Health Risks of Poor Sleep:ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕು ಎಂದರೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎನ್ನವುದು ತಜ್ಞರ ಅಭಿಮತ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲಸ, ಇತರ ಕಾರ್ಯಗಳು ಮತ್ತು ಮಾನಸಿಕ ಸಮಸ್ಯೆಗಳಿಂದ ಕೆಲವರಿಗೆ ನಿದ್ದೆ ಬರುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಇಂಥವರು ಮಲಗುವುದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಮತ್ತು ವಿಡಿಯೋ ನೋಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ನಿದ್ದೆಯ ಕೊರತೆಯಿಂದ ಜೀವನ ಮುಂದುವರಿಸಿದರೆ ಕೆಲವೇ ದಿನಗಳಲ್ಲಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ ಎನ್ನುತ್ತಾರೆ ಸಂಶೋಧಕರು. ಈ ಹಿನ್ನೆಲೆಯಲ್ಲಿ ಒಟ್ಟಿ ಎಂಬ ಮ್ಯಾಟ್ರೆಸ್ ಕಂಪನಿಯು ನಿದ್ರಾಹೀನತೆಯ ಸಮಸ್ಯೆಗಳ ಕುರಿತು ಮೆಡಿಸಿನ್ ಡೈರೆಕ್ಟ್ ಎಂಬ ಕಂಪನಿಯ ಸಹಯೋಗದಲ್ಲಿ ಸಂಶೋಧನೆ ನಡೆಸಿದೆ. ನಿದ್ದೆಯ ಕೊರತೆಯಿದ್ದರೆ ಎಷ್ಟು ದಿನಗಳವರೆಗೆ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತವೆ ಎಂಬ ವರದಿಯನ್ನು ಬಹಿರಂಗಪಡಿಸಿದೆ. ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
24 ಗಂಟೆಗಳಿಗೂ ಹೆಚ್ಚು ಕಾಲ ನಿದ್ರಾಹೀನತೆ: 24 ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಾಹೀನತೆ ಹೊಂದಿರುವ ಜನರು ಕುಳಿತಲ್ಲೇ ತೂಕಡಿಕೆ ಅನುಭವಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮೆದುಳಿನ ಕಾರ್ಯವು ನಿಧಾನವಾಗುವುದರ ಜೊತೆಗೆ ಏಕಾಗ್ರತೆಯೂ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳಿಗೂ ಸಿಟ್ಟಿಗೆದ್ದು ಮೂಡ್ ಸ್ಥಿರವಾಗಿಲ್ಲದಿರುವುದು ಕಂಡು ಬರುತ್ತದೆ. ಈ ಹಂತದಲ್ಲಿ ಕಣ್ಣುಗಳು ಉಬ್ಬಿದಂತೆ ಕಾಣುತ್ತವೆ. ದೇಹದಲ್ಲಿನ ನರಮಂಡಲದ ಸಮತೋಲನ ತಪ್ಪುತ್ತದೆ. ಸ್ನಾಯು ನೋವು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಕೆಲಸದ ಒತ್ತಡದಿಂದ ರಾತ್ರಿ ನಿದ್ದೆಯಿಲ್ಲದವರೂ ಇದೇ ರೀತಿಯ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಮೂರು ದಿನ ನಿದ್ದೆ ಬರದಿದ್ದರೆ ಏನಾಗುತ್ತೆ?:ಮೂರು ದಿನಕ್ಕಿಂತ ಹೆಚ್ಚು ನಿದ್ದೆಯಿಲ್ಲದಿದ್ದರೆ ಅಂತಹವರಲ್ಲಿ ಮೆದುಳು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಅಂತಹವರು ತೀವ್ರ ಭ್ರಮೆಯಿಂದ ಬಳಲುತ್ತಾರೆ. ನಿದ್ರಾಹೀನತೆ, ಅಸ್ಥಿರತೆ ಮತ್ತು ಇಂದ್ರಿಯಗಳ ಮೇಲೆ ಹಿಡಿತವನ್ನು ಕಳೆದುಕೊಂಡಂತೆ ಅವರಿಗೆ ಭಾಸವಾಗುತ್ತಿದೆ. ಚರ್ಮವು ಸುಕ್ಕಗಟ್ಟುತ್ತದೆ, ದೃಷ್ಟಿ ಮಂಜಾಗುತ್ತದೆ. ಕಣ್ಣುಗಳು ನೋಯುತ್ತವೆ ಮತ್ತು ಸ್ನಾಯುಗಳು ಸಂಕುಚಿತಗೊಂಡಂತೆ ಭಾಸವಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.
ಒಂದು ವಾರ ನಿದ್ದೆ ಮಾಡದಿದ್ದರೆ ಏನಾಗುತ್ತದೆ?:ಒಂದು ವಾರಕ್ಕಿಂತ ಹೆಚ್ಚು ಕಾಲ ನಿದ್ರಾಹೀನನಾಗಿದ್ದರೆ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ನಿದ್ದೆಯ ಕೊರತೆಯಿಂದ, ಮನುಷ್ಯನು ತಾನು ಏನನ್ನಾದರೂ ಕಳೆದುಕೊಂಡಿದ್ದೇನೆ ಎಂದು ಭಾವ ಅವರಲ್ಲಿ ಮೂಡುತ್ತದೆ. ದೇಹದಲ್ಲಿ ತೇವಾಂಶದ ಮಟ್ಟವು ಕಡಿಮೆಯಾಗುತ್ತದೆ. ಮತ್ತು ಇದರಿಂದ ಚರ್ಮವು ಒಣಗುತ್ತದೆ. ನಂತರ ಸುಕ್ಕುಗಳು ಸಹ ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ದೇಹದಲ್ಲಿನ ಪಿಹೆಚ್ ಸಮತೋಲನದ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.