ಬೆಂಗಳೂರು: ನಾಗಮಂಗಲಕ್ಕೆ ಹೋಗಿದ್ದಾಗ ಅಲ್ಲಿನ ಪ್ರತ್ಯಕ್ಷದರ್ಶಿಗಳು ಪಾಕ್ ಪರ ಘೋಷಣೆ ಬಗ್ಗೆ ಹೇಳಿದ್ದಾರೆ. ಇದರ ಬಗ್ಗೆ ಸರ್ಕಾರ ತನಿಖೆ ಮಾಡಲಿ. ಪೆಟ್ರೋಲ್ ಬಾಂಬ್ ತಯಾರಿಕೆಗೆ ಸಮಯ ಬೇಕು, ಅಲ್ಲಿ ಏಕಾಏಕಿ ಹೇಗೆ ಪೆಟ್ರೋಲ್ ಬಾಂಬ್ ಎಸೆದರು? ತಲ್ವಾರ್ಗಳನ್ನು ತಂದಿದ್ದು ಹೇಗೆ? ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಏನೇ ಆದರೂ ಬಿಜೆಪಿ ಮೇಲೆ ಗೂಬೆ ಕೂರಿಸೋದೇ ಸರ್ಕಾರದ ಕೆಲಸವಾಗಿದೆ. ಹಲವು ಘಟನೆಗಳಿಗೆ ಕೇರಳ ನಂಟಿದೆ. ಈ ಬಗ್ಗೆ ಸರ್ಕಾರದಿಂದ ತನಿಖೆ ಆಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ಯಾಲೆಸ್ತೇನ್ ಧ್ವಜ ಹಾರಾಡಿದೆ. ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರ ಇರೋಕಡೆ ಹಬ್ಬ. ಕೋಮು ದಳ್ಳುರಿ ಆರಂಭವಾಗಿದೆ. ಮಂಗಳೂರಿನ ಬಂಟ್ವಾಳದಲ್ಲಿ ಸವಾಲ್ ಹಾಕಿದವರನ್ನ ಜೈಲಿಗೆ ಹಾಕಬೇಕಿತ್ತು. ಪೊಲೀಸರು ಅವರನ್ನ ಕೂರಿಸಿ ಕಾಫಿ ಕೊಟ್ಟು, ಕರದಾಗ ಬನ್ನಿ ಅಂತ ಹೇಳಿ ಕಳುಹಿಸಿದ್ದಾರೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ನವರು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು - ಅಶೋಕ್ ಲೇವಡಿ: ನಾಗಮಂಗಲ ಘಟನೆ ಬಗ್ಗೆ ಆರ್ ಅಶೋಕ್ ಸುಳ್ಳು ಹೇಳಿದ್ದಾರೆ ಎಂದ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಅಶೋಕ್ ಪ್ರತಿಕ್ರಿಯೆ ನೀಡಿ, ನಾವು ಯಾವಾಗಲೂ ಸುಳ್ಳೇ ಹೇಳೋದು. ಕಾಂಗ್ರೆಸ್ನವರು ಮಾತ್ರ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಎಂದು ಲೇವಡಿ ಮಾಡಿದರು. ಮೈತ್ರಿ ನಾಯಕ ಕುಮಾರಸ್ವಾಮಿ ಎರಡೂ ಸಮುದಾಯಕ್ಕೆ ಪರಿಹಾರ ನೀಡಬೇಕು ಎಂದು ನೀಡಿರುವ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಕುಮಾರಸ್ವಾಮಿ ಅವರು ಅಲಯನ್ಸ್ ಆಗಿದ್ದಾರೆ. ಆದರೆ, ಅವರ ಸಿದ್ಧಾಂತ ಬಿಡೋದಿಲ್ಲ ಅಂತ ಹೇಳಿದ್ದಾರೆ. ಅವರ ಕೆಲಸ ಅವರು ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಯಡಿಯೂರಪ್ಪನವರ ಮಗ ಎಂಬ ಅಹಂಕಾರವಿಲ್ಲ, ಹೆಮ್ಮೆ ಇದೆ: ಬಿ.ವೈ. ವಿಜಯೇಂದ್ರ - BJP State President
ಕಲ್ಬುರ್ಗಿ ಕ್ಯಾಬಿನೆಟ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಇದು ಹೋದ ಸಿದ್ದ, ಬಂದಾ ಸಿದ್ದ ಅಷ್ಟೇ. ಹೋಗಿ ಬಿರ್ಯಾನಿ ತಿಂದು ಬರ್ತಾರೆ. ಇತಿಹಾಸದಲ್ಲಿ ಐದು ಸಾವಿರ ಕೋಟಿ ಯಾರೂ ಕೊಟ್ಟಿಲ್ಲ ಅಂದ್ರು. ಯಡಿಯೂರಪ್ಪ ಅದರ ಎರಡರಷ್ಟು ಕೊಟ್ಟಿದ್ರು. ಇವರ ಸಭೆಯಿಂದ ಏನೂ ಆಗಲ್ಲ ಎಂದು ಟೀಕಿಸಿದರು.
ರಮೇಶ್ ಜಾರಕಿಹೊಳಿ ಆಕ್ರೋಶದ ಬಗ್ಗೆ ಪ್ರತಿಕ್ರಿಯೆಗೆ ನಕಾರ: ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೋಶ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅಶೋಕ್, ನಾನು ಆ ಬಗ್ಗೆ ನೋಡಿಲ್ಲ, ಸಂಘದ ಜೊತೆ ಸಭೆ ನಡೆಸಿದ ಮೇಲೆ ಈ ರೀತಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎನ್ನುವುದು ಸರಿಯಲ್ಲ, ಸಂಘ ರಾಜಕೀಯ ಪಕ್ಷ ಅಲ್ಲ. ಸಾಂಸ್ಕೃತಿಕ ರಾಯಭಾರಿ ಅಷ್ಟೇ. ನಾನೂ ಕೂಡ 50 ವರ್ಷ ಸಂಘದಲ್ಲಿ ಇದ್ದೇನೆ. ಯಾವುದೇ ರಾಜಕೀಯ ವಿಚಾರ ಅವರು ಚರ್ಚೆ ಮಾಡಲ್ಲ. ನಾನೂ ಕೂಡ ರಾಜಕಾರಣಿ. ಅದಕ್ಕೂ ಮೊದಲು ನಾನು ಸಂಘದವನು. ಆರ್ಎಸ್ಎಸ್ಗೆ ನೂರು ವರ್ಷ ಆಗ್ತಿದೆ. ಹಾಗಾಗಿ ಕಾರ್ಯಕ್ರಮ ನಡೆಯಲಿದೆ. ರಮೇಶ್ ಜಾರಕಿಹೊಳಿ ಕೇಂದ್ರದ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ. ಅವರ ಜೊತೆಯೇ ಚರ್ಚೆ ಮಾಡುತ್ತಾರೆ ಎಂದರು.
ಮುನಿರತ್ನ ವಿಚಾರದಲ್ಲಿ ಒಕ್ಕಲಿಗ ನಾಯಕರ ಆಕ್ರೋಶ ವಿಚಾರದ ಕುರಿತು ಹೇಳಿಕೆ ನೀಡಿದ ಅಶೋಕ್, ದೇವೇಗೌಡರ ಕುಟುಂಬದ ಮರ್ಯಾದೆ ಹೋಗುವಾಗ ಎಲ್ಲಿದ್ರು? ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರು. ಅವರ ಕುಟುಂಬದ್ದೇ ಮರ್ಯಾದೆ ಹೋಗುವಾಗ ಎಲ್ಲಿದ್ರಿ? ಯಾಕೆ ಅವರ ಮರ್ಯಾದೆ ಹೋಗುವಂತೆ ಮಾಡಿದ್ರಿ.? ಒಕ್ಕಲಿಗ ಅಂತೀರಿ, ಹಾಗಾದ್ರೆ ಸಿದ್ದರಾಮಯ್ಯ ಅವರನ್ನ ತೆಗೆದು, ಒಕ್ಕಲಿಗರನ್ನ ಕೂರಿಸಿ. ಅಷ್ಟೊಂದು ಜನ ಒಕ್ಕಲಿಗರು ಇದ್ದಾರೆ, ಒಬ್ಬರನ್ನ ಸಿಎಂ ಮಾಡಲಿ. ಪರೀಕ್ಷೆ ಅಂತ ಅಮೆರಿಕಾಗೆ ಪೇಪರ್, ಪೆನ್ನು ಹಿಡಿದು ಹೋಗಿದ್ದಾರೆ. ಅವರು ಒಕ್ಕಲಿಗರೇ ಅಲ್ವಾ? ಅವರನ್ನೂ ಸಿಎಂ ಮಾಡಲಿ ಬಿಡಿ ವ್ಯಂಗ್ಯವಾಡಿದರು.
ರಾಜ್ಯಪಾಲರ ಪತ್ರ ವಿವಾದ: ಅಧಿಕಾರಿ/ನೌಕರರ ಪ್ರಾಸಿಕ್ಯೂಷನ್ ವಿವರ ಕೇಳಿ ರಾಜ್ಯಪಾಲರ ಪತ್ರ ವಿಚಾರವನ್ನ ವಿವಾದ ಮಾಡಲಾಗಿದೆ, ರಾಜ್ಯಪಾಲರು ಸರ್ಕಾರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯಪಾಲರು ಕಾನೂನು ಪ್ರಕಾರ ಪತ್ರ ಬರೆದಿದ್ದಾರೆ. ರಾಜ್ಯಪಾಲರಿಗೆ ಮಾಹಿತಿ ಕೇಳುವ ಅಧಿಕಾರ ಇದೆ, ಕೇಳಿದ್ದಾರೆ ಅಷ್ಟೇ ಮಾಹಿತಿ ಬಂದ ನಂತರ ರಾಜ್ಯಪಾಲರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಅಶೋಕ್ ತಿಳಿಸಿದರು.
ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ: ನಾಗಮಂಗಲದಲ್ಲಿ ಗಣಪತಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಆಗಬೇಕು. ನಾಗಮಂಗಲ ಗಲಭೆಗೆ ಕೇರಳದ ನಂಟಿದೆ. ಈ ಪ್ರಕರಣವನ್ನು ರಾಜ್ಯದ ಪೊಲೀಸರಿಂದ ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ರಾಜ್ಯದ ಹಲವು ಕಡೆ ನಿನ್ನೆ ಪಾಲೆಸ್ತೇನ್ ಧ್ವಜ ಹಾರಿಸಲಾಗಿದೆ. ರಾಜ್ಯದಲ್ಲಿ ದೇಶದ್ರೋಹಿಗಳು ಮೇಲುಗೈ ಸಾಧಿಸುತ್ತಿದ್ದು, ಇವರಿಗೆ ಕುಮ್ಮಕ್ಕು ಕೊಡುವ ಸರ್ಕಾರ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಗಣಪತಿಗೂ ರಕ್ಷಣೆ ಇಲ್ಲದಂತಾಗಿದೆ. ಪಿಎಫ್ಐನವರು ಈಗ ಎಸ್ಡಿಪಿಐ ಸೇರಿದ್ದಾರೆ. ಅಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದರು.