ಕರ್ನಾಟಕ

karnataka

ETV Bharat / health

ರೋಗ ನಿರೋಧಕ ಶಕ್ತಿ ಮೀರಿಸುವ ಸಾಮರ್ಥ್ಯ ಹೊಂದಿದೆ ಹೊಸ ಕೋವಿಡ್ ರೂಪಾಂತರ 'FLiRT' - New Covid Variant - NEW COVID VARIANT

ಹೊಸ ಕೋವಿಡ್ ರೂಪಾಂತರ ಎಫ್​ಎಲ್​ಐಆರ್​ಟಿ ರೋಗನಿರೋಧಕ ಶಕ್ತಿಯನ್ನು ಮೀರಿಸಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೊಸ ಕೋವಿಡ್ ರೂಪಾಂತರ ಫ್ಲರ್ಟ್
ಹೊಸ ಕೋವಿಡ್ ರೂಪಾಂತರ ಫ್ಲರ್ಟ್ (IANS)

By ETV Bharat Karnataka Team

Published : May 6, 2024, 12:51 PM IST

ನವದೆಹಲಿ: ಅಮೆರಿಕದಲ್ಲಿ ಸದ್ಯ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್ -19 ರೂಪಾಂತರ 'ಎಫ್ಎಲ್ಐಆರ್​ಟಿ' (FLiRT- ಫ್ಲರ್ಟ್​) ಎರಡು ಸ್ಪೈಕ್ ಪ್ರೋಟೀನ್​ಗಳ ನಡುವೆ ಅಮೈನೋ ಆಮ್ಲಗಳ ಟ್ರಾನ್ಸ್ ಸಬ್​ಸ್ಟಿಟ್ಯೂಶನ್​​ನಿಂದಾಗಿ ರೋಗನಿರೋಧಕ ಶಕ್ತಿಯನ್ನು ಮೀರಿ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ಭಾನುವಾರ ಹೇಳಿದ್ದಾರೆ.

ಒಮಿಕ್ರಾನ್​​ನ ಜೆಎನ್ .1 ವಂಶಾವಳಿಗೆ ಸೇರಿದ ಎಫ್​​ಎಲ್​ಐಆರ್​ಟಿ, ಯುಎಸ್, ಯುಕೆ, ನ್ಯೂಜಿಲೆಂಡ್ ಮತ್ತು ದಕ್ಷಿಣ ಕೊರಿಯಾದಲ್ಲಿ ಹಿಂದಿನ ಕೋವಿಡ್​ ರೂಪಾಂತರ ಎರಿಸ್ ಅನ್ನು ಮೀರಿ ವೇಗವಾಗಿ ಹರಡುತ್ತಿದೆ ಎಂದು ದೆಹಲಿಯ ಸಿ ಕೆ ಬಿರ್ಲಾ ಆಸ್ಪತ್ರೆಯ (ಆರ್) ಆಂತರಿಕ ಔಷಧ ನಿರ್ದೇಶಕ ರಾಜೀವ್ ಗುಪ್ತಾ ಹೇಳಿದ್ದಾರೆ.

"ಈ ದೇಶಗಳಲ್ಲಿ ಕೋವಿಡ್​ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಾಗಲು ಈ ರೂಪಾಂತರವೇ ಕಾರಣವಾಗಿದೆ. ಆದಾಗ್ಯೂ ಇದು ತುಲನಾತ್ಮಕವಾಗಿ ಸಣ್ಣ ಅಲೆಯಾಗಿ ಉಳಿದಿದೆ. ಒಟ್ಟಾರೆ ಸಾವಿನ ಪ್ರಮಾಣ ಹೆಚ್ಚಿಲ್ಲ" ಎಂದು ಗುಪ್ತಾ ಐಎಎನ್ಎಸ್ ​ಗೆ ತಿಳಿಸಿದರು.

ಅಮೆರಿಕದ ಸಾಂಕ್ರಾಮಿಕ ರೋಗ ಸೊಸೈಟಿಯ ಪ್ರಕಾರ, 'ಎಫ್ಎಲ್ಐಆರ್​ಟಿ' ಎಂಬ ಅಡ್ಡಹೆಸರು ಅವುಗಳ ರೂಪಾಂತರಗಳ ತಾಂತ್ರಿಕ ಹೆಸರುಗಳನ್ನು ಆಧರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಇದನ್ನು ಪ್ರಮುಖ ರೂಪಾಂತರ ಎಂದು ಮರು ವರ್ಗೀಕರಿಸಿದೆ ಮತ್ತು ನಿಕಟ ಮೇಲ್ವಿಚಾರಣೆಗೆ ಸಲಹೆ ನೀಡಿದೆ. ಈ ರೀತಿಯಾಗಿ ಹೊಸ ತಳಿಗಳು ಹೊರಹೊಮ್ಮುತ್ತಲೇ ಇರುತ್ತವೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ತಜ್ಞ ಧೀರೇನ್ ಗುಪ್ತಾ ಹೇಳುತ್ತಾರೆ.

"ಅದೃಷ್ಟವಶಾತ್, ಡೆಲ್ಟಾ ಸ್ಟ್ರೈನ್ ಮಾಡಿದಂತೆ ಯಾವುದೇ ಒಮಿಕ್ರಾನ್ ವಂಶಾವಳಿಯು ಗಮನಾರ್ಹ ಶ್ವಾಸಕೋಶದ ಹಾನಿಯನ್ನು ಉಂಟುಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಹಾನಿಯ ಸಾಧ್ಯತೆಯು ಮೇಲ್ಭಾಗದ ಉಸಿರಾಟದ ನಾಳಕ್ಕೆ ಸೀಮಿತವಾಗಿದೆ. ವೈರಸ್​ನ ಪ್ರಮುಖ ಬದಲಾವಣೆಯ ಮೇಲೆ ಜಾಗರೂಕತೆಯಿಂದ ಕಣ್ಗಾವಲು ವಹಿಸಬೇಕು" ಎಂದು ಅವರು ಹೇಳಿದರು.

ತಜ್ಞರ ಪ್ರಕಾರ, ಮೊನೊಕ್ಲೋನಲ್ ಪ್ರತಿಕಾಯಗಳ ಹೆಚ್ಚಿದ ಬಳಕೆಯು ಈ ರೂಪಾಂತರಕ್ಕೆ ಕಾರಣವಾಗಬಹುದು. ಹೊಸ ರೂಪಾಂತರದ ರೋಗಲಕ್ಷಣಗಳು ಗಂಟಲು ನೋವು, ಕೆಮ್ಮು, ಆಯಾಸ, ಮೂಗಿನ ದಟ್ಟಣೆ, ಮೂಗು ಸೋರುವಿಕೆ, ತಲೆನೋವು, ಸ್ನಾಯು ನೋವು, ಜ್ವರ ಮತ್ತು ರುಚಿ ಮತ್ತು ವಾಸನೆಯ ನಷ್ಟದಂತಹ ಇತರ ಒಮಿಕ್ರಾನ್ ಉಪ-ರೂಪಾಂತರಗಳಿಗೆ ಹೋಲುತ್ತವೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಮೂರು ವರ್ಷಗಳ ಹಿಂದೆ ಕೋವಿಡ್ ಸೊಂಕು ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ : ಚೀನಾದ ಚಾಂಗ್'ಇ-6 ಯಶಸ್ವಿ ಉಡಾವಣೆ: ಚಂದ್ರನ ಮಣ್ಣು ಭೂಮಿಗೆ ತರಲಿದೆ ನೌಕೆ - China Lunar Mission

ABOUT THE AUTHOR

...view details