ಮುಂಗಾರು ಮಳೆ ಆರಂಭವಾಗಿದೆ. ಮಳೆಗಾಲದಲ್ಲಿ ಚಹಾ ಪ್ರಿಯರು ಯಾವುದೋ ನೆಪದಲ್ಲಿ ಚಹಾ ಹೀರಲು ಹಾತೊರೆಯುತ್ತಾರೆ. ಇಷ್ಟು ಮಾತ್ರವಲ್ಲದೇ, ಚಹಾ ಮಳೆಗಾಲದಲ್ಲಿ ಶೀತ, ಕೆಮ್ಮು ಮತ್ತು ಜ್ವರ ಉಪಶಮನ ಮಾಡುತ್ತದೆ. ಆದರೆ, ಚಹಾವನ್ನು ತಪ್ಪಾದ ರೀತಿಯಲ್ಲಿ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ಸಾಕಷ್ಟು ಹಾನಿಕಾರಕ. ಹೌದು, ಇಂತಹ ಚಹಾ ಸೇವನೆಯಿಂದ ಗ್ಯಾಸ್, ಅಸಿಡಿಟಿ, ಹುಳಿ ತೇಗು ಮತ್ತು ಎದೆಯುರಿ ಉಂಟಾಗುತ್ತದೆ. ಇದಲ್ಲದೇ, ಮುಂಜಾನೆ ಟೀ ಕುಡಿಯುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ.
ಚಹಾದಲ್ಲಿ ಲವಂಗ - ಏಲಕ್ಕಿ ಸೇರಿಸಬೇಡಿ: ಮಳೆಗಾಲದಲ್ಲಿ ಸಾಕಷ್ಟು ಜನರು ಚಹಾ ಮಾಡುವಾಗ ಲವಂಗ, ಏಲಕ್ಕಿ, ಶುಂಠಿ ಮತ್ತು ದಾಲ್ಚಿನ್ನಿ ಬಳಸುತ್ತಾರೆ. ಸಹಜವಾಗಿ, ಇವೆಲ್ಲವೂ ಚಹಾದ ರುಚಿಯನ್ನು ಹೆಚ್ಚಿಸುತ್ತವೆ. ಆದರೆ, ಅವು ಸ್ವಭಾವತಃ ಬಿಸಿಯಾಗಿರುತ್ತವೆ. ಈ ಕಾರಣದಿಂದಾಗಿ ಚಹಾದಲ್ಲಿ ಇವುಗಳನ್ನು ಹೆಚ್ಚು ಸೇವಿಸುವುದರಿಂದ ಪಿತ್ತರಸ ಮತ್ತು ಕಫದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಈ ಮಳೆಗಾಲದಲ್ಲಿ ಚಹಾದಲ್ಲಿ ಇವೆಲ್ಲವನ್ನೂ ಬೆರೆಸುವುದನ್ನು ತಪ್ಪಿಸಿ.
ಸ್ಟ್ರಾಂಗ್ ಟೀಯಿಂದಲೂ ಸಮಸ್ಯೆ:ಸಮಾನ್ಯವಾಗಿ ಎಲ್ಲೆ ಹೋದರೂ ಸ್ಟ್ರಾಂಗ್ ಟೀ ಅಥವಾ ಗಟ್ಟಿಯಾದ ಚಹಾ ಕುಡಿಯಬೇಕು ಅಂತಾ ಬಹುತೇಕ ಜನರಿಗೆ ಎನಿಸುತ್ತದೆ. ಅದರಲ್ಲೂ, ಮಳೆಗಾಲದಲ್ಲಿ ಸ್ಟ್ರಾಂಗ್ ಟೀ ಬಯಕೆ ಹೆಚ್ಚಾಗುತ್ತದೆ. ಆದರೆ ಚಹಾವನ್ನು ದೀರ್ಘಕಾಲದವರೆಗೆ ಕುದಿಸುವುದು ಆರೋಗ್ಯಕ್ಕೆ ಹಾನಿಕಾರಕ. ಸ್ಟ್ರಾಂಗ್ ಟೀ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುವುದಲ್ಲದೇ, ಅಧಿಕ ಪ್ರಮಾಣದ ಕೆಫೀನ್ ಉತ್ಪತ್ತಿಯಾಗುವುದರಿಂದ ನಿದ್ರೆಯನ್ನು ಹಾಳು ಮಾಡುತ್ತದೆ.