ನವದೆಹಲಿ: ತಲೆನೋವು ಎಂಬುದು ಸಾಮಾನ್ಯ ಸಮಸ್ಯೆಯಾದರೂ ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದಲ್ಲಿ ಇದು ಅಂಗವೈಕಲ್ಯ ಮತ್ತು ಸಾವಿಗೂ ಕಾರಣವಾಗುತ್ತದೆ ಎಂದು ಹೈದರಾಬಾದ್ ಮೂಲದ ನರ ರೋಗತಜ್ಞ ಸುಧೀರ್ ಕುಮಾರ್ ತಿಳಿಸಿದ್ದಾರೆ.
ತಲೆನೋವು ಎಂಬುದು ಸಾಮಾನ್ಯವಾಗಿ ಗಂಭೀರವಾಗಿರುವುದಿಲ್ಲ. ಮೈಗ್ರೇನ್ ಮತ್ತು ಒತ್ತಡದಲ್ಲಿ ತಲೆನೋವುಗಳು ಸಾಮಾನ್ಯವಾಗಿರುತ್ತದೆ. ಇವುಗಳು ಗಂಭೀರವಾದ ಸಮಸ್ಯೆ ಹೊಂದಿರುವುದಿಲ್ಲ. ಇವುಗಳಿಗೆ ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ ಎಂದು ಹೈದರಾಬಾದ್ನ ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಆದಾಗ್ಯೂ ಎಲ್ಲ ರೀತಿಯ ತಲೆನೋವುಗಳು ಸೌಮ್ಯ ಸ್ವರೂಪದ್ದಾಗಿರುವುದಿಲ್ಲ. ಕೆಲವು ತಲೆನೋವುಗಳು ಗಂಭೀರವಾಗಿದ್ದು, ಇವುಗಳನ್ನು ಸರಿಯಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡದೇ ಹೋದಲ್ಲಿ ಅಂಗವೈಕಲ್ಯ ಮತ್ತು ಸಾವಿಗೂ ಕಾರಣವಾಗಬಹುದಾಗಿದೆ ಎನ್ನುತ್ತಾರೆ ಅವರು. ಈ ರೀತಿಯ ತೀವ್ರತರವಾದ ತಲೆನೋವಿಗೆ ಕಾರಣ ಸಬ್ ಅರಾಕ್ನಾಯಿಡ್ ಹ್ಯಾಮರೇಜ್ ಆಗಿರುತ್ತದೆ. ಇದು ಜೀವಕ್ಕೆ ಅಪಾಯ ಒಡ್ಡುವ ಮಿದುಳಿನ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಈ ತಲೆನೋವಿನ ಬಗ್ಗೆ ಇರಲಿ ಜಾಗೃತಿ: ನಿದ್ದೆಯಿಂದ ವ್ಯಕ್ತಿಯನ್ನು ಎಚ್ಚರಿಸುವ ತಲೆ ನೋವು ಅಥವಾ ಬೆಳಗ್ಗೆ ಏಳುತ್ತಿದ್ದಂತೆ ಕಾಡುವ ತಲೆ ನೋವು ಅಥವಾ ವಾಂತಿ, ಎರಡು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು, ಬ್ರೈನ್ ಟ್ಯೂಮರ್ಗಳು ಆಗಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ತೋಳು ಅಥವಾ ಕಾಲಿನ ದುರ್ಬಲತೆ ಜೊತೆಗೆ ಬರುವ ತಲೆ ನೋವುಗಳು ಪಾರ್ಶ್ವವಾಯುವಿನ ಸೂಚನೆ ನೀಡುತ್ತದೆ. ಜ್ವರ ಸಂಬಂಧಿತ ತಲೆ ನೋವು ಮತ್ತು ಮೆನಿಂಜೈಟಿಸ್ (ಮಿದುಳು ಜ್ವರ) ಮತ್ತು ಜ್ವರ ಮತ್ತು ಸೀನುವಿಕೆಯ ಜೊತೆಗೆ ತಲೆನೋವಿನ ಕುರಿತು ಕಾಳಜಿವಹಿಸುವುದು ಅಗತ್ಯ.
50 ವರ್ಷ ಮೀರಿದವರಲ್ಲಿ ಕಂಡು ಬರುವ ತಲೆನೋವುಗಳು 72 ಗಂಟೆಗಳ ಕಾಲ ಹಾಗೇ ಉಳಿದರೆ ಅಥವಾ ಔಷಧಗಳಿಗೂ ಈ ತಲೆನೋವು ಉಪಶಮನ ಆಗದೇ ಹೋದಲ್ಲಿ ಈ ಬಗ್ಗೆ ಕೂಡ ಎಚ್ಚರವಹಿಸುವುದು ಅಗತ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ತಲೆನೋವಿನ ಲಯದಲ್ಲಿ ಬದಲಾವಣೆ, ತೀವ್ರತೆ ಅಥವಾ ಅದರ ಲಕ್ಷಣಗಳು ಅಪಾಯದ ಅಂಶಗಳನ್ನು ಹೊಂದಿದ್ದು, ಈ ಬಗ್ಗೆ ತನಿಖೆ ಅವಶ್ಯವಾಗಿದೆ. ತಲೆನೋವಿನ ಜೊತೆಗೆ ಈ ಎಲ್ಲ ಲಕ್ಷಣಗಳು ಸಂಬಂಧ ಹೊಂದಿರುವುದು ಕಂಡು ಬಂದಾಗ ತಕ್ಷಣಕ್ಕೆ ನರರೋಗತಜ್ಞರನ್ನು ಭೇಟಿಯಾಗಿ, ಮಿದುಳಿನ ಸ್ಕ್ಯಾನ್ ಅಥವಾ ಇತರ ತನಿಖೆಗೆ ಒಳಗಾಗುವುದು ಅವಶ್ಯ. ಈ ಮೂಲಕ ಅದರ ಕಾರಣ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಆರಂಭ ಮಾಡಬಹುದಾಗಿದೆ. ಆರಂಭಿಕ ಪತ್ತೆ ಮತ್ತು ಸರಿಯಾದ ಚಿಕಿತ್ಸೆಯನ್ನು ವೇಗವಾಗಿ ಪ್ರಾರಂಭಿಸುವುದರಿಂದ ಜೀವ ಉಳಿಸಬಹುದು ಎನ್ನುತ್ತಾರೆ ವೈದ್ಯರು. (ಐಎಎನ್ಎಸ್)
ಇದನ್ನೂ ಓದಿ:ನೀವು ರಾತ್ರಿ 12ರ ನಂತರ ಮಲಗುತ್ತೀರಾ? ಇದು ಅನಾರೋಗ್ಯದ ಎಚ್ಚರಿಕೆಯ ಘಂಟೆ