ನವದೆಹಲಿ: ಹವಾಮಾನ ವೈಪರೀತ್ಯದ ಪರಿಣಾಮಗಳು ಭವಿಷ್ಯದ ದಿನಗಳಲ್ಲಿ ಮತ್ತಷ್ಟು ತೀವ್ರವಾಗುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಜಗತ್ತಿನೆಲ್ಲೆಡೆ ಇಂಗಾಲದ ಹೊರಸೂಸುವಿಕೆ ಹೆಚ್ಚುತ್ತಿದೆ. ಇದು ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. 2050ರ ವೇಳೆಗೆ ಮಹಿಳೆಯರು ಉದ್ಯೋಗ, ವೃತ್ತಿ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದು. ಗೃಹ ಬಳಕೆಗೆ ನೀರು ಸಂಗ್ರಹಿಸುವ ಹೊರೆ ಅವರ ಮೇಲೆ ಮತ್ತಷ್ಟು ಹೆಚ್ಚಲಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಹೆಚ್ಚುತ್ತಿರುವ ಹವಾಮಾನ ಬದಲಾವಣೆಯಿಂದ ದಕ್ಷಿಣ ಅಮೆರಿಕ ಮತ್ತು ಆಗ್ನೇಯ ಏಷ್ಯಾದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದಾಗಿ ಮಳೆಯ ಪ್ರಮಾಣ ತಗ್ಗುತ್ತಿದೆ. ಇದು ಜೀವಜಲ ಸಂಗ್ರಹದ ಕಾರ್ಯದ ಸಮಯ ಏರಿಸುತ್ತದೆ ಎಂದು ಜರ್ನಲ್ ನೇಚರ್ ಕ್ಲೈಮೆಂಟ್ ಚೇಂಜ್ ತನ್ನ ವರದಿಯಲ್ಲಿ ಎಚ್ಚರಿಸಿದೆ.
ಜಾಗತಿಕವಾಗಿ, 1990ರಿಂದ 2019ರವರೆಗೆ ಮಹಿಳೆಯರು ಮನೆ ಬಳಕೆಗೆ ನೀರು ಸಂಗ್ರಹಣೆಗಾಗಿ ಬಳಸುವ ಸಮಯವನ್ನು ಪರೀಕ್ಷಿಸಲಾಗಿದೆ. ಈ ಕುರಿತು ಜರ್ಮನಿಯ ಪೊಟ್ಸ್ಡ್ಯಾಮ್ ಇನ್ಸುಟಿಟ್ಯೂಟ್ ಫಾರ್ ಕ್ಲೈಮೆಟ್ ಇಂಪಾರ್ಕಟ್ ರಿಸರ್ಚ್ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಮನೆಗೆ ನೀರು ಸಂಗ್ರಹಿಸುವುದು ಮಹಿಳೆಯರ ಪ್ರಾಥಮಿಕ ಜವಾಬ್ದಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ನೀರು ಸಂಗ್ರಹಣೆಗೆ 23 ನಿಮಿಷ ವ್ಯಯಿಸುತ್ತಿದ್ದಾರೆ ಎಂಬುದನ್ನು ಅದು ಕಂಡುಕೊಂಡಿದೆ.