ಹೈದರಾಬಾದ್: ಧೂಮಪಾನವು ಕ್ಯಾನ್ಸರ್, ಹೃದ್ರೋಗ, ಬಂಜೆತನ, ಪೋಷಕಾಂಶ ಕೊರತೆಯಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಆದರೆ, ಇತ್ತೀಚೆಗೆ ಪಾಶ್ಚರ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಇದು ದೀರ್ಘಕಾಲ ರೋಗ ನಿರೋಧಕ ವ್ಯವಸ್ಥೆ ಮೇಲೆಯೂ ಪರಿಣಾಮ ಬೀರುತ್ತದೆ ಎಂಬುದು ಸಹ ಗೊತ್ತಾಗಿದೆ. ಅಷ್ಟೇ ಅಲ್ಲ, ಧೂಮಪಾನ ತೊರೆದ ಬಳಿಕವೂ ಇದರ ಅಡ್ಡ ಪರಿಣಾಮ 10 ರಿಂದ 15 ವರ್ಷಗಳ ಕಾಡಲಿದೆ ಎಂಬುದನ್ನು ಬಹಿರಂಗ ಪಡಿಸಿದೆ.
ನಮ್ಮ ದೇಹದಲ್ಲಿ ಸೂಕ್ಷ್ಮಜೀವಿಗಳು ದಾಳಿ ಮಾಡಿದಾಗ ರೋಗ ನಿರೋಧಕ ವ್ಯವಸ್ಥೆಯು ಪ್ರತಿಕ್ರಿಯಿಸುವ ರೀತಿ ಸದಾ ಒಂದೇ ರೀತಿಯಾಗಿ ಇರುವುದಿಲ್ಲ. ಇದು ಅನೇಕ ಬಾರಿ ನಮ್ಮ ವಯಸ್ಸು, ಲಿಂಗ ಮತ್ತು ವಂಶವಾಹಿನಿ ಮೇಲೆ ಆಧಾರಿತವಾಗಿದೆ. ಇದರ ಹೊರತಾಗಿ ಅನೇಕ ಇತರ ಅಂಶಗಳು ಕೂಡ ಈ ರೋಗ ನಿರೋಧಕ ವ್ಯವಸ್ಥೆ ಮೇಲೆ ಪ್ರಭಾವ ಬೀರುತ್ತವೆ. ಸಂಶೋಧಕರು ತಿಳಿಸುವಂತೆ ಅದರಲ್ಲಿ ಧೂಮಪಾನದ ಅಂಶವೂ ಒಂದಾಗಿದೆ. ಮಿಲಿಯು ಆಂಟೆರಿಯಾ ಕೊಹಾರ್ಟ್ ಅಧ್ಯಯನದಲ್ಲಿ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಸೂಕ್ಷ್ಮಜೀವಿಗಳು ದಾಳಿ ಮಾಡಿದಾಗ ರೋಗನಿರೋಧಕ ವ್ಯವಸ್ಥೆ ಬಿಡುಗಡೆ ಮಾಡುವ ಪ್ರೋಟಿನ್ ಮತ್ತು ಸೈಟೊಕಿನೆಸ್ ಡೋಸ್ ಆಧಾರದ ಮೇಲೆ ಇದರ ಪತ್ತೆ ಮಾಡಲಾಗಿದೆ.
ಇದರಲ್ಲಿ ರೋಗ ನಿರೋಧಕ ಶಕ್ತಿ ಮೇಲೆ ಅಧಿಕ ಪ್ರಭಾವ ಬೀರುವ ದೇಹದ ತೂಕ ದರ (ಬಿಎಂಐ), ನಿದ್ರೆ, ಧೂಮಪಾನ, ವ್ಯಾಯಾಮ ಮತ್ತು ಲಸಿಕೆ, ಬಾಲ್ಯದ ರೋಗಗಳು ಪರೀಕ್ಷಿಸಲಾಗಿದೆ. ಸೋಂಕಿನಿಂದ ಉಂಟಾಗುವ ಉರಿಯೂತದ ಪ್ರತಿಕ್ರಿಯೆಯು ಧೂಮಪಾನಿಗಳಲ್ಲಿ ಹೆಚ್ಚಿದೆ. ಜೊತೆಗೆ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುವ ಜೀವಕೋಶಗಳ ಕಾರ್ಯವು ನಿಧಾನಗೊಂಡಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಅಂದರೆ ಧೂಮಪಾನ ವ್ಯಸನವೂ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆ ಮಾತ್ರವಲ್ಲ ಜೊತೆಗೆ ಹೊಂದಿಕೆಯ ರೋಗ ನಿರೋಧಕ ವ್ಯವಸ್ಥೆ ಮೇಲೆ ಹಾನಿ ಮಾಡಿದೆ.