ನಮ್ಮ ದಿನನಿತ್ಯದ ಗಡಿಬಿಡಿಯ ಜೀವನಶೈಲಿಯಲ್ಲಿ ಸಮಾಧಾನ, ನೆಮ್ಮದಿಯಿಂದ ಆಹಾರವನ್ನು ಆಸ್ವಾಧಿಸಿ, ನಿಧಾನವಾಗಿ ತಿನ್ನಲೂ ಸಮಯವಿಲ್ಲ. ಲಗುಬಗೆಯಿಂದ ಎದ್ದು ಕಚೇರಿಗೆ ತೆರಳುವ ಅವಸರದಲ್ಲಿ ಸಿಕ್ಕ ಒಂದೆರಡು ನಿಮಿಷಗಳಲ್ಲೇ ನಿಂತುಕೊಂಡೇ ಅರ್ಧಂಬರ್ಧ ತಿಂಡಿಯನ್ನು ಗಬಗಬನೆ ತಿಂದು ಹೊರಡುತ್ತೇವೆ. ಇನ್ನೊಂದು ಸಮಯಾವಕಾಶವಿದ್ದರೂ, ಕ್ಯಾಂಟೀನ್ ಡಾಬಾಗಳಲ್ಲಿ ಸ್ನೇಹಿತರ ಜೊತೆ ಊಟ ಮಾಡುತ್ತಿದ್ದೇವೆ. ಎಷ್ಟೆಂದರೆ ಅಲ್ಲಿ ಕುರ್ಚಿಗಳಿದ್ದರೂ ಅದನ್ನೇ ನಾವು ರೂಢಿಸಿಕೊಂಡಿರುತ್ತೇವೆ. ಅಲ್ಲಿಯೂ ಹೆಚ್ಚಿನವರು ನಿಂತುಕೊಂಡೇ ಮಧ್ಯಾಹ್ನ ಅಥವಾ ರಾತ್ರಿಯ ಊಟ ಮುಗಿಸಿರುತ್ತಾರೆ. ಆದರೆ ಇನ್ನು ಮುಂದೆ ಸರಿಯಾಗಿ ಕುಳಿತುಕೊಳ್ಳದೆ ನಿಂತಲ್ಲೇ ತುತ್ತು ಬಾಯಿಗೆ ಹಾಕಿಕೊಳ್ಳುವ ಮೊದಲು ಒಂದು ಕ್ಷಣ ಯೋಚಿಸಿ. ಯಾಕೆಂದರೆ ನಿಂತುಕೊಂಡು ಊಟು ಮಾಡುವುದರಿಂದ ಸಣ್ಣಪುಟ್ಟದಲ್ಲ ಅಪಾಯಕಾರಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆಯಂತೆ. ನಿಂತುಕೊಂಡು ತಿನ್ನುವುದನ್ನು ರೂಢಿಸಿಕೊಂಡರೆ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ ಎನ್ನುವ ಮಾಹಿತಿಯನ್ನು ತಜ್ಞರು ಬಹಿರಂಗ ಪಡಿಸಿದ್ದಾರೆ.
ಲಖನೌದ ಕಲ್ಯಾಣ್ ಸಿಂಗ್ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ರೇಡಿಯೋಥೆರಪಿ ವಿಭಾಗದ ಎರಡನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ತಜ್ಞರು ಕೆಲವು ಆಹಾರ ಪದ್ಧತಿಗಳಿಂದ ಅನ್ನನಾಳಕ್ಕೆ ಸಂಬಂಧಿಸಿದ ಕಾಯಿಲೆಗಳು ಬೆಳೆಯಬಹುದು ಎಂದು ಒತ್ತಿ ಹೇಳಿದ್ದಾರೆ.
ಪಿಜಿಐ ಚಂಡೀಗಢದ ವಿಭಾಗ ಮುಖ್ಯಸ್ಥ ಡಾ. ರಾಕೇಶ್ ಕಪೂರ್ ಈ ಬಗ್ಗೆ ಮಾತನಾಡಿ, "ನಿಂತುಕೊಂಡು ಆಹಾರವನ್ನು ತಿನ್ನುವುದು ಹಾಗೂ ಯಾವುದೇ ಪಾನೀಯಗಳನ್ನು ಕುಡಿಯುವುದರಿಂದ ಅನ್ನನಾಳದ ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಮಸ್ಯೆಯಾಗಬಹುದು. ಇದು ಆ್ಯಸಿಡ್ ರಿಫ್ಲಕ್ಸ್ನಂತಹ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು" ಎಂದು ತಿಳಿಸಿದರು.