ನವದೆಹಲಿ: ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್(ಎಂಪಾಕ್ಸ್) ರೋಗದ ಶಂಕಿತ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ, ಕೇಂದ್ರ ಸರ್ಕಾರ ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಶಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆಗೆ ಸೋಮವಾರ ಸೂಚಿಸಿದೆ. ಜೊತೆಗೆ ಶಂಕಿತ ಅಥವಾ ದೃಢೀಕೃತ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಆಸ್ಪತ್ರೆಗಳನ್ನು ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
ವಿದೇಶಗಳಿಂದ ಬರುವ ವ್ಯಕ್ತಿಗಳಿಗೆ ಎಂಪಾಕ್ಸ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಭಾನುವಾರ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಎಂಪಾಕ್ಸ್ನ ಶಂಕಿತ ಲಕ್ಷಣಗಳು ಕಂಡು ಬಂದಿದ್ದವು. ತಕ್ಷಣವೇ ಆತನನ್ನು ಐಸೋಲೇಟ್ ಮಾಡಲಾಗಿದೆ. ಜೊತೆಗೆ ವಿಮಾನದಲ್ಲಿದ್ದ ಮತ್ತು ಸಂಪರ್ಕಕ್ಕೆ ಉಳಿದವರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಶಂಕಿತ ರೋಗಿಗಳ ತಪಾಸಣೆ, ಪರೀಕ್ಷೆ ಮತ್ತು ಸಂಪರ್ಕ ಪತ್ತೆ ನಡೆಸಿ. ಶಂಕಿತ ಮತ್ತು ದೃಢಪಡಿಸಿದ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಸೌಲಭ್ಯಗಳುಳ್ಳ ಆಸ್ಪತ್ರೆಗಳನ್ನು ಸಿದ್ಧ ಮಾಡಿಕೊಳ್ಳಿ. ರೋಗವು ಹರಡದಂತೆ ಮುಂಜಾಗ್ರತೆ ವಹಿಸಿ ಎಂದು ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಪರಿಶೀಲಿಸುವಂತೆಯೂ ನಿರ್ದೇಶಿಸಿದೆ.
ಎಂಪಾಕ್ಸ್ನ ಲಕ್ಷಣಗಳೇನು?: ಎಂಪಾಕ್ಸ್ ಅಥವಾ ಮಂಕಿಪಾಕ್ಸ್ ಎಂದು ಕರೆಯಲ್ಪಡುವ ಈ ರೋಗವು ಮಾರಕವಾಗಿದೆ. ವೈರಸ್ ದಾಳಿ ಬಳಿಕ ಮನುಷ್ಯನಲ್ಲಿ ಸಾಮಾನ್ಯವಾಗಿ ದದ್ದು (ರಾಶ್) ಕಂಡುಬರುತ್ತದೆ. ದೇಹದ ಉಷ್ಣಾಂಶ ಹೆಚ್ಚಾಗಿ ಜ್ವರ ಬಾಧಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ)ದ ನಿಯಮಗಳನ್ನು ಸರ್ಕಾರ ಉಲ್ಲೇಖಿಸಿದೆ.
ಎಂಪಾಕ್ಸ್ ಬಾಧಿತರಲ್ಲಿ ಸಾವಿನ ಪ್ರಮಾಣ ಹೆಚ್ಚಿರುವ ಕಾರಣ, WHO ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. ಆದಾಗ್ಯೂ ರೋಗದ ಹರಡುವಿಕೆಯು ಆಫ್ರಿಕಾದಲ್ಲಿ ಹೆಚ್ಚಿದ್ದು, ಉಳಿದ ರಾಷ್ಟ್ರಗಳಲ್ಲಿ ಮಧ್ಯಮ ಹಂತದಲ್ಲಿದೆ ಎಂದು ಹೇಳಿದೆ.
ಸಾಮಾನ್ಯವಾಗಿ ಯಾರಲ್ಲಿ ಕಂಡು ಬರುತ್ತೆ: ಎಂಪಾಕ್ಸ್ ಸೋಂಕು ಸಾಮಾನ್ಯವಾಗಿ 18 ರಿಂದ 44 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ಕಂಡು ಬರುತ್ತಿದೆ. ಲೈಂಗಿಕ ಸಂಪರ್ಕದಿಂದ ಇದು ಹೆಚ್ಚಾಗಿ ಹರಡುತ್ತದೆ. ನಂತರ ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕದ ಮೂಲಕ ವ್ಯಾಪಿಸುತ್ತದೆ.
ಭಾರತದಿಂದ ಇಲ್ಲಿಯವರೆಗೆ ಯಾವುದೇ ದೃಢೀಕೃತ ಪ್ರಕರಣ ವರದಿಯಾಗಿಲ್ಲ. ಆದರೆ, ಇತ್ತೀಚೆಗೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಸೋಂಕಿತ ಲಕ್ಷಣಗಳು ಕಂಡುಬಂದಿದ್ದು, ಆತನನ್ನು ಪ್ರತ್ಯೇಕಿಸಲಾಗಿದೆ. ಆತನ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಡಬ್ಲ್ಯೂಎಚ್ಒ ಪ್ರಕಾರ, 2022 ರಿಂದ 2024 ರ ನಡುವೆ 120 ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. 1 ಲಕ್ಷ ಕೇಸ್ಗಳು ಪ್ರಯೋಗಾಲಯದಲ್ಲಿ ದೃಢಪಟ್ಟಿವೆ. ಸುಮಾರು 220 ಸಾವುಗಳು ಸಂಭವಿಸಿವೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ 5 ಎಂಪಾಕ್ಸ್ ಪ್ರಕರಣಗಳು ಕಂಡು ಬಂದಿವೆ.
ಇದನ್ನೂ ಓದಿ ಎಂಪಾಕ್ಸ್ ಸೋಂಕಿನ ಬಗ್ಗೆ ಭಯಪಡಬೇಡಿ, ಜಾಗರೂಕರಾಗಿರಿ - Cautious on Mpox