Best Tips to Protect Heart Health:ಇಂದಿನ ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದಾಗಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರಮುಖವಾಗಿ ಮಧುಮೇಹದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಒಮ್ಮೆ ಮಧುಮೇಹ ಪತ್ತೆಯಾದ ಬಳಿಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಇದ್ದರೆ, ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಟೈಪ್ 2 ಮಧುಮೇಹ ನಿಯಂತ್ರಿಸದಿದ್ದರೆ ಮೂತ್ರಪಿಂಡ, ಹೃದಯ ಕಾಯಿಲೆ ಬರುವ ಅಪಾಯ ಹೆಚ್ಚು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಏಕೆಂದರೆ, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವು ಮೂತ್ರಪಿಂಡಗಳು, ಹೃದಯದಲ್ಲಿನ ರಕ್ತನಾಳಗಳು ಹಾಗೂ ನರಗಳಿಗೆ ಹಾನಿ ಉಂಟುಮಾಡುತ್ತದೆ. ಇದು ಅಂತಿಮವಾಗಿ ಮೂತ್ರಪಿಂಡ, ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವವರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ರಕ್ತದೊತ್ತಡ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಇದು ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ ಹಾಗೂ ವಿವಿಧ ಆರೋಗ್ಯದ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಮಧುಮೇಹ ಮತ್ತು ಮೂತ್ರಪಿಂಡದ ತೊಂದರೆ ಇರುವವರು ತಮ್ಮ ಹೃದಯದ ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ರಮೇಶ್ ಗುಡಪತಿ ತಿಳಿಸುತ್ತಾರೆ.
ಶುಗರ್ ನಿಯಂತ್ರಣದಲ್ಲಿ ಇಡಬೇಕು:ಹೃದಯ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಮಧುಮೇಹ ರೋಗಿಗಳು ಮೊದಲು ತಮ್ಮ ಶುಗರ್ ಲೆವಲ್ನ್ನು ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಇದರ ಪರಿಣಾಮ ಮೂತ್ರಪಿಂಡ ಮತ್ತು ಹೃದಯ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ ಎಂದು ಡಾ.ರಮೇಶ್ ಹೇಳುತ್ತಾರೆ.
ರಕ್ತದೊತ್ತಡ ನಿಯಂತ್ರಣದಲ್ಲಿರಲಿ:ಮಧುಮೇಹ, ಮೂತ್ರಪಿಂಡದ ಸಮಸ್ಯೆ ಇರುವವರು ಹೃದಯ ಕಾಯಿಲೆಯನ್ನು ತಪ್ಪಿಸಲು ತಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.
ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಿ:ಮಧುಮೇಹ, ಮೂತ್ರಪಿಂಡದ ಕಾಯಿಲೆ ಇರುವ ಅನೇಕ ಜನರು ತಾವು ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ಅಸಡ್ಡೆ ತೋರುತ್ತಾರೆ. ಕೆಲವೊಮ್ಮೆ ಅವರು ತಮ್ಮ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಕೂಡ ಮರೆತುಬಿಡುತ್ತಾರೆ. ಆರೋಗ್ಯವಾಗಿರಲು ಸೂಚಿಸಲಾದ ಔಷಧಿಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ವೈದ್ಯರು ಸಲಹೆ ನೀಡುತ್ತಾರೆ.