Sugar Level Increase Reasons: ಇಂದಿನ ಜೀವನಶೈಲಿ, ಬದಲಾಗುತ್ತಿರುವ ಆಹಾರ ಪದ್ಧತಿಯಿಂದಾಗಿ ಮಧುಮೇಹ ಅನೇಕರನ್ನು ಕಾಡುತ್ತಿದೆ. ಮಧುಮೇಹದ ನಂತರ ಆಹಾರ ಹಾಗೂ ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ಈ ಸಮಯದಲ್ಲಿ ಮಾಡುವ ಕೆಲವು ಸಣ್ಣ ತಪ್ಪುಗಳು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ವೇಗವಾಗಿ ಏರಿಸುತ್ತದೆ ಎನ್ನುತ್ತಾರೆ ತಜ್ಞರು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಬಯಸಿದರೆ ಈ ತಪ್ಪುಗಳನ್ನು ಮಾಡಬೇಡಿ.
ಸರಿಯಾಗಿ ನಿದ್ರೆ ಬರದೇ ಇರುವುದು: ನಮ್ಮ ದೇಹವು ಆರೋಗ್ಯವಾಗಿರಲು ಸರಿಯಾದ ವಿಶ್ರಾಂತಿಯ ಅಗತ್ಯವಿದೆ. ವಿಶೇಷವಾಗಿ ನೀವು ಮಧುಮೇಹಿಗಳಾಗಿದ್ದರೆ, ಕನಿಷ್ಟ 8 ಗಂಟೆಗಳ ಕಾಲ ಮಲಗುವ ಅಭ್ಯಾಸ ಹೊಂದಿರಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. Sleep Medicine Reviews ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ದೇಹಕ್ಕೆ ಸರಿಯಾದ ವಿಶ್ರಾಂತಿ ನೀಡದಿದ್ದರೆ ಮಧುಮೇಹ ಹೆಚ್ಚಾಗಬಹುದು ಎಂದು ತಿಳಿಸಿದೆ.
'Impact of Sleep and Circadian Disturbances on Glucose Metabolism and Type 2 Diabetes' ಎಂಬ ಸಂಶೋಧನೆಯಲ್ಲಿ ಡಾ.ಈವ್ ವ್ಯಾನ್ ಕೌಟರ್ (Eve Van Cauter) ಭಾಗವಹಿಸಿದ್ದರು. ರಾತ್ರಿ ತಡವಾಗಿ ಮಲಗಿದರೆ ಮೆಟಬಾಲಿಕ್ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೆ, ಕಡಿಮೆ ಅವಧಿಯ ನಿದ್ರೆಯಿಂದಾಗಿ, ಒತ್ತಡ ಮತ್ತು ಕಿರಿಕಿರಿ ಹೆಚ್ಚಾಗುತ್ತದೆ. ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗುತ್ತದೆ. ಪರಿಣಾಮ, ಇದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಊಟದ ನಂತರ ವಾಕಿಂಗ್: ಚಳಿಗಾಲ ಬಂದಿದೆ. ಇದು ಬಹುತೇಕ ಎಲ್ಲರ ದೇಹವನ್ನು ತುಂಬಾ ನಿಧಾನಗೊಳಿಸುತ್ತದೆ. ರಾತ್ರಿ ಊಟವಾದ ಮೇಲೆ ಹಲವರು ರಗ್ ಹೊದ್ದು ಮಲಗುತ್ತಾರೆ. ಆದರೆ, ನೀವು ಮಧುಮೇಹಿಗಳಾಗಿದ್ದರೆ ಇದು ಒಳ್ಳೆಯ ಅಭ್ಯಾಸವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ. ರಾತ್ರಿ ಊಟದ ನಂತರ ನೇರವಾಗಿ ಮಲಗಬಾರದು. ಕನಿಷ್ಠ 20ರಿಂದ 30 ನಿಮಿಷಗಳ ಕಾಲ ವಾಕಿಂಗ್ ಮಾಡಲು ತಜ್ಞರು ತಿಳಿಸುತ್ತಾರೆ.
ಸಿಹಿ ತಿನ್ನುತ್ತಿದ್ದೀರಾ?: ಕೆಲವರಿಗೆ ರಾತ್ರಿ ಮಲಗುವ ಮುನ್ನ ಸಿಹಿ, ಟೀ, ಕಾಫಿ ತಿನ್ನುವ ಅಭ್ಯಾಸವೂ ಇರುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ನಿಮಗೆ ಸಿಹಿ ತಿನ್ನಬೇಕೆಂದು ಅನಿಸಿದರೆ, ಸ್ವಲ್ಪ ದೇಸಿ ಬೆಲ್ಲವನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಚಹಾ ಅಥವಾ ಕಾಫಿಗೆ ಬದಲಾಗಿ ಹಸಿರು ಚಹಾ ಅಥವಾ ಕಪ್ಪು ಚಹಾ ಕುಡಿಯಲು ತಜ್ಞರು ಸಲಹೆ ಕೊಡುತ್ತಾರೆ.
ಊಟದ ಸಮಯದಲ್ಲಿ ಈ ತಪ್ಪು ಮಾಡಬೇಡಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಪ್ರತಿದಿನ ಒಂದೇ ಸಮಯದಲ್ಲಿ ಊಟ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಆದಷ್ಟು ಬೇಗ ಊಟ ಮುಗಿಸಲು ಪ್ರಯತ್ನಿಸಬೇಕು. ಅಲ್ಲದೆ, ನೀವು ಎಣ್ಣೆಯುಕ್ತ ಮತ್ತು ಕಾರ್ಬೋಹೈಡ್ರೇಟ್‌ಭರಿತ ಆಹಾರ ಸೇವಿಸಬಾರದು ಎಂದು ಅವರು ಹೇಳುತ್ತಾರೆ. ವಿಶೇಷವಾಗಿ ಬಿಳಿ ಅಕ್ಕಿ ಮತ್ತು ಆಲೂಗಡ್ಡೆಯನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಕಡಿಮೆ ಗ್ಲೈಸೆಮಿಕ್ ಹೊಂದಿರುವ ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿರುವ ಆಹಾರವನ್ನು ಆರಿಸಿಕೊಳ್ಳಬೇಕು.
ಸಾಕಷ್ಟು ನೀರು ಕುಡಿಯಿರಿ: ಚಳಿಗಾಲದಲ್ಲಿ ನೀವು ಹೆಚ್ಚು ಬಾಯಾರಿಕೆಯನ್ನು ಅನುಭವಿಸುವುದಿಲ್ಲ. ಪರಿಣಾಮವಾಗಿ, ಸಾಕಷ್ಟು ನೀರು ಕುಡಿಯದ ಕಾರಣ ದೇಹಕ್ಕೆ ಸರಿಯಾದ ಪ್ರಮಾಣದ ನೀರು ಸಿಗುವುದಿಲ್ಲ. ಅನೇಕ ಜನರು ರಾತ್ರಿಯಲ್ಲಿ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ರಾತ್ರಿ ನೀರು ಕುಡಿಯುವುದನ್ನು ನಿಲ್ಲಿಸಿ. ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಅದಕ್ಕಾಗಿಯೇ ಪ್ರತಿದಿನ ದೇಹಕ್ಕೆ ಅಗತ್ಯವಿರುವಷ್ಟು ಕುಡಿಯುವುದು ಬಹಳ ಮುಖ್ಯ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಅನ್ನು ವೀಕ್ಷಿಸಬಹುದು: https://pubmed.ncbi.nlm.nih.gov/33651564/