Kidney Failure Symptoms: ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಮಸ್ಯೆಗಳಂತೆ ಮೂತ್ರಪಿಂಡದ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಹತ್ತು ಜನರಲ್ಲಿ ಒಬ್ಬರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೂತ್ರಪಿಂಡಗಳು ಹಾನಿಗೊಳಗಾದ ನಂತರ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ. ವೈದ್ಯಕೀಯ ತಜ್ಞರು ತಿಳಿಸುವಂತೆ ಹಾನಿಗೊಳಗಾದ ಮೂತ್ರಪಿಂಡಗಳು ಸಾಮಾನ್ಯ ಸ್ಥಿತಿಗೆ ಮರಳುವುದು ಬಹುತೇಕ ಅಸಾಧ್ಯ.
ಮೂತ್ರಪಿಂಡದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಸಮಸ್ಯೆ ಗಂಭೀರವಾಗುವುದನ್ನು ತಡೆಯಬಹುದು. ಹೆಚ್ಚಿನ ಜನರಿಗೆ ಮೂತ್ರಪಿಂಡದ ಹಾನಿಯ ಲಕ್ಷಣಗಳ ಕುರಿತು ಗೊತ್ತಿಲ್ಲ. ಇದರಿಂದ ಮೂತ್ರಪಿಂಡಗಳು ಸಂಪೂರ್ಣವಾಗಿ ಹಾನಿಗೊಳಗಾಗುವವರೆಗೂ ಈ ಬಗ್ಗೆ ಅವರ ಗಮನಕ್ಕೆ ಬರುವುದಿಲ್ಲ. ಬೆಳಗ್ಗೆ ಈ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಎಚ್ಚರದಿಂದಿರಲು ತಜ್ಞರು ಸಲಹೆ ನೀಡಿದ್ದಾರೆ.
ಆಯಾಸ, ಆಲಸ್ಯ:ಅನೇಕರು ಆಯಾಸ ಹಾಗೂ ಆಲಸ್ಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ಅವರಿಗೆ ಬೆಳಿಗ್ಗೆ ಏಳಲೂ ಸಹ ತೊಂದರೆಯಾಗುತ್ತದೆ. ನಿಮಗೂ ಹಾಗೆಯೇ ಅನಿಸುತ್ತಿದೆಯೇ? ಹಾಗಾದ್ರೆ, ನೀವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ, ಈ ಲಕ್ಷಣಗಳು ಮೂತ್ರಪಿಂಡ ವೈಫಲ್ಯದ ಲಕ್ಷಣಗಳಾಗಿವೆ ಎಂದು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯೊಂದರ ಮೂತ್ರಪಿಂಡಶಾಸ್ತ್ರಜ್ಞ ಡಾ.ಶ್ರೀಭೂಷಣ್ ರಾಜು ವಿವರಿಸಿದ್ದಾರೆ.
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದು ರಕ್ತಹೀನತೆಗೆ ಕಾರಣವಾಗಬಹುದು. ಇದು ದೇಹದಲ್ಲಿನ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತದೆ. ಸ್ನಾಯುಗಳು ಹಾಗೂ ಅಂಗಾಂಶಗಳು ಕಾರ್ಯನಿರ್ವಹಿಸದ ಕಾರಣ ದೌರ್ಬಲ್ಯ, ಆಲಸ್ಯ ಮತ್ತು ಆಯಾಸದಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಸಾಕಷ್ಟು ಆಮ್ಲಜನಕ ಪಡೆಯಬೇಕಾಗುತ್ತದೆ. ನ್ಯಾಷನಲ್ ಕಿಡ್ನಿ ಫೌಂಡೇಶನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಕೇವಲ ಆಯಾಸ ಹಾಗೂ ಆಲಸ್ಯ ಮಾತ್ರವಲ್ಲ. ಇತರ ಲಕ್ಷಣಗಳನ್ನೂ ಮೂತ್ರಪಿಂಡ ವೈಫಲ್ಯದ ಸಂಕೇತಗಳು ಕಾಣಿಸುತ್ತವೆ.
ಹಸಿವಾಗದೇ ಇರುವುದು:ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾದಂತೆ ಹಸಿವು ಕಡಿಮೆಯಾಗುತ್ತದೆ. ಜೊತೆಗೆ ವಾಕರಿಕೆ ಕಂಡುಬರುತ್ತದೆ. ಇದು ನಿಮಗೆ ಆಹಾರ ಸೇವಿಸಲು ಬಯಕೆಯನ್ನು ಕಡಿಮೆಯಾಗಿಸುತ್ತದೆ. ಪರಿಣಾಮವಾಗಿ ನಿಮ್ಮ ತೂಕ ಕಡಿಮೆಯಾಗುತ್ತದೆ.
ಒಣ ಚರ್ಮ ಹಾಗೂ ತುರಿಕೆ:ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇರುವುದು ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‌ನಂತಹ ಖನಿಜಗಳ ಸಮತೋಲನದಲ್ಲಿ ತೊಂದರೆಯಾಗುತ್ತದೆ. ಒಣ ಚರ್ಮ, ತುರಿಕೆ ಹಾಗೂ ಕಿರಿಕಿರಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಪಾದ, ಕಣ್ಣುಗಳ ಸುತ್ತ ಊತ:ಮೂತ್ರಪಿಂಡಗಳು ಆರೋಗ್ಯವಾವಾಗಿಲ್ಲದಿದ್ದರೆ ದೇಹದಲ್ಲಿರುವ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಾಧ್ಯವಿಲ್ಲ. ಇದು ನಮ್ಮ ದೇಹದಲ್ಲಿ ವಿಶೇಷವಾಗಿ ಕಾಲುಗಳು, ಹಿಮ್ಮಡಿಗಳು, ಪಾದಗಳು ಮತ್ತು ಕಣ್ಣುಗಳ ಸುತ್ತಲೂ ಊತ ಉಂಟುಮಾಡುತ್ತದೆ.