ಹೈದರಾಬಾದ್:ಮಲಬದ್ಧತೆಯ ಸಮಸ್ಯೆಯು ಹಲವರಿಗೆ ಭಾರಿ ಕಿರಿಕಿರಿಯನ್ನುಂಟು ಮಾಡುತ್ತದೆ. ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಂತೆ ಇಡೀ ದೇಹವನ್ನು ಹಾನಿಗೊಳಿಸುತ್ತದೆ. ಕರುಳಿನ ಚಲನೆಯನ್ನು ನಾವು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ, ಒಟ್ಟಾರೆ ಆರೋಗ್ಯವು ಅಪಾಯದಲ್ಲಿದೆ ಎಂಬುದು ನಿಶ್ಚಿತ. ದೈಹಿಕ ಸಮಸ್ಯೆಗಳಷ್ಟೇ ಅಲ್ಲ, ಮಲಬದ್ಧತೆ, ಗ್ಯಾಸ್ಸ್ಟಿಕ್ನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಮಾನಸಿಕವಾಗಿ ತೀರಾ ಕಿರಿಕಿರಿ ಹಾಗೂ ಖಿನ್ನತೆಗೆ ಒಳಗಾಗಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಈ ಸಮಸ್ಯೆ ನಿವಾರಣೆಗೆ ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಿಗಿಂತ ಯೋಗಾಸನಗಳೇ ಉತ್ತಮ ಎನ್ನುತ್ತಾರೆ ಬಲ್ಲವರು. ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಲು ಮತ್ತು ಮಲಬದ್ಧತೆ ಮತ್ತು ಗ್ಯಾಸ್ಸ್ಟಿಕ್ನಂತಹ ಸಮಸ್ಯೆಗಳನ್ನು ನಿವಾರಿಸಲು ಕೆಲವು ಯೋಗ ಆಸನಗಳು ಇಲ್ಲಿವೆ.
1. ಅಪಾನಾಸನ:ಮೊಣಕಾಲುಗಳಿಂದ ಎದೆಯವರೆಗೆ ಮಾಡುವ ಆಸನವನ್ನು ಅಪಾನಾಸನ ಎಂದು ಕರೆಯಲಾಗುತ್ತದೆ. ನೆಲದ ಮೇಲೆ ಮುಖಾಮುಖಿಯಾಗಿ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆ ಭಾಗಕ್ಕೆ ತನ್ನಿ. ಮೊಣಕಾಲುಗಳನ್ನು ಎದೆಯ ಮೇಲೆ ಇರಿಸಿ ಮತ್ತು ಅವುಗಳನ್ನು ಕೈಗಳಿಂದ ದೃಢವಾಗಿ ಹಿಡಿದುಕೊಳ್ಳಿ. ಇದು 15 ಸೆಕೆಂಡುಗಳ ಕಾಲ ಮಾಡಬೇಕಾಗುತ್ತದೆ. ಸತತ ಆರು ಬಾರಿ ಹೀಗೆ ಮಾಡುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುವುದಲ್ಲದೇ, ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕೂಡಾ ಕರಗಿಸುತ್ತದೆ. ಮುಟ್ಟಿನ ಸೆಳೆತವೂ ಹೀಗೆ ಮಾಡುವುದರಿಂದ ಕಡಿಮೆಯಾಗುತ್ತದೆ.
2. ಪಶ್ಚಿಮೋತ್ಥಾನಾಸನ: ಯೋಗಾಸನಗಳಲ್ಲಿ ಪ್ರಮುಖವಾದದ್ದು ಈ ಪಶ್ಚಿಮೋತ್ಥಾನಾಸನ. ನಿಮ್ಮ ಕಾಲುಗಳನ್ನು ನೆಲದ ಮೇಲೆ ಹರಡಿ ಕುಳಿತುಕೊಳ್ಳಿ ಮತ್ತು ದೇಹದ ಹಿಂಭಾಗವನ್ನು ಮೇಲಕ್ಕೆತ್ತಿ ಮತ್ತು ಹಿಮ್ಮಡಿಯವರೆಗೆ ಮುಂದಕ್ಕೆ ಬಾಗಿ. ಈ ಭಂಗಿಯು ಬೆನ್ನಿನ ಸ್ನಾಯುಗಳನ್ನು ವಿಸ್ತರಿಸುವುದು ಸೇರಿದಂತೆ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
3. ಭುಜಂಗಾಸನ: ಭುಜಂಗಾಸನವು ಹಾವಿನ ಭಂಗಿಯನ್ನು ಹೋಲುತ್ತದೆ. ಇದನ್ನು ನಾಗರ ಭಂಗಿ ಅಂತಲೂ ಕರೆಯುತ್ತಾರೆ. ನೆಲದ ಮೇಲೆ ಮಲಗಿ ಮತ್ತು ನಿಮ್ಮ ಅಂಗೈಗಳ ಮೇಲೆ ಭಾರದಿಂದ ನಿಮ್ಮ ಎದೆಯನ್ನು ಮೇಲಕ್ಕೆತ್ತಿ. ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದು ಮಾತ್ರವಲ್ಲದೇ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.