ನವದೆಹಲಿ: ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಿರುತ್ತದೆ. ಇದು ಪ್ರೌಢಾವಸ್ಥೆ, ಗರ್ಭಾವಸ್ಥೆ ಮತ್ತು ಮೆನೋಪಾಸ್ ಮೇಲೆ ಪರಿಣಾಮ ಬೀರುತ್ತದೆ. ಈ ಕುರಿತು ನಿಯಮಿತವಾದ ತಪಾಸಣೆ ಅಗತ್ಯವಾಗಿದೆ ಎಂದು ವೈದ್ಯರು ಒತ್ತಿ ಹೇಳಿದ್ದಾರೆ.
ಥೈರಾಯ್ಡ್ ಸಮಸ್ಯೆಯು ಗಂಟಲಿನಲ್ಲಿ ಸಣ್ಣ ಚಿಟ್ಟೆಯಾಕಾರದಲ್ಲಿರುವ ಥೈರಾಯ್ಡ್ ಗ್ರಂಥಿಗಳ ಕಾರ್ಯಾಚರಣೆಗೆ ತೊಡಕು ಉಂಟು ಮಾಡುತ್ತದೆ. ಈ ಗ್ರಂಥಿಯು ಟ್ರೈಯೋಡೋಥೈರೋನೈನ್ (ಟಿ3) ಮತ್ತು ಥೈರಾಕ್ಸಿನ್ (ಟಿ-4) ಹಾರ್ಮೋನ್ಗಳ ಉತ್ಪಾದನೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಇವು ತೂಕ ನಿರ್ವಹಣೆ, ಶಕ್ತಿ ಮಟ್ಟ ಉತ್ತೇಜಿಸುವುದು, ಆಂತರಿಕ ತಾಪಮಾನ ಕಾಪಾಡುವುದು, ಚರ್ಮ, ಕೂದಲು, ಉಗುರಿನ ಬೆಳವಣಿಗೆ ಮತ್ತು ಚಯಪಚಯನ ಹಾಗೂ ಇನ್ನಿತರ ಕಾರ್ಯಕ್ಕೆ ಅಗತ್ಯವಾದ ಹಾರ್ಮೋನ್ ಬಿಡುಗಡೆ ಮಾಡುತ್ತದೆ.
ಟಿ3 ಮತ್ತು ಟಿ4 ಅಧಿಕ ಉತ್ಪಾದನೆ ಅಥವಾ ಕಡಿಮೆ ಉತ್ಪಾದನೆಗಳು ಕೂಡ ಹೈಪೋಥೈರಾಯ್ಡಿಸಮ್, ಹೈಪರ್ ಥೈರಾಯ್ಡಿಸಮ್, ಥೈರಾಯ್ಡಿಟಿಸ್ ಮತ್ತು ಥೈರಾಯ್ಡ್ ಕ್ಯಾನ್ಸರ್ ರೋಗದ ಅಪಾಯ ಹೆಚ್ಚಿಸುತ್ತದೆ. ಇದು ಮಹಿಳೆಯರ ಜೀವನದ ಹಲವು ಹಂತದಲ್ಲಿ ಇದು ಸಾಮಾನ್ಯವಾಗಿದ್ದು, ಮಹಿಳಾ ಹಾರ್ಮೋನ್ ಈಸ್ಟ್ರೋಜನ್ನೊಂದಿಗೆ ಕೂಡ ಇದು ಸಂಪರ್ಕ ಹೊಂದಿದೆ.
ಮಹಿಳೆಯರ ಜೀವನದ ಯಾವುದೇ ಹಂತದಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೈಪೋಥೈರಾಯ್ಡಿಸಮ್ ಆಯಾಸ, ತೂಕ ಹೆಚ್ಚಳ, ಒಣ ತ್ವಚೆ, ಕೂದಲು ನಷ್ಟ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಹೈಪರ್ ಥೈರಾಯ್ಡಿಸಮ್ ತೂಕ ನಷ್ಟ, ನಡುಕ, ಅತಿಸಾರಕ್ಕೆ ಕಾರಣವಾಗುತ್ತದೆ ಎಂದು ಮುಂಬೈನ ಲೀಲಾವತಿ ಆಸ್ಪತ್ರೆಯ ಥೈರಾಯ್ಡ್ ವೈದ್ಯ ವೈಶಾಲಿ ನಾಯ್ಕ್ ತಿಳಿಸಿದ್ದಾರೆ.