ಹೈದರಾಬಾದ್: ನಮ್ಮ ದೇಹವನ್ನು ಗಟ್ಟಿಮುಟ್ಟಾಗಿರುವಂತೆ ನೋಡಿಕೊಳ್ಳಬೇಕು ಎಂದರೆ ಉತ್ತಮ ಆಹಾರವನ್ನು ಸೇವಿಸಬೇಕಾಗುತ್ತದೆ. ಅದಕ್ಕಾಗಿ ವೈದ್ಯರು ವಿವಿಧ ಆಹಾರಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಈ ಋತುವಿನಲ್ಲಿ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಇದನ್ನು ಸೂಪರ್‌ಫುಡ್ ಅಂತಾನೂ ಕರೆಯಲಾಗುತ್ತದೆ. ನೀವು ಬೆಳಗ್ಗೆ ಎದ್ದ ತಕ್ಷಣ ಎರಡು ಒಣ ಅಂಜೂರದ ಹಣ್ಣುಗಳನ್ನು ತಿನ್ನುವ ಮೂಲಕ ದಿನವನ್ನು ಉಲ್ಲಸಿತವಾಗಿ ಆರಂಭಿಸಬಹುದು. ಒಣ ಅಂಜೂರವನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಟ್ಟು ಅದನ್ನು ಮರುದಿನ ಬೆಳಗ್ಗೆ ತಿಂದರೆ, ಆರೋಗ್ಯಕ್ಕೆ ಭಾರಿ ಪ್ರಯೋಜನ ನೀಡುತ್ತದೆ. ನೀವು ಇತರ ಒಣ ಹಣ್ಣುಗಳೊಂದಿಗೂ ಇದನ್ನು ತಿನ್ನಬಹುದು. ಅಂಜೂರದಲ್ಲಿ ವಿಟಮಿನ್ ಎ, ಪೊಟ್ಯಾಶಿಯಂ, ಫೈಬರ್ ನಂತಹ ಹಲವು ಪೋಷಕಾಂಶಗಳಿವೆ.
ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಅಂಜೂರ ಸಹಕಾರಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಇದರಲ್ಲಿನ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಅಂಜೂರವನ್ನು ಅವಶ್ಯಕವಾಗಿ ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಿ. ಇದು ರಕ್ತದೊತ್ತಡವನ್ನು ಸಾಮಾನ್ಯವಾಗಿರಿಸುತ್ತದೆ. ಪೊಟ್ಯಾಸಿಯಮ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇರುವಂತೆ ಮಾಡುತ್ತದೆ.
ಜೀರ್ಣಾಂಗ ವ್ಯವಸ್ಥೆ ಸುಸ್ಥಿತಿಯಲ್ಲಿಡುತ್ತೆ: ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಅಂಜೂರವು ಪರಿಣಾಮಕಾರಿ ಆಹಾರವಾಗಿದೆ. ಇದು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿದ್ದು, ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯಿಂದ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ತೀರಾ ಉಪಯೋಗಿ:ಮಧುಮೇಹ ರೋಗಿಗಳ ಆಹಾರದಲ್ಲಿ ಅಂಜೂರದ ಹಣ್ಣುಗಳನ್ನು ತಪ್ಪದೇ ನಿತ್ಯವು ಹಿತ - ಮಿತವಾಗಿ ಸೇರಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ಮಾಡುತ್ತದೆ. ಇದರಲ್ಲಿ ಕಂಡು ಬರುವ ಅಬ್ಸಿಸಿಕ್ ಆಮ್ಲ, ಮ್ಯಾಲಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ ಆಮ್ಲದಂತಹ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ದೇಹವನ್ನು ಸುಸ್ಥಿತಿಯಲ್ಲಿಡಲು ಅನುಕೂಲ ಮಾಡಿಕೊಡುತ್ತವೆ.
ಚರ್ಮಕ್ಕೆ ಪ್ರಯೋಜನಕಾರಿ: ಅಂಜೂರದಲ್ಲಿ ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಮುಖ್ಯವಾಗಿದೆ. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಚರ್ಮವನ್ನು ಪೋಷಿಸುತ್ತದೆ, ಆದ್ದರಿಂದ ನೀವು ನಿಮ್ಮ ಆಹಾರದಲ್ಲಿ ಅಂಜೂರದ ಹಣ್ಣುಗಳನ್ನು ಸೇರಿಸಿಕೊಳ್ಳಲೇಬೇಕು.