ಹೈದರಾಬಾದ್ : ಹೆಚ್ಚಿನ ಜನರು ಊಟದ ನಂತರ ಪಾತ್ರೆಗಳನ್ನು ತೊಳೆಯದೇ ಸಿಂಕ್‌ನಲ್ಲಿ ಬಿಟ್ಟು ಮರುದಿನ ಬೆಳಗ್ಗೆ ಅವುಗಳನ್ನು ಸ್ವಚ್ಛಗೊಳಿಸುತ್ತಾರೆ. ನೀವು ಅದೇ ರೀತಿ ಮಾಡುತ್ತೀರಾ? ಆದರೂ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞರು. ರಾತ್ರಿಯಿಡೀ ಸಿಂಕ್‌ನಲ್ಲಿ ಪಾತ್ರೆಗಳನ್ನು ಇಡುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಏಕೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ನಿಮಗಿದ್ದರೆ ಈ ಸ್ಟೋರಿಯನ್ನು ಓದಿ.
ಪಾತ್ರೆಗಳಲ್ಲಿ ಬಹಳಷ್ಟು ಆಹಾರ ಉಳಿದಿರುತ್ತದೆ. ಅಂತಹ ಪಾತ್ರೆಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸುತ್ತಾರೆ. ಇದರಿಂದ ಬ್ಯಾಕ್ಟೀರಿಯಾ ಬೆಳೆಯಲು ಸಾಕಷ್ಟು ಸಮಯ ಸಿಗುತ್ತದೆ ಎನ್ನುತ್ತಾರೆ ತಜ್ಞರು. ಮೇಲಾಗಿ ಹಾಗೆ ಬೆಳೆಯುವ ಬ್ಯಾಕ್ಟೀರಿಯಾ ಸಿಂಕ್‌ನಲ್ಲಿ ಮಾತ್ರ ಉಳಿಯದೇ, ಅಡುಗೆ ಮನೆಯ ಇತರ ಪ್ರದೇಶಗಳಿಗೂ ಹರಡುತ್ತದೆ ಎಂದಿದ್ದಾರೆ.
ಬೆಳಗ್ಗೆ ಸ್ವಚ್ಛ ಮಾಡಿದರೂ ಅಪಾಯ :ಬೆಳಗ್ಗೆ ಎದ್ದ ನಂತರ ಸಿಂಕ್‌ನಲ್ಲಿ ಇಟ್ಟಿರುವ ಪಾತ್ರೆಗಳನ್ನೆಲ್ಲಾ ಕ್ಲೀನ್ ಮಾಡಿದ ನಂತರ ಎಲ್ಲವೂ ಸ್ವಚ್ಛವಾಗಿದೆ ಎಂದು ಅನಿಸುತ್ತದೆ. ಆದರೆ, ಇಷ್ಟರೊಳಗೆ ಅಡುಗೆ ಮನೆಯೊಳಗೆ ಬ್ಯಾಕ್ಟೀರಿಯಾ ಹರಡಿರುತ್ತವೆ ಎಂದು ತಿಳಿಸಿದ್ದಾರೆ. ಇದನ್ನು ತಿಳಿಯದೇ ಅಡುಗೆಮನೆಯಲ್ಲಿರುವ ಎಲ್ಲ ಪಾತ್ರೆಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ ಮತ್ತು ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಜೀರ್ಣಕ್ರಿಯೆಗೆ ತೊಂದರೆ :ಅಡುಗೆಮನೆಯಲ್ಲಿ ಹರಡುವ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಅಜೀರ್ಣ, ಗ್ಯಾಸ್ಟ್ರಿಕ್, ಉದರಶೂಲೆಯಂತಹ ಸಮಸ್ಯೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ.
ಈ ಪರಿಸ್ಥಿತಿಯನ್ನು ತಪ್ಪಿಸಲು ತಿಂದ ಪಾತ್ರೆಗಳನ್ನು ಕಾಲಕಾಲಕ್ಕೆ ತೊಳೆದರೆ ಆರೋಗ್ಯವಾಗಿರಬಹುದು ಎಂದು ಸಲಹೆ ನೀಡಿದ್ದಾರೆ. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರುವುದಲ್ಲದೇ, ಅಡುಗೆ ಮನೆಯೂ ಸ್ವಚ್ಛವಾಗಿರುತ್ತದೆ ಎಂದು ತಿಳಿಸಿದ್ದಾರೆ.
2019ರಲ್ಲಿ "ಜರ್ನಲ್ ಆಫ್ ಫುಡ್ ಸೇಫ್ಟಿ" ನಲ್ಲಿ ಪ್ರಕಟವಾದ ವರದಿಯ ಅನ್ವಯ ಸಿಂಕ್‌ನಲ್ಲಿ ರಾತ್ರಿಯಿಡೀ ಉಳಿದಿರುವ ಬೌಲ್‌ಗಳಲ್ಲಿ ಇ. ಕೋಲಿಯಂತಹ ಹೆಚ್ಚಿನ ಪ್ರಮಾಣದ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ ಎಂದು ಹೇಳಿತ್ತು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ (USDA)ನ ಪ್ರಮುಖ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ. ಜಾನ್ ಸ್ಮಿತ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ರಾತ್ರಿ ವೇಳೆ ಸಿಂಕ್‌ನಲ್ಲಿ ಇಡುವ ಪಾತ್ರೆಗಳು ರೂಪುಗೊಳ್ಳುವ ಬ್ಯಾಕ್ಟೀರಿಯಾಗಳು ಅಡುಗೆಮನೆಯ ಇತರ ಮೇಲ್ಮೈ ಮತ್ತು ಆಹಾರಕ್ಕೆ ಹರಡುತ್ತದೆ ಮತ್ತು ಇವು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ರಾತ್ರಿ ಸುಸ್ತು, ಸಮಯದ ಅಭಾವ ಅಥವಾ ಇನ್ನಾವುದೇ ಕಾರಣದಿಂದ ಪಾತ್ರೆ ತೊಳೆಯಲು ಸಾಧ್ಯವಾಗದೇ ಇದ್ದರೆ, ಕನಿಷ್ಠ ಆಹಾರ ಪದಾರ್ಥಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕುವಂತೆ ಸೂಚಿಸಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗೆ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದ್ದಾರೆ. ಹಾಗೆಯೇ, ಮರುದಿನ ಆ ಪಾತ್ರೆಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದು ಸ್ವಲ್ಪ ಹೊತ್ತು ಕುದಿಯುವ ನೀರಿನಲ್ಲಿ ಇಡಲು ಸೂಚಿಸಿದ್ದಾರೆ. ಆ ನಂತರ ಬಳಸಿದರೆ ಉತ್ತಮ ಎನ್ನುತ್ತಾರೆ ಅವರು.
ಓದುಗರಿಗೆ ಸೂಚನೆ :ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿಸಿದ ಕ್ಷೇತ್ರದ ಪರಿಣತ ಸಲಹೆ ಪಡೆಯುವುದು ಉತ್ತಮ.
ಇದನ್ನೂ ಓದಿ :ಆಸ್ಪತ್ರೆಗಳ ಸಿಂಕ್ ಬ್ಯಾಕ್ಟೀರಿಯಾಗಳ ಆಗರ; ಅಧ್ಯಯನದಿಂದ ಆತಂಕಕಾರಿ ವಿಚಾರ ಬಯಲು - multidrug resistant bacteria