ಹೈದರಾಬಾದ್:ಆಧುನಿಕ ಜೀವನಶೈಲಿಗೆ ಹೊಂದಿಕೊಂಡಿರುವ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಬ್ಬು ಪ್ರಸ್ತುತ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಜನರು ಬೊಜ್ಜಿನ ತೊಂದರೆಗೀಡಾಗಿದ್ದಾರೆ. ಇದರಿಂದ ಹೆಚ್ಚಿನ ಜನರು ತೂಕ ಇಳಿಸುವ ಹೋರಾಟದಲ್ಲಿ ನಿರತರಾಗಿದ್ದಾರೆ. ಬೊಜ್ಜಿನಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸೇರಿದಂತೆ ಇತರೆ ದೈಹಿಕ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ. ಸ್ಥೂಲಕಾಯತೆಯಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಬೊಜ್ಜಿನ ಸಮಸ್ಯೆಯನ್ನು ದೂರವಾಗಿಸಲು ಹೈದರಾಬಾದ್‌ನ ಆಶಾ ಆಸ್ಪತ್ರೆಯ ಮನೋವೈದ್ಯ ಡಾ.ಆಲಂ ಭಾವನಾ ಅವರು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅಧಿಕ ತೂಕವು ಮಾನಸಿಕ ಆರೋಗ್ಯದ ಮೇಲೆ ಹೇಗೆ ಆಳವಾದ ಪರಿಣಾಮ ಬೀರುತ್ತದೆ. ಇದು ಮನಸ್ಸಿನ ಅಸ್ವಸ್ಥತೆ, ಖಿನ್ನತೆ, ಆತಂಕ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ.
ಬೊಜ್ಜಿನಿಂದ ಮಾನಸಿಕ ಒತ್ತಡ: ಸ್ಥೂಲಕಾಯತೆ ಅಥವಾ ಬೊಜ್ಜು ಸಮಸ್ಯೆಯು ಜೆನೆಟಿಕ್ಸ್, ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಂದ ಜನರನ್ನು ಬಾಧಿಸುತ್ತದೆ. ಅಧಿಕ ತೂಕ ಮತ್ತು ಬೊಜ್ಜು ಗಮನಾರ್ಹ ಶಾರೀರಿಕ ಸವಾಲುಗಳನ್ನು ಉಂಟುಮಾಡಬಹುದು. ಸ್ಥೂಲಕಾಯತೆಯಿಂದ ಬಳಲುತ್ತಿರುವ ಅನೇಕ ಜನರು ತಮ್ಮ ದೈಹಿಕ ನೋಟದಿಂದ ಅತೃಪ್ತರಾಗಿದ್ದಾರೆ. ಇದರಿಂದಾಗಿ ಅವರ ಸ್ವಾಭಿಮಾನವು ಕಡಿಮೆಯಾಗಿರತ್ತದೆ ಮತ್ತು ಅವರು ತಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತಾರೆ ಎಂದು ಡಾ.ಭಾವನಾ ಹೇಳುತ್ತಾರೆ. ಇದರಿಂದ ಅವರಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತದೆ. ಅವರು ದೈಹಿಕ ನೋಟದಿಂದ ಅತೃಪ್ತರಾಗಿರುವುದರಿಂದ, ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ. ಇದು ಅವರ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಸ್ಥೂಲಕಾಯತೆಗೆ ಸಂಬಂಧಿಸಿದ ಮಾನಸಿಕ ಸಮಸ್ಯೆಗಳು:
- ಖಿನ್ನತೆ:ಸ್ಥೂಲಕಾಯತೆಯು ಮೆದುಳಿನಲ್ಲಿ ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಖಿನ್ನತೆಯ ಲಕ್ಷಣವಾಗಿ ಏಕಾಗ್ರತೆಯ ಕೊರತೆ ಮತ್ತು ಹತಾಶೆಯ ಭಾವನೆಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ವರ್ತನೆ ಮತ್ತು ತೂಕದ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳು ಖಿನ್ನತೆಯ ಲಕ್ಷಣಗಳು ಇನ್ನಷ್ಟು ಹೆಚ್ಚಿಸಬಹುದು. ಸ್ಥೂಲಕಾಯದ ವ್ಯಕ್ತಿಗಳು ಸರಾಸರಿ ತೂಕದ ಜನರಿಗಿಂತ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ತಿಳಿಸುತ್ತವೆ.
- ತಿನ್ನುವ ಅಸ್ವಸ್ಥತೆ: ಸ್ಥೂಲಕಾಯತೆ ಹೊಂದಿರುವ ಜನರಲ್ಲಿ ಭಾವನಾತ್ಮಕವಾಗಿ ಅತಿಯಾಗಿ ತಿನ್ನುವುದು ಸಾಮಾನ್ಯವಾಗಿದೆ. ಜನರು ನಕಾರಾತ್ಮಕ ಭಾವನೆಗಳನ್ನು ನಿಭಾಯಿಸಲು ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ಇದು ಅನಾರೋಗ್ಯಕರ ಆಹಾರಗಳ ಅತಿಯಾದ ಸೇವನೆ ಮತ್ತು ಮತ್ತಷ್ಟು ತೂಕ ಹೆಚ್ಚಲು ಕಾರಣವಾಗುತ್ತದೆ.
- ಆತಂಕ:ಸ್ಥೂಲಕಾಯತೆ ಮತ್ತು ಆತಂಕ ಒಂದಕ್ಕೊಂದು ಸಂಬಂಧವಿದೆ. ಆತಂಕವು ಅತಿಯಾಗಿ ತಿನ್ನುವುದಕ್ಕೆ ಕಾರಣವಾಗಬಹುದು. ಆದರೆ, ಸ್ಥೂಲಕಾಯತೆಯು ಆತಂಕದ ಮಟ್ಟವನ್ನು ಹೆಚ್ಚಿಸಬಹುದು.
- ವ್ಯಸನ: ವ್ಯಸನಗಳಿಗೆ ಒಗಾಗಿರುವವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಲ್ಕೋಹಾಲ್ ಮತ್ತು ಡ್ರಗ್ಸ್ ಬಳಕೆಯು ಮತ್ತಷ್ಟು ತೂಕ ಹೆಚ್ಚಾಗಲು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪರಿಹಾರ ಕ್ರಮಗಳೇನು?:ಸ್ಥೂಲಕಾಯತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವುದು ಮುಖ್ಯ ಎಂದು ಡಾ.ಭಾವನಾ ಒತ್ತಿಹೇಳುತ್ತಾರೆ. ಈ ಪ್ರಮುಖ ಸೂತ್ರಗಳನ್ನು ಇಲ್ಲಿದೆ ನೋಡಿ..
ಸಮಾಲೋಚನೆ: ಸಮಾಲೋಚನೆಗೆ ಹಾಜರಾಗುವುದರಿಂದ ವ್ಯಕ್ತಿಗಳು ತಮ್ಮ ಸ್ವಯಂ ಗ್ರಹಿಕೆ, ಒತ್ತಡ ಮತ್ತು ಅನುಭವಗಳನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಆತ್ಮ ವಿಶ್ವಾಸ ಮತ್ತು ಭಾವನಾತ್ಮಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ.
ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT): ಕಾಗ್ನಿಟಿವ್ ಬಿಹೇವಿಯರಲ್ ಥೆರಪಿಯಿಂದ ವ್ಯಕ್ತಿಗಳಿಗೆ ನಕಾರಾತ್ಮಕ ಚಿಂತನೆಯ ಮಾದರಿಗಳನ್ನು ಧನಾತ್ಮಕವಾಗಿ ಬದಲಾಯಿಸಲು ಸಹಾಯ ಮಾಡುತ್ತದೆ. ಇದು ಭಾವನಾತ್ಮಕ ಆಹಾರವನ್ನು ನಿರ್ವಹಿಸುವ ಮತ್ತು ಅನಾರೋಗ್ಯಕರ ನಡವಳಿಕೆಗಳನ್ನು ಬದಲಾಯಿಸುವ ತಂತ್ರಗಳನ್ನು ಒದಗಿಸುತ್ತದೆ.