ಕರ್ನಾಟಕ

karnataka

ETV Bharat / health

ಪಾಕಿಸ್ತಾನದಲ್ಲಿ ನಿರ್ಮೂಲನೆಯಾಗದ ಪೋಲಿಯೊ: ಬಲೂಚಿಸ್ತಾನದಲ್ಲಿ ವರ್ಷದ 14ನೇ ಪ್ರಕರಣ ಪತ್ತೆ - polio in Pakistan - POLIO IN PAKISTAN

ಪಾಕಿಸ್ತಾನದಲ್ಲಿ ಪೋಲಿಯೊ ಈಗಲೂ ಸಂಪೂರ್ಣವಾಗಿ ನಿರ್ನಾಮವಾಗದಿರುವುದು ವಿಶ್ವದ ಕಳವಳಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ANI)

By ANI

Published : Aug 11, 2024, 4:37 PM IST

ಇಸ್ಲಾಮಾಬಾದ್: ಪೋಲಿಯೊ ರೋಗವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಪಾಕಿಸ್ತಾನ ಇನ್ನೂ ಹೋರಾಡುತ್ತಲೇ ಇದೆ. ಇಡೀ ವಿಶ್ವದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಈ ಎರಡು ದೇಶಗಳಲ್ಲಿ ಪೋಲಿಯೋ ಪ್ರಕರಣಗಳು ಈಗಲೂ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಆಗಸ್ಟ್ 10 ರಂದು, ಬಲೂಚಿಸ್ತಾನದ ಕಿಲ್ಲಾ ಸೈಫುಲ್ಲಾ ಜಿಲ್ಲೆಯಲ್ಲಿ ವರ್ಷದ 14 ನೇ ಪೋಲಿಯೊ ಪ್ರಕರಣ ವರದಿಯಾಗಿದ್ದು, 2024 ರಲ್ಲಿ ದೇಶದಲ್ಲಿ ಪೋಲಿಯೊವೈರಸ್ ಪ್ರಕರಣಗಳ ಸಂಖ್ಯೆ 13 ಕ್ಕೆ ಏರಿದೆ. ಇದಲ್ಲದೆ ಬಲೂಚಿಸ್ತಾನದಲ್ಲಿ ಎರಡು ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಒಂದು ಸೇರಿದಂತೆ ದೇಶದಲ್ಲಿ ಇನ್ನೂ ಮೂರು ಪ್ರಕರಣಗಳು ವರದಿಯಾಗಿವೆ.

ಅಲ್ ಜಜೀರಾ ವರದಿಯ ಪ್ರಕಾರ, 2015 ರಿಂದ ಪಾಕಿಸ್ತಾನದಲ್ಲಿ ಒಟ್ಟು 362 ಪೋಲಿಯೊ ಪ್ರಕರಣಗಳು ವರದಿಯಾಗಿವೆ. ಕನಿಷ್ಠ 3,50,000 ಪೋಲಿಯೊ ವ್ಯಾಕ್ಸಿನ್ ಕಾರ್ಯಕರ್ತರು ವಾರ್ಷಿಕವಾಗಿ 300 ಮಿಲಿಯನ್ ಡೋಸ್ ಲಸಿಕೆಯನ್ನು ನೀಡಿದ್ದರೂ ಮತ್ತು 2013 ರಿಂದ 2023 ರವರೆಗೆ 9.3 ಬಿಲಿಯನ್ ಡಾಲರ್ ಖರ್ಚು ಮಾಡಿದರೂ, ದೇಶದಿಂದ ಪೋಲಿಯೊವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.

ಹೆಚ್ಚು ಸಾಂಕ್ರಾಮಿಕವಾಗಿರುವ ಪೋಲಿಯೊ ರೋಗದ ಲಕ್ಷಣಗಳು ಆರಂಭದಲ್ಲಿ ಕಂಡು ಬರುವುದಿಲ್ಲ ಅಥವಾ ಲಕ್ಷಣಗಳು ತೀರಾ ಸೌಮ್ಯವಾಗಿರುತ್ತವೆ. ಆದರೆ ಇದರಿಂದ ಕೈಕಾಲುಗಳು ಪಾರ್ಶ್ವವಾಯುವಿಗೆ ತುತ್ತಾಗಬಹುದು. ಪೋಲಿಯೊ ಕಲುಷಿತ ನೀರು ಅಥವಾ ಆಹಾರದ ಮೂಲಕ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ. ಬೆಡ್ ರೆಸ್ಟ್, ನೋವು ನಿವಾರಕಗಳು ಮತ್ತು ಪೋರ್ಟಬಲ್ ವೆಂಟಿಲೇಟರ್​ಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಪಾಕಿಸ್ತಾನದ ದಕ್ಷಿಣ ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ನಿರ್ಮೂಲನೆ ಪ್ರಯತ್ನಗಳಿಗೆ ಅಡ್ಡಿಯುಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೋಲಿಯೊ ನಿರ್ಮೂಲನಾ ಪ್ರಾದೇಶಿಕ ನಿರ್ದೇಶಕ ಡಾ.ಹಮೀದ್ ಜಫಾರಿ ಹೇಳಿದ್ದಾರೆ. ಈ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಘರ್ಷ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಸರ್ಕಾರದ ವಿರುದ್ಧ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿರುತ್ತವೆ ಮತ್ತು ಇಲ್ಲಿ ಸರ್ಕಾರದ ವಿರುದ್ಧ ಹತಾಶ ಭಾವನೆ ಇದೆ ಎಂದು ಜಫಾರಿ ಹೇಳಿದರು. ಪಾಕಿಸ್ತಾನದಾದ್ಯಂತ 50 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವೈರಸ್ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ಪೋಲಿಯೊ ಲಸಿಕಾಕರಣ ಮಾತ್ರವಲ್ಲದೆ ಪೋಲಿಯೊ ಕಾರ್ಯಕರ್ತರ ತಂಡಗಳಿಗೆ ರಕ್ಷಣೆ ನೀಡುವ ಭದ್ರತಾ ಸಿಬ್ಬಂದಿಯ ಮೇಲೂ ದಾಳಿಗಳು ನಡೆಯುತ್ತಿವೆ ಎಂದು ಡಬ್ಲ್ಯುಎಚ್ಒ ಅಧಿಕಾರಿ ಹೇಳಿದ್ದಾರೆ. ಈ ವರ್ಷದ ಪೋಲಿಯೊ ಲಸಿಕಾರಣ ಅಭಿಯಾನಗಳ ಸಂದರ್ಭಗಳಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಕನಿಷ್ಠ ಆರು ಜನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 102 ಪೋಲಿಯೊ ಕ್ಷೇತ್ರ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಉಲ್ಲೇಖಿಸಿದೆ.

ಏತನ್ಮಧ್ಯೆ, ಬಲೂಚಿಸ್ತಾನದ ಕಿಲಾ ಪ್ರದೇಶದಲ್ಲಿ 11 ತಿಂಗಳ ಶಿಶು ಪೋಲಿಯೊವೈರಸ್ ನಿಂದ ಉಂಟಾದ ಪಾರ್ಶ್ವವಾಯುವಿಗೆ ಬಲಿಯಾಗಿದೆ. ಜುಲೈ 17 ರಂದು ಪಾರ್ಶ್ವವಾಯುವಿನ ಲಕ್ಷಣಗಳನ್ನು ಹೊಂದಿದ್ದ ಕಿಲಾದ ಮಗು ಜಿಲ್ಲೆಯಲ್ಲಿ ಪತ್ತೆಯಾದ ಐದು ಪ್ರಕರಣಗಳಲ್ಲಿ ಒಂದಾಗಿದೆ. ಬಲೂಚಿಸ್ತಾನದ ಚಮನ್, ಕ್ವೆಟ್ಟಾ, ಝೋಬ್, ಡೇರಾ ಬುಗ್ತಿ ಮತ್ತು ಝಾಲ್ ಮಾಗ್ಸಿಯಲ್ಲಿ ಕೂಡ ಪೋಲಿಯೊ ಪ್ರಕರಣಗಳು ಕಂಡು ಬಂದಿವೆ. ಲಸಿಕೆಯ ಬಗ್ಗೆ ನಿರಂತರವಾಗಿ ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿರುವುದು ಲಸಿಕಾ ಅಭಿಯಾನಕ್ಕೆ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ.

ಇದನ್ನೂ ಓದಿ : ಸುಟ್ಟ ಗಾಯಗಳನ್ನು ಗುಣಪಡಿಸಲು ಹೊಸ ರೀತಿಯ ಬ್ಯಾಂಡೇಜ್ ಅಭಿವೃದ್ಧಿಪಡಿಸಿದ ಸಂಶೋಧಕರು: ಏನು ವಿಶೇಷತೆ? - researchers invent bandahe

ABOUT THE AUTHOR

...view details