ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರೋಟಿನ್ ಪೌಡರ್ಗಳು ಬಹಳಷ್ಟು ಪ್ರಖ್ಯಾತಿ ಪಡೆದಿವೆ. ದೈಹಿಕ ಚಟುವಟಿಕೆ ನಡೆಸುವ ಜನರು ದೇಹದ ಪ್ರೋಟಿನ್ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಪ್ರೋಟಿನ್ ಪೌಡರ್ ಸೇವನೆಗೆ ಮುಂದಾಗುತ್ತಿದ್ದಾರೆ. ಈ ರೀತಿಯ ಪ್ರೋಟಿನ್ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಈ ರೀತಿಯ ಪ್ರೋಟಿನ್ ಪೂರಕ ಸೇವನೆಯು ತಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು ಎಂಬ ಮಾಹಿತಿಯನ್ನು ಸ್ನಾಪ್ಡೀಲ್ ಸಹ ಸಂಸ್ಥಾಪಕರಾದ ಕುನಾಲ್ ಬಹಲ್ ತಿಳಿಸಿದ್ದಾರೆ. ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಹಲವು ವರ್ಷಗಳ ಹಿಂದೆ ಒಮ್ಮೆ ನಾನು ಪ್ರೋಟಿನ್ ಪೂರಕವನ್ನು ತೆಗೆದುಕೊಂಡೆ. ಇದು ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡಿತು ಎಂದಿದ್ದಾರೆ.
ಪ್ರೋಟಿನ್ ಪೂರಕ ಉತ್ತಮವಾಗಿರುತ್ತದೆ ಎಂದು ಭಾವಿಸಿ, ನಾನು ಪ್ರಖ್ಯಾತ ದೇಶಿಯ ಬ್ರಾಂಡ್ನ ಪ್ರೋಟಿನ್ ಸೇವನನೆಗೆ ಮುಂದಾದೆ. ಎಂಟು ವಾರದಲ್ಲಿ ಇದು ನನ್ನ ಆರೋಗ್ಯವನ್ನು ಏರುಪೇರಾಗಿಸಿತು. ಇದರಿಂದ ಗಂಭೀರ ಸಮಸ್ಯೆ ಎದುರಿಸಿದೆ ಎಂದು ತಿಳಿಸಿದ್ದಾರೆ. ಈ ಸಮಸ್ಯೆ ಅರಿವಿಗೆ ಬಂದಾಕ್ಷಣ ನಾನು ಅದರ ಸೇವನೆಯನ್ನು ನಿಲ್ಲಿಸಿದೆ. ಪ್ರೋಟಿನ್ ಪೂರಕಗಳನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಿ ಎಂದು ಅವರು ಮನವಿ ಮಾಡಿದ್ದಾರೆ.