ನವದೆಹಲಿ: ಪ್ರತಿದಿನ ವಿಟಮಿನ್ ಪೂರಕ ಮಾತ್ರೆಗಳನ್ನು ಸೇವಿಸುವುದು ಆರೋಗ್ಯಕರ ಎನಿಸಿದರೂ ವೈದ್ಯರ ಸಲಹೆ ಇಲ್ಲದೆ ಅವನ್ನು ನಿಯಮಿತವಾಗಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ವಿಟಮಿನ್ ಕೊರತೆಯಿರುವ ಜನರಿಗೆ, ವಯಸ್ಸಾದವರಿಗೆ ಅಥವಾ ಗರ್ಭಿಣಿಯರಿಗೆ ವಿಟಮಿನ್ ಮಾತ್ರೆಗಳು ಸಹಾಯ ಮಾಡಬಹುದು. ಆದರೆ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಮಾತ್ರೆ ಸೇವನೆಯಿಂದ ಜೀರ್ಣ ಸಮಸ್ಯೆಗಳು, ಮೂತ್ರಪಿಂಡದ ಕಲ್ಲು ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸಿದೆ. ವಿಟಮಿನ್ ಮಾತ್ರೆಗಳು ಆರೋಗ್ಯಕರ ಆಹಾರಕ್ಕೆ ಪರ್ಯಾಯವಾಗಲಾರವು ಎಂದು ಸಂಶೋಧನೆ ತಿಳಿಸಿದೆ.
"ವೈದ್ಯಕೀಯ ಸಲಹೆ ಇಲ್ಲದೆ ಮಲ್ಟಿವಿಟಮಿನ್ ಮಾತ್ರೆಗಳು ಅಥವಾ ಕ್ಯಾಲ್ಸಿಯಂ ಅನ್ನು ನಿಯಮಿತವಾಗಿ ಬಳಸುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪೂರಕಗಳನ್ನು ಅತಿಯಾಗಿ ಸೇವಿಸುವುದರಿಂದ ಓವರ್ ಡೋಸ್ ಆಗಿ ಕಾಲಾನಂತರದಲ್ಲಿ ಅಂಗಗಳಿಗೆ ಹಾನಿಯಾಗಬಹುದು ಮತ್ತು ವಾಕರಿಕೆ, ವಾಂತಿ ಮತ್ತು ಹೊಟ್ಟೆ ನೋವಿನಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು" ಎಂದು ಗುರುಗ್ರಾಮದ ಮರೆಂಗೊ ಏಷ್ಯಾ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಹಿರಿಯ ಸಲಹೆಗಾರ ಮೋಹನ್ ಕುಮಾರ್ ಸಿಂಗ್ ಐಎಎನ್ಎಸ್ಗೆ ತಿಳಿಸಿದರು.
"ವ್ಯಕ್ತಿಯೊಬ್ಬ ಈ ಮೊದಲೇ ಯಾವುದಾದರೂ ಸಮಸ್ಯೆಗೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುತ್ತಿದ್ದು, ಆ ಸಮಯದಲ್ಲಿಯೇ ವಿಟಮಿನ್ ಪೂರಕ ಮಾತ್ರೆಗಳನ್ನು ತೆಗೆದುಕೊಂಡಲ್ಲಿ ಅವು ಅಡ್ಡ ಪರಿಣಾಮ ಬೀರಬಹುದು, ಅವುಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಅಥವಾ ಬಹುಶಃ ನಕಾರಾತ್ಮಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹೆಚ್ಚು ಮಲ್ಟಿವಿಟಮಿನ್ ಗಳನ್ನು ತೆಗೆದುಕೊಳ್ಳುವುದು ದೇಹದ ನೈಸರ್ಗಿಕ ಪೋಷಕಾಂಶಗಳ ಸಮತೋಲನವನ್ನು ಹಾಳುಮಾಡಬಹುದು. ಇನ್ನು ಕೆಲವೊಮ್ಮೆ ಅಸಮತೋಲನ ಅಥವಾ ವಿಟಮಿನ್ ಕೊರತೆಗಳಿಗೆ ಕಾರಣವಾಗಬಹುದು. ನಿರ್ದಿಷ್ಟ ಜೀವಸತ್ವಗಳು ಅಥವಾ ಖನಿಜಗಳು ಇತರ ಪೋಷಕಾಂಶಗಳ ಬಳಕೆ ಅಥವಾ ಹೀರಿಕೊಳ್ಳುವಿಕೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದ ಪೌಷ್ಠಿಕಾಂಶದ ಅಸಮತೋಲನವನ್ನು ಇನ್ನಷ್ಟು ಹದಗೆಡಿಸಬಹುದು" ಎಂದು ಅವರು ಹೇಳಿದರು.