್ ಹೊಗೆ ಸೇವಿಸುತ್ತಿದ್ದಾರೆ.
ಫಸ್ಟ್ ಹ್ಯಾಂಡ್ ಸ್ಮೋಕ್ ಎಂದರೇನು?: ನೇರವಾಗಿ ವಿವಿಧ ರೀತಿಯ ಧೂಮಪಾನ ಮಾಡುವವರಿಗೆ ಕಲುಷಿತ ಹೊಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಲಂಗ್ ಕ್ಯಾನ್ಸರ್ ಉಂಟುಮಾಡುತ್ತದೆ. ಇವರನ್ನು ಫಸ್ಟ್‌ಹ್ಯಾಂಡ್ ಹೊಗೆ ಸೇವಕರು ಎನ್ನಲಾಗುತ್ತದೆ. ಇಂದು ಸಾಕಷ್ಟು ಜನರು ಲಿಂಗ ಬೇಧವಿಲ್ಲದೆ ಧೂಮಪಾನ ಮಾಡುತ್ತಿದ್ದಾರೆ. ಅಂಥವರಿಗೆ ಕ್ಯಾನ್ಸರ್ ಬರುವ ಪ್ರಮಾಣ ಶೇ.85ರಷ್ಟಿದೆ. ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಧೂಮಪಾನಕ್ಕೆ ಸಂಬಂಧಿಸಿವೆ ಎಂದು ಅಧ್ಯಯನಗಳು ತೋರಿಸಿವೆ.
ವೈದ್ಯರ ಮಾತು: ತಂಬಾಕು ಹೊಗೆಯಲ್ಲಿರುವ ಕಾರ್ಸಿನೋಜೆನ್‌ಗಳು ಶ್ವಾಸಕೋಶದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ನೇರವಾಗಿ ಕಾರಣವಾಗುತ್ತಿವೆ. ಕ್ಯಾನ್ಸರ್ ಹೊರತಾಗಿ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಗೆ ಧೂಮಪಾನ ಒಂದು ಪ್ರಮುಖ ಕಾರಣ. ಇದು ಒಟ್ಟಾರೆ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ ಹಿರಿಯ ನಿರ್ದೇಶಕಿ ಡಾ.ನಿತಿ ರೈಜಾಡಾ ಹೇಳಿದ್ದಾರೆ.
ಸೆಕೆಂಡ್ ಹ್ಯಾಂಡ್ ಸ್ಮೋಕ್ ಎಂದರೇನು?:ಸೆಕೆಂಡ್ ಹ್ಯಾಂಡ್ ಹೊಗೆ ಅಥವಾ ನಿಷ್ಕ್ರಿಯ ಹೊಗೆ ಸೇವಕರೆಂದರೆ, ಧೂಮಪಾನಿಗಳ ಸಮೀಪ ಇರುವವರು. ಹೌದು, ಸಾಕಷ್ಟು ಜನರು ಸಿಗರೇಟು ಸೇದುವವರ ಜೊತೆ ನಿಲ್ಲುತ್ತಾರೆ. ತಾವು ಸೇದುವುದಿಲ್ಲ ಎಂದುಕೊಳ್ಳಬಹುದು. ಆದರೆ, ಸಿಗರೇಟಿನ ಹೊಗೆ ಹಾಗೂ ಸಿಗರೇಟು ಸೇದುವವರ ಉಸಿರಾಟವು ಎದುರಿನ ವ್ಯಕ್ತಿ ಮೇಲೆ ಪರಿಣಾಮ ಬೀರುತ್ತದೆ. ಸಿಗರೇಟಿನ ನೇರ ಸಂಪರ್ಕವಿಲ್ಲದಿದ್ದರೂ ಸಹ ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಅಮೆರಿಕದ ಸರ್ಜನ್ ಜನರಲ್ ಸಂಶೋಧನೆಯಲ್ಲಿ ಸೆಕೆಂಡ್ ಹ್ಯಾಂಡ್ ಹೊಗೆಗೆ ಯಾವುದೇ ಸುರಕ್ಷಿತ ಮಟ್ಟದ ಮಾನ್ಯತೆ ಇಲ್ಲ ಎಂದು ದೃಢಪಡಿಸಲಾಗಿದೆ.