ಹೈದರಾಬಾದ್: ಬೆನ್ನು ನೋವು ಬಹುತೇಕರಿಗೆ ಕಾಡುವ ಅಸಾಧ್ಯವಾದ ನೋವಾಗಿದೆ. ಅದರಲ್ಲೂ ವಿಶೇಷವಾಗಿ ಪ್ರಯಾಣವನ್ನೇನಾದರೂ ಮಾಡಿದರೆ ಈ ನೋವು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಈ ನೋವು ನಿವಾರಣೆಗೆ ಕೆಲವು ಕಾಲ ವಿಶ್ರಾಂತಿ ಮತ್ತು ಮಾತ್ರೆಗಳನ್ನು ತೆಗೆದುಕೊಂಡರೂ ಇದು ಮತ್ತೆ ಮತ್ತೆ ಮರಳುತ್ತಲೇ ಇರುತ್ತದೆ. ಇಂತಹ ಸಮಸ್ಯೆಗೆ ಇರುವ ಸಾಧ್ಯತೆಯ ಪರಿಹಾರ ಎಂದರೆ ಅದು ವ್ಯಾಯಾಮವಾಗಿದೆ.
ವ್ಯಾಯಾಮಗಳು ಸ್ನಾಯುಗಳನ್ನು ಬಲಪಡಿಸಿ, ನೋವುಗಳಿಂದ ತಡೆಯಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಬೆನ್ನು ನೋವು ಕಡಿಮೆ ಮಾಡುವ ಕೆಲವು ನಿರ್ದಿಷ್ಟ ವ್ಯಾಯಾಮ ರೂಢಿಸಿಕೊಳ್ಳುವುದರಿಂದ ಸುಲಭವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ವಾಕಿಂಗ್: ಬೆನ್ನು ನೋವು ಎಂದು ದೀರ್ಘಕಾಲ ಮಲಗುವುದರಿಂದ ಬೆನ್ನುಹುರಿಯೊಂದಿಗೆ ಸಂಪರ್ಕ ಹೊಂದಿರುವ ಸ್ನಾಯುಗಳು ದುರ್ಬಲಗೊಳ್ದೆಳುತ್ತಾ ಸಾಗುತ್ತವೆ. ಈ ಹಿನ್ನೆಲೆಯಲ್ಲಿ ಸದಾ ಮಲಗಿಕೊಂಡೇ ಇರುವುದಕ್ಕಿಂತ ಎದ್ದು ನಡೆಯುವುದು ಉತ್ತಮ ಪರಿಹಾರವಾಗಿದೆ. ನಡಿಗೆಯು ಅತ್ಯಂತ ಸರಳ ಮತ್ತು ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಬೆನ್ನಿನ ಎರಡು ಬದಿಯ ಸ್ನಾಯುವನ್ನು ಇದು ಬಲಗೊಳಿಸುತ್ತದೆ. ಹಲವು ಅಧ್ಯಯನಗಳ ಪ್ರಕಾರ, ವಾರದಲ್ಲಿ ಕನಿಷ್ಠ ಮೂರರಿಂದ ಐದು ದಿನ ಸರಿ ಸುಮಾರು 130 ನಿಮಿಷದ ನಡಿಗೆ ಕೂಡ ಬೆನ್ನು ನೋವನ್ನು ಯಾವುದೇ ಚಿಕಿತ್ಸೆ ಇಲ್ಲದೇ ದುಪ್ಪಟ್ಟು ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ವಾಕಿಂಗ್ ಎಂಬುದು ಯಾವುದೇ ವೆಚ್ಚವಿಲ್ಲದೇ ಪಡೆಯುವ ಅತ್ಯುತ್ತಮ ಬೆನ್ನು ನೋವಿನ ಚಿಕಿತ್ಸೆಯಾಗಿದೆ.
ವಾಕಿಂಗ್ ಅನ್ನು ಅನೇಕ ಮಂದಿ ಬಹಳ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ನಡೆಯುವಾಗ ಆಗುವ ಸ್ನಾಯುಗಳ ಚಲನೆ ಬೆನ್ನು ನೋವಿಗೆ ಸಹಾಯ ಮಾಡುತ್ತದೆ. ಜೊತೆಗೆ ನಡಿಯುವಾಗ ದೇಹ ಮತ್ತು ಮಿದುಳಿನಲ್ಲಿರುವ ನೋವಿನ ಸಿಗ್ನಲ್ ಅನ್ನು ತಡೆಯುತ್ತದೆ.