ಹಾವೇರಿ: ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಬಿದಿರಿನಲ್ಲೇ ಅಂದ ಚೆಂದದ ರಥವೊಂದು ಜಿಲ್ಲೆಯಲ್ಲಿ ಗಣೇಶನಿಗೆ ಮಂಟಪವಾಗಿ ಗಮನ ಸೆಳೆಯುತ್ತಿದೆ. ಗಣೇಶ ಚತುರ್ಥಿ ಬಂದರೆ ಸಾಕು, ರಾಣೆಬೆನ್ನೂರು ನಗರದ ಮೇದಾರ ಸಮಾಜದ ಯುವಕರಲ್ಲಿ ಉತ್ಸಾಹ ಇಮ್ಮಡಿಯಾಗುತ್ತದೆ. ಸಾರ್ವಜನಿಕ ಗಣೇಶ ಸ್ಥಾಪಿಸುವ ಈ ಸಮಾಜದ ಯುವಕರು ಗಣೇಶನ ಅಲಂಕಾರಕ್ಕೆ ಬಿದಿರನ್ನು ಬಳಸುವುದು ವಿಶೇಷ.
![Lord Ganesha in Bamboo chariot](https://etvbharatimages.akamaized.net/etvbharat/prod-images/17-09-2024/kn-hvr-02-bamboose-ratha-7202143_15092024184629_1509f_1726406189_205.jpg)
ಈ ಬಾರಿ ಹಂಪಿ ವಿರೂಪಾಕ್ಷನ ರಥದ ಮಾದರಿ; ಕಳೆದ ಕೆಲ ವರ್ಷಗಳಿಂದ ಬಿದಿರಿನಲ್ಲಿ ವಿವಿಧ ಕಲಾಕೃತಿ ಮಾಡುವ ಮೂಲಕ ಗಣೇಶ ಚತುರ್ಥಿಯನ್ನು ಈ ಸಮಾಜದ ಯುವಕರು ಆಚರಿಸುತ್ತಾರೆ. ಪ್ರಸ್ತುತ ವರ್ಷ ಗಣೇಶನ ಅಲಂಕಾರಕ್ಕೆ ಮೇದಾರ ಸಮಾಜದ ಯುವಕರು ಆರಿಸಿಕೊಂಡಿದ್ದು ಹಂಪಿ ವಿರೂಪಾಕ್ಷ ದೇವಾಲಯದ ಬಳಿ ಇರುವ ಕಲ್ಲಿನ ರಥ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಲ್ಲಿನಲ್ಲಿ ಕೆತ್ತಲ್ಪಟ್ಟ ರಥದ ಮಾದರಿಯನ್ನು ಇಲ್ಲಿನ ಯುವಕರು ಬಿದಿರಿನಲ್ಲಿ ರಚಿಸಿದ್ದಾರೆ.
ರಥ ರಚಿಸಿದ್ದು ಹೇಗೆ; ಸುಮಾರು 200ಕ್ಕೂ ಅಧಿಕ ಬಿದಿರಿನ ಬೊಂಬುಗಳನ್ನು ತೆಗೆದುಕೊಂಡು ಅದರಲ್ಲಿ ಮೆತ್ತನೆಯ ಭಾಗವನ್ನು ಮಾತ್ರ ಆರಿಸಿಕೊಂಡು ಈ ಅದ್ಭುತ ರಥವನ್ನು ಯುವಕರು ನಿರ್ಮಿಸಿದ್ದಾರೆ. ದಿನನಿತ್ಯ 50ಕ್ಕೂ ಅಧಿಕ ನುರಿತ ಕೆಲಸಗಾರರು ಸುಮಾರು 45 ದಿನಗಳ ಕಾಲ ಕೆಲಸ ಮಾಡಿ ಈ ವಿಶಿಷ್ಟ ರಥ ತಯಾರಿಸಿದ್ದಾರೆ. ಇದಕ್ಕಾಗಿ ಸುಮಾರು 6 ಲಕ್ಷ ರೂಪಾಯಿಯನ್ನ ಈ ಸಮಾಜದ ಯುವಕರೇ ಖರ್ಚು ಮಾಡಿದ್ದಾರೆ. ಪ್ರತಿನಿತ್ಯ ಬಿದಿರಿನ ಕೆಲಸ ಮಾಡುತ್ತೇವೆ. ಮೊರ, ಬುಟ್ಟಿ, ಸೇರಿದಂತೆ ಇತರ ವಸ್ತುಗಳನ್ನು ಮಾಡುವ ನಮಗೆ ಬಿದಿರಿನಲ್ಲಿ ಕೆಲಸ ಸುಲಭ. ಆದರೆ ಬಿದಿರಿನ ರಥ ಮಾಡುವುದು ಬಹಳ ಶ್ರಮ ಮತ್ತು ಸಮಯ ಹಿಡಿಯಿತು. ಕಷ್ಟಪಟ್ಟು ಈ ಬಿದಿರಿನ ರಥ ನಿರ್ಮಿಸಿದ್ದೇವೆ, ಈಗ ಭಕ್ತರು ಈ ರಥವನ್ನು ನೋಡಿ ಹರ್ಷ ವ್ಯಕ್ತಪಡಿಸುತ್ತಿರುವುದು ತಮ್ಮ ಸಾರ್ಥಕವಾಯಿತು ಎಂಬ ಭಾವನೆ ಮೂಡಿದೆ ಎನ್ನುತ್ತಾರೆ ಮೇದಾರ ಸಮಾಜದ ಯುವಕರು.
![Lord Ganesha in Bamboo chariot](https://etvbharatimages.akamaized.net/etvbharat/prod-images/17-09-2024/kn-hvr-02-bamboose-ratha-7202143_15092024184629_1509f_1726406189_573.jpg)
ಇವರಿಗೂ ಪ್ಲಾಸ್ಟಿಕ್ ಶಾಪ; ಹಿಂದೆ ಒಂದು ಕಾಲವಿತ್ತು ಮನುಷ್ಯನ ಹುಟ್ಟಿನಿಂದ ಹಿಡಿದು ಅಂತ್ಯದವರೆಗೆ ಬಿದಿರಿನ ವಸ್ತುಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಪ್ಲಾಸ್ಟಿಕ್ ಫೈಬರ್ ಬಂದ ನಂತರ ನಮ್ಮ ಕಲೆ ಮೂಲೆಗುಂಪಾಗುತ್ತಿದೆ. ನಮ್ಮ ಕಲೆ ದಿನದಿಂದ ದಿನಕ್ಕೆ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿದೆ. ಸರ್ಕಾರ ಇದಕ್ಕೆ ಸೂಕ್ತ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಸಮಾಜದ ಹಿರಿಯರು.
ಕಳೆದ ವರ್ಷ ಬಿದಿರಿನಲ್ಲಿಯೇ ಪ್ಯಾರಿಸ್‌ನ ಐಫೆಲ್ ಟವರ್ ನಿರ್ಮಿಸಿದ್ದೆವು. ಈ ವರ್ಷ ನಮ್ಮ ರಾಜ್ಯದ ಐತಿಹಾಸಿಕ ಹಂಪಿ ಕಲ್ಲಿನ ರಥದ ಪ್ರತಿಕೃತಿಯನ್ನ ರಚಿಸಲು ಮುಂದಾದೆವು. ಆರಂಭದಲ್ಲಿ ಸ್ವಲ್ಪ ಕಷ್ಟವಾಯಿತು. ದಿನ ಕಳೆದಂತೆ ಕಲಾಕೃತಿ ಹಿಡಿತಕ್ಕೆ ಬಂದು ಇದೀಗ ಕಲ್ಲಿನ ರಥದ ತದ್ರೂಪದಂತೆ ಬಿದಿರಿನಲ್ಲಿ ರಥ ನಿರ್ಮಾಣವಾಗಿದೆ. ಗಣೇಶನ ದರ್ಶನಕ್ಕೆ ಬರುವ ಜನರು ಈ ಕಲಾಕೃತಿಯನ್ನು ನೋಡಿ ಸಂಭ್ರಮಿಸುತ್ತಾರೆ. ಕುಟುಂಬ ಸದಸ್ಯರ ಜೊತೆ ಬರುವ ಭಕ್ತರು ಬಿದಿರಿನ ರಥದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಆಗ ನಾವು ಶ್ರಮ ಪಟ್ಟಿದ್ದಕ್ಕೆ ಸಾರ್ಥಕವಾಯಿತು ಎನ್ನುತ್ತಿದ್ದಾರೆ ಮೇದಾರ ಯುವಕರು.
![Lord Ganesha in Bamboo chariot](https://etvbharatimages.akamaized.net/etvbharat/prod-images/17-09-2024/kn-hvr-02-bamboose-ratha-7202143_15092024184629_1509f_1726406189_1013.jpg)
ರಾಣೆಬೆನ್ನೂರು ಪಟ್ಟಣದ ಮೇದಾರ ಗಜಾನನ ಸಮಿತಿ ಕಳೆದ 46 ವರ್ಷಗಳಿಂದ ಸಾರ್ವಜನಿಕವಾಗಿ ಗಣೇಶ ಸ್ಥಾಪನೆ ಮಾಡುತ್ತಿದೆ. ತಮ್ಮ ಕುಲಕಸುಬಾಗಿರುವ ಬಿದಿರಿನ ಕೈಕೆಲಸವನ್ನೇ ಈ ಸಮಾಜ ಗಣಪತಿಯ ಅಲಂಕಾರದಲ್ಲಿ ಬಳಸುವ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದೆ. ಯಾವುದೇ ತಂತ್ರಜ್ಞಾನ ಬಳಕೆ ಮಾಡದೆ ಪರಿಸರಸ್ನೇಹಿಯಾಗಿರುವ ಬಿದಿರು ಕಲಾವಿದರ ಕೈಚಳಕದಲ್ಲಿ ಸಾಂಪ್ರದಾಯಿಕವಾಗಿ ಮೈದಳೆದಿರುವ ರಥ ಗಣೇಶ ಭಕ್ತರ ಕಣ್ಮನ ಸೆಳೆಯುತ್ತಿದೆ.