ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಲವು ಜನರು ಫೇಷಿಯಲ್ ಮಾಡಿಸಿಕೊಂಡರೆ, ಇನ್ನು ಕೆಲವರು ತರಹೇವಾರಿ ಸೌಂದರ್ಯ ವರ್ಧಕಗಳನ್ನು ಬಳಸುವುದನ್ನು ಕಾಣುತ್ತೇವೆ. ಇದರಲ್ಲಿ ಹುಡುಗರಿಗಿಂತ ಹುಡುಗಿಯರೇ ಅಧಿಕ ಎನ್ನುವುದು ಗೊತ್ತಿರದ ವಿಚಾರವಲ್ಲ. ಕಪ್ಪು ಇರುವವರಂತೂ ಬಿಳಿಯಾಗಿ ಕಾಣಲು ಮಾರುಕಟ್ಟೆಯಲ್ಲಿ ಸಿಗುವ ಬಗೆ ಬಗೆಯ ಫೇರ್ನೆಸ್ ಕ್ರೀಮ್ಗಳನ್ನು ಬಳಸುವುದುಂಟು. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ, ಲೆಕ್ಕಕ್ಕಿಲ್ಲದಷ್ಟು ಸಮಯ ನೀಡುತ್ತಾರೆ, ಜಾಗ್ರತೆ ವಹಿಸುತ್ತಾರೆ. ಆದರೆ, ದೇಹದಲ್ಲಿ ಅತಿ ಸೂಕ್ಷ್ಮ ಅಂಗವೆನಿಸಿಕೊಂಡಿರುವ ಚರ್ಮವೂ ಉಸಿರಾಡುತ್ತದೆ! ಸಿಕ್ಕ ಸಿಕ್ಕ ಕ್ರೀಮುಗಳನ್ನು ಬಳಸಿ ಚರ್ಮದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂಬ ಸೂಕ್ಷ್ಮವನ್ನು ಎಷ್ಟೋ ಜನ ಮರೆತುಬಿಡುತ್ತಾರೆ. ನೀವೂ ಕೂಡ ಫೇರ್ನೆಸ್ ಕ್ರೀಮ್ ಬಳಸುದ್ದೀರಾ? ಹಾಗಾದರೆ ಈ ಕೆಳಗಿನ ಮಾಹಿತಿ ನಿಮಗಾಗಿ.
ಸಾಮಾನ್ಯವಾಗಿ, ಚರ್ಮ ಕಿರಿಕಿರಿ ಉಂಟುಮಾಡಿದಾಗ ಅಥವಾ ಕಪ್ಪು ಚುಕ್ಕೆ ಕಾಣಿಸಿಕೊಂಡಾಗ ಫೇರ್ನೆಸ್ ಕ್ರೀಮ್ ಬಳಸಬಹುದು. ಅದರ ಹೊರತಾಗಿ ಅಂಗಡಿಗಳಲ್ಲಿ ಸಿಗುವ ತರಹೇವಾರಿ ಕ್ರೀಮುಗಳನ್ನು ಖರೀದಿಸಿ ಇಷ್ಟ ಬಂದಂತೆ ಬಳಸಿದರೆ ಅವುಗಳಿಂದ ಹಲವು ಅಡ್ಡ ಪರಿಣಾಮಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು.
ಅಡ್ಡ ಪರಿಣಾಮಗಳೇನು?:ಕೆಲವು ಫೇರ್ನೆಸ್ ಕ್ರೀಮುಗಳಲ್ಲಿ ಪಾದರಸ ಹೆಚ್ಚಾಗಿರುವುದರಿಂದ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ನರಗಳಿಗೆ ಹಾನಿ ತರಬಹುದು, ಕೆಲವೊಮ್ಮೆ ಮೊಡವೆ ಬರಬಹುದು, ಚರ್ಮದ ಅಲರ್ಜಿ ಉಂಟಾಗಬಹುದು, ತ್ವಚೆಯ ಮೇಲೆ ಕೆಟ್ಟ ಪರಿಣಾಮ ಕೂಡ ಬೀರಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) 2019ರಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಆ ಪ್ರಕಾರ, ಫೇರ್ನೆಸ್ ಕ್ರೀಮ್ಗಳಲ್ಲಿನ ಪಾದರಸದಿಂದಾಗಿ, ಮನುಷ್ಯನ ನರ ಹಾನಿ ಮತ್ತು ಮೂತ್ರಪಿಂಡ ವೈಫಲ್ಯದಂತಹ ಹಲವಾರು ಸಮಸ್ಯೆಗಳು ಉದ್ಭವಿಸಿರುವುದಾಗಿ ಉಲ್ಲೇಖಿಸಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ವಿಜ್ಞಾನಿ ಡಾ.ಆನೆಟ್ ಪ್ರಸ್-ಉಸ್ಟನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು ಎನ್ನುವುದನ್ನೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ.
ತಜ್ಞರ ಸಲಹೆಗಳು:ಬಿಳಿಯಾಗುವ ಕ್ರೀಮುಗಳನ್ನು ಬಳಸುವ ಬದಲು, ನಿಮ್ಮ ಚರ್ಮವನ್ನು ಹಗುರಗೊಳಿಸಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ ಎನ್ನುತ್ತಾರೆ ತಜ್ಞರು.
- ಮೊಸರು, ಕಡಲೆಹಿಟ್ಟು ಮತ್ತು ಸ್ವಲ್ಪ ನಿಂಬೆ ರಸ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳಿ.
- ಹತ್ತು ನಿಮಿಷಗಳ ನಂತರ ತೊಳೆಯಿರಿ.
- ಈ ಕ್ರಮದಲ್ಲಿ ಮುಖದ ಮೇಲೆ ಟಾಲ್ಕಂ ಪೌಡರ್ ಮತ್ತು ಇತರೆ ಕ್ರೀಮುಗಳನ್ನು ಹಚ್ಚದಂತೆ ನೋಡಿಕೊಳ್ಳಬೇಕು. ಏಕೆಂದರೆ, ಸೂರ್ಯನೊಂದಿಗೆ ಅವುಗಳ ಪ್ರತಿಕ್ರಿಯೆಯಿಂದ ಚರ್ಮ ಕಪ್ಪಾಗುವ ಅಪಾಯವಿದೆ.
- ಇದನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.