ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಸಾಕಷ್ಟು ಹೆಚ್ಚಾಗಿದ್ದು, ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಗಣನೀಯ ಏರಿಕೆ ಕಂಡಿದೆ. ಈ ಬಾರಿ ಡೆಂಗ್ಯೂ ಲಕ್ಷಣಗಳಲ್ಲಿ ಸಾಕಷ್ಟು ಬದಲಾವಣೆಗಳೂ ಕಂಡು ಬರುತ್ತಿದೆ.
ರೋಗಿಗಳಲ್ಲಿ ಜ್ವರದ ಪ್ರಮಾಣ ಹೆಚ್ಚಾಗಿದ್ದು, 104 ಡಿಗ್ರಿಯವರೆಗೆ ಕಂಡು ಬರುತ್ತಿದೆ. ತಲೆನೋವು, ಮೈ ಕೈ ನೋವು, ಸಂಧಿ ನೋವು ಹೆಚ್ಚಾಗಿದೆ. ರೋಗಿಗಳು ಗುಣಮುಖರಾಗುವ ಸಮಯ ಕೂಡ ಜಾಸ್ತಿಯಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ರೋಗಿಗಳಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆಯಿರುವುದು ಗೋಚರಿಸಿದೆ. ನೆಗೆಟಿವ್ ಬಂದಿರುವ ಪ್ರಕಣಗಳಲ್ಲಿ ಡೆಂಗ್ಯೂ ರೀತಿಯ ಆರೋಗ್ಯ ಸಮಸ್ಯೆಗಳ ಪ್ರಮಾಣ ಗಣನೀಯ ಏರಿಕೆಯಾಗಿದೆ.
ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿರುವ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಸಿಷಿಯನ್, ಡೈಬೆಟೋಲೊಜಿಸ್ಟ್ ಡಾ.ನಸೀರ್, "ಎನ್.ಎಸ್ 1, ಐ.ಜಿ.ಎಂ ಟೆಸ್ಟ್ಗಳನ್ನು ಡೆಂಗ್ಯೂ ಗುಣಲಕ್ಷಣ ಕಂಡುಬರುತ್ತಿರುವ ರೋಗಿಗಳಿಗೆ ಮಾಡಲಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ಪ್ರಕರಣಗಳು ಧೃಢಪಡದಿದ್ದರೂ ಡೆಂಗ್ಯೂ ರೀತಿಯ ಅನಾರೋಗ್ಯ ಲಕ್ಷಣಗಳ ಪ್ರಮಾಣ ಕೂಡ ನಮ್ಮಲ್ಲಿ ಬರುತ್ತಿರುವ ರೋಗಿಗಳಲ್ಲಿ ಹೆಚ್ಚಾಗಿದೆ. ಆದರೆ ಆಗಲೂ ಡೆಂಗ್ಯೂ ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕಳೆದ ಕೆಲ ವಾರಗಳಿಂದ ಈ ರೀತಿಯ ಪ್ರಕರಣಗಳು ಹೆಚ್ಚು ಕಂಡುಬಂದಿದೆ" ಎಂದರು.