ಮಂಗಳೂರು:ಕೋವಿಡ್- 19 ಕಾಯಿಲೆಯಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೊಂದು ಸಾಂಕ್ರಾಮಿಕ ರೋಗವು ವಿಶ್ವವನ್ನು ಕಾಡುತ್ತಿದೆ. ಆ ಮಹಾಮಾರಿಯೇ ಮಂಕಿಪಾಕ್ಸ್ ಅಥವಾ ಮಂಗನ ಕಾಯಿಲೆ. ಆಫ್ರಿಕಾದ ಮಧ್ಯಭಾಗದಲ್ಲಿ ಹಬ್ಬುತ್ತಿದೆ. ಯುರೋಪಿಯನ್ ಖಂಡದ ಸ್ವೀಡನ್ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ಒ) ಈಗಾಗಲೇ ಮಂಗನ ಕಾಯಿಲೆಗೆ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನೂ ಘೋಷಣೆ ಮಾಡಿದೆೆ. ಆಫ್ರಿಕಾದಲ್ಲಿ ದೇಶದಲ್ಲಿ ಆತಂಕ ಸೃಷ್ಟಿಸಿದ ಮಂಕಿಪಾಕ್ಸ್ನ ಎರಡು ಪ್ರಕರಣ ಭಾರತ ದೇಶದಲ್ಲೂ ಪತ್ತೆಯಾಗಿದೆ. ಈ ಮಂಗನ ಕಾಯಿಲೆಯ ಎಷ್ಟು ವಿಧಗಳಿವೆ? ಈ ರೋಗದ ಲಕ್ಷಣಗಳೇನು? ಇದು ಹೇಗೆ ಹರಡುತ್ತದೆ? ಎಂಬುದರ ವಿವರಗಳು ತಿಳಿಯೋಣ.
ಮಂಕಿ ಪಾಕ್ಸ್ ಮಂಗನಿಂದ ಹರಡಿದ ಖಾಯಿಲೆ ಅಲ್ಲ!:ಮಂಕಿ ಪಾಕ್ಸ್ ಎಂಬುದು ಮಂಗನಿಂದ ಹರಡುವ ಖಾಯಿಲೆ ಎಂಬ ತಪ್ಪು ಕಲ್ಪನೆ ಇದೆ. ಇದರ ಹೆಸರಿನಲ್ಲಿ ಮಂಕಿ ಎಂಬುದು ಇರುವುದರಿಂದ ಈ ತಪ್ಪು ಕಲ್ಪನೆಯಿದೆ. ವಾಸ್ತವವಾಗಿ ಇದೊಂದು ವೈರಸ್ನಿಂದ ಹರಡುವ ಖಾಯಿಲೆ. ಈ ಖಾಯಿಲೆ ಸಂಶೋಧನೆ ಮಾಡುವಾಗ ಇದು ಮಂಗನಲ್ಲಿ ಕಾಣಿಸಿಕೊಂಡ ಕಾರಣ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. ಈ ವೈರಸ್ ಉಳಿದ ಪ್ರಾಣಿಗಳಲ್ಲೂ ಕಂಡು ಬರುತ್ತದೆ.
ಮಂಕಿ ಪಾಕ್ಸ್ ಎಂದರೇನು?:ಮಂಕಿ ಪಾಕ್ಸ್ ಎಂಬುದು ವೈರಸ್ನಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಮೊದಲ ಬಾರಿಗೆ 1958ರಲ್ಲಿ ಡೆನ್ಮಾರ್ಕ್ನಲ್ಲಿ ಪತ್ತೆಯಾಯಿತು. ಇದು ಸಿಡುಬು ರೋಗವನ್ನು ಹೋಲುತ್ತದೆ. "ಮಂಕಿಪಾಕ್ಸ್ ವೈರಸ್" ಎಂದು ಕರೆಯಲಾಗಿದ್ದರೂ ಈ ವೈರಸ್ ಮೂಲವು ಇನ್ನೂ ತಿಳಿದಿಲ್ಲ. ಅಳಿಲು, ಸಸ್ತನಿಗಳಲ್ಲಿ ಈ ವೈರಸ್ ಕಂಡು ಬರುತ್ತದೆ. ಈ ವೈರಸ್ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎರಡು ಬಾರಿ ಮಂಕಿ ಪಾಕ್ಸ್ ಹರಡುವಿಕೆ ಬಗ್ಗೆ ಎಚ್ಚರಿಕೆ ನೀಡಿದೆ. 2022ರಲ್ಲಿ 70 ಕ್ಕೂ ಹೆಚ್ಚು ದೇಶಗಳಿಗೆ ಮಂಕಿ ಪಾಕ್ಸ್ ಹರಡಿತ್ತು. ಈ ವರ್ಷದ ಮಂಕಿ ಪಾಕ್ಸ್ ಹೊಸ ರೂಪಾಂತರವು ಕಾಂಗೋ ಮತ್ತು ನೆರೆಯ ದೇಶಗಳಲ್ಲಿ ಕಾಣಿಸಿಕೊಂಡಿದೆ. ಮಧ್ಯ ಆಫ್ರಿಕಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ನೆರೆಹೊರೆಯ ದೇಶಗಳಲ್ಲಿ ಮಂಕಿ ಪಾಕ್ಸ್ (Monkey Pox) ವೈರಸ್ನ ಹೊಸ ರೂಪಾಂತರದ ಆತಂಕ ಮೂಡಿಸಿದೆ.
ಚಿಕಿತ್ಸೆ:ಇದಕ್ಕೆ ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಗಳಿಲ್ಲ. ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ್ದರೆ ಮತ್ತು ಚರ್ಮ ರೋಗವನ್ನು ಹೊಂದಿಲ್ಲದಿದ್ದರೆ ನೋವು ನಿವಾರಣೆ ಸೇರಿದಂತೆ ಸೂಕ್ತವಾದ ವೃತ್ತಿಪರ ಆರೈಕೆ ಚೇತರಿಸಿಕೊಳ್ಳಬಹುದು. ರಾಜ್ಯದಲ್ಲಿ ಈವರೆಗೆ ಒಂದೂ ಮಂಕಿ ಪಾಕ್ಸ್ ಪ್ರಕರಣ ವರದಿಯಾಗಿಲ್ಲ.
ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸವೇನು?:ಮಂಕಿ ಪಾಕ್ಸ್ ಕಾಯಿಲೆಯು ಚಿಕನ್ ಪಾಕ್ಸ್ ಖಾಯಿಲೆಯನ್ನು ಹೋಲುತ್ತದೆ. ದೇಶದಲ್ಲಿ ಸಾಮಾನ್ಯವಾಗಿರುವ ಚಿಕನ್ ಪಾಕ್ಸ್ ಮತ್ತು ಮಂಕಿ ಪಾಕ್ಸ್ಗೂ ಸಾಕಷ್ಟು ವ್ಯತ್ಯಾಸವಿದೆ. ಚಿಕನ್ ಪಾಕ್ಸ್ನಲ್ಲಿ ಮೈ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಂಡರೆ, ಮಂಕಿಪಾಕ್ಸ್ನಲ್ಲಿ ಸ್ವಲ್ಪ ದೊಡ್ಡ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.
ಚಿಕನ್ ಪಾಕ್ಸ್ ಚಿಕ್ಕ ಮಟ್ಟದಲ್ಲಿ ಹರಡಿದರೆ, ಮಂಕಿಪಾಕ್ಸ್ ದೊಡ್ಡ ಮಟ್ಟದಲ್ಲಿ ಹರಡುವಿಕೆ ಪ್ರಮಾಣವನ್ನು ಹೊಂದಿದೆ. ಚಿಕನ್ ಪಾಕ್ಸ್ನ ಕಲೆಗಳು ಕೆಲಸಮಯದ ಬಳಿಕ ಅಳಿಸಿಹೋದರೆ, ಮಂಕಿ ಪಾಕ್ಸ್ನ ಕಲೆಗಳು ಮೈ ಮೇಲೆ ಧೀರ್ಘ ಕಾಲದವರೆಗೆ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಈ ರೋಗ ಹೇಗೆ ಹರಡುತ್ತೆ?:ಕಣ್ಣು, ಬಾಯಿ, ಚರ್ಮ, ಮೂಗಿನಿಂದ ಸ್ರವಿಸುವ ದ್ರವ ಮತ್ತು ಉಸಿರಾಟದ ಮೂಲಕ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಎಂಪಾಕ್ಸ್ ಇರುವ ಜನರ ನಿಕಟ ಸಂಪರ್ಕಕ್ಕೆ ಬಂದಾಗ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುವ ಮುನ್ನವೇ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.