Physical Activity Increase Life Expectancy:ನೀವು ನಿತ್ಯ ಸುಮಾರು ಎರಡೂವರೆ ಗಂಟೆಗಳ ಕಾಲ ವಾಕಿಂಗ್ ಮಾಡುತ್ತೀರಾ? ಇದರಿಂದ ನಿಮ್ಮ ಜೀವಿತಾವಧಿಯನ್ನು ಇನ್ನೂ 11 ವರ್ಷಗಳವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರತಿದಿನ ಎರಡೂವರೆ ಗಂಟೆಗಳಿಗಿಂತ ಹೆಚ್ಚು ಕಾಲ ನಡೆಯುವವರಿಗೆ ದೀರ್ಘಕಾಲದ ಕಾಯಿಲೆಗಳು ಬರುವ ಅಪಾಯವೂ ತುಂಬಾ ಕಡಿಮೆ ಇರುತ್ತದೆ ಎಂದು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿನ ಅಧ್ಯಯನ ಬಹಿರಂಗಪಡಿಸಿದೆ. ಇದರ ಪರಿಣಾಮವಾಗಿ ಜೀವಿತಾವಧಿ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಹೆಲ್ತ್ ಸ್ಟ್ಯಾಟಿಸ್ಟಿಕ್ಸ್, 2003- 2006ರ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಟಿಕಾಂಶ ಪರೀಕ್ಷೆ ಸಮೀಕ್ಷೆ, 2019ರ ಜನಗಣತಿ ದತ್ತಾಂಶವನ್ನು (National Center for Health Statistics, 2003–2006 National Health and Nutritional Examination Survey 2019) ಬಳಸಿಕೊಂಡು ಈ ಸಂಶೋಧನೆ ನಡೆಸಲಾಗಿದೆ.
ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಅಧ್ಯಯನವು 40 ವರ್ಷಕ್ಕಿಂತ ಮೇಲ್ಪಟ್ಟ ಶೇ. 25 ರಷ್ಟು ಅಮೆರಿಕನ್ನರು ಸ್ವಲ್ಪ ಹೆಚ್ಚು ದೈಹಿಕವಾಗಿ ಸಕ್ರಿಯರಾಗಿದ್ದರೆ ಸುಮಾರು ಐದು ವರ್ಷಗಳ ಕಾಲ ಹೆಚ್ಚು ಬದುಕಬಹುದು ಎಂದು ಅಧ್ಯಯನದಿಂದ ಕಂಡು ಹಿಡಿಯಲಾಗಿದೆ. ಜೊತೆಗೆ ಕಡಿಮೆ ಕ್ರಿಯಾಶೀಲರಾಗಿರುವವರಿಗೆ ಹೋಲಿಸಿದರೆ ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರುವ ಜನರ ಸುಮಾರು 11 ವರ್ಷಗಳ ಜೀವಿತಾವಧಿಯು ಹೆಚ್ಚಾಗುತ್ತದೆ ಎಂದು ಸಂಶೋಧನೆ ಅಂದಾಜಿಸಿದೆ. ಕಡಿಮೆ ದೈಹಿಕ ಚಟುವಟಿಕೆ ಮಾಡುವವರು ಹೃದ್ರೋಗ, ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ಸಂಶೋಧಕರು ವಿವರಿಸುತ್ತಾರೆ.