ಹೈದರಾಬಾದ್:ಎಲ್‌ವಿ ಪ್ರಸಾದ್ ಐ ಇನ್‌ಸ್ಟಿಟ್ಯೂಟ್ (LVPEI) ದೇಶದಲ್ಲೇ ನೇತ್ರಶಾಸ್ತ್ರಕ್ಕೆ ಹೊಸ ರೂಪ ನೀಡಿದ ಸಂಸ್ಥೆ. ಮೂರೂವರೆ ದಶಕಗಳ ಹಿಂದೆ ಹೈದರಾಬಾದ್‌ನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬರಿಗೂ ಅವರ ಸ್ಥಿತಿಗತಿಯನ್ನು ಲೆಕ್ಕಿಸದೆ ಕಣ್ಣಿನ ಆರೈಕೆ ಮಾಡಿದೆ. ಎಲ್‌ವಿಪಿಇಐ ಸಂಸ್ಥೆಯು ಈಗ 50,000 ಕಾರ್ನಿಯಾಗಳನ್ನು ಕಸಿ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ ಮೊದಲ ಜಾಗತಿಕ ಸಂಸ್ಥೆಯಾಗಿದೆ. ಎಲ್.ವಿ.ಪ್ರಸಾದ್ ನೇತ್ರ ಸಂಸ್ಥೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಲ್.ವಿ.ಪ್ರಸಾದ್ ನೇತ್ರಾಲಯದ ಕಾರ್ಯಾಧ್ಯಕ್ಷ ಡಾ.ಪ್ರಶಾಂತ್ ಗಾರ್ಗ್ ಮತ್ತು ಎಲ್‌ವಿಪಿಇಐನ ಸಹಯೋಗಿ ಸಂಸ್ಥೆಯಾದ ಶಾಂತಿಲಾಲ್ ಸಾಂಘ್ವಿ ಕಾರ್ನಿಯಾ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಪ್ರವಿಣ್ ವಡ್ಡವಳ್ಳಿ, ಸಂಸ್ಥೆಯ ಸಂಸ್ಥಾಪಕ ಡಾ.ಗುಲ್ಲಪಲ್ಲಿ ನಾಗೇಶ್ವರ ರಾವ್ ಅವರೊಂದಿಗೆ 'ಈಟಿವಿ ಭಾರತ್' ಸಂದರ್ಶನದ ನಡೆಸಿದ್ದು, ಇದರ ಆಯ್ದ ಭಾಗ ಇಲ್ಲಿದೆ.
- 50,000 ಕಾರ್ನಿಯಾಗಳನ್ನು ಕಸಿ ಮಾಡಿ ಮೈಲಿಗಲ್ಲನ್ನು ತಲುಪಿರುವುದು ದೊಡ್ಡ ಸಾಧನೆಯಾಗಿದೆ, ಇದುವರೆಗಿನ ನಿಮ್ಮ ಒಟ್ಟಾರೆ ಪ್ರಯಾಣ ಹೇಗಿತ್ತು?
ಎಲ್‌ವಿಪಿಇಐ ಸಂಸ್ಥಾಪಕ ಡಾ.ಗುಲ್ಲಪಲ್ಲಿ ನಾಗೇಶ್ವರ ರಾವ್ ಪ್ರತಿಕ್ರಿಯಿಸಿ, ಈ ಪ್ರಯಾಣ ಅದ್ಭುತ. ಭಾರತದಲ್ಲಿ ಇದು ಸಾಧ್ಯವಾಗದ ಪ್ರದೇಶದಲ್ಲಿ ನಾವು ಹಲವಾರು ಜನರ ಜೀವನದ ಮೇಲೆ ಪರಿಣಾಮ ಬೀರಿದ್ದೇವೆ ಎಂಬುದು ತುಂಬಾ ಸಂತೋಷಕರ ವಿಚಾರ. ನಾವು ಈ ಪ್ರಯಾಣವನ್ನು ಪ್ರಾರಂಭಿಸಿದಾಗ, ಈ ಮಾರ್ಗವನ್ನು ಅನುಸರಿಸಬೇಡಿ ಎಂದು ಎಲ್ಲರೂ ನಿರುತ್ಸಾಹಗೊಳಿಸಿದ್ದರು. ಏಕೆಂದರೆ, ಅದು ಯಾವಾಗಲಾದರೂ ವಿಫಲಗೊಳ್ಳುತ್ತೆ ಎಂದು ಭಾವಿಸಿದ್ದರು. ಆದರೆ, ನಾವು ಈ ಪ್ರಯಾಣವನ್ನು ಮುಂದುವರೆಸಿದೆವು, ಅದು ಯಶಸ್ವಿಯೂ ಆಯಿತು. ನಮ್ಮೊಂದಿಗೆ ಅನೇಕ ಜನ ಮತ್ತು ಸಂಘ, ಸಂಸ್ಥೆಗಳು ನೀಡಿದ ಬೆಂಬಲದಿಂದ ಇದು ಸಾಧ್ಯವಾಗಿದೆ. ನಮ್ಮೊಂದಿಗೆ ಈ ಪ್ರಯಾಣದಲ್ಲಿರುವ ಹಲವರಿಗೆ ನಾನು ಕೃತಜ್ಞ. ಅವರಲ್ಲಿ ಅನೇಕರು ನಮಗೆ ತಿಳಿದಿಲ್ಲ. ಆದ್ರೂ ಇದನ್ನು ಸಾಧ್ಯವಾಗಿಸಿದ ಸಾವಿರಾರು ನೇತ್ರದಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಭಾರತದಲ್ಲಿ ಯಾರೂ ನೇತ್ರದಾನ ಮಾಡುವುದಿಲ್ಲ ಎಂಬ ಮಿಥ್ಯೆಯನ್ನು ನಾವು ತಪ್ಪೆಂದು ಸಾಬೀತುಪಡಿಸಿದ್ದೇವೆ. ನೀವು ವ್ಯಕ್ತಿಗೆ ಮನವರಿಕೆ ಮಾಡಿಕೊಟ್ಟರೆ ಮತ್ತು ನೇತ್ರದಾನದ ಪ್ರಯೋಜನಗಳನ್ನು ವಿವರಿಸಿದರೆ, ಅವರು ನೇತ್ರದಾನ ಮಾಡಲು ಒಪ್ಪುತ್ತಾರೆ. ನಮ್ಮ ಅನುಭವದಲ್ಲಿ, ಕನಿಷ್ಠ 60 ಪ್ರತಿಶತ ಕುಟುಂಬಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಈ ಸಂಖ್ಯೆ ಯಾವುದೇ ಅಮೆರಿಕನ್ ಆಸ್ಪತ್ರೆಗಿಂತ ಉತ್ತಮವಾಗಿದೆ.
- ಅಂಕಿಅಂಶಗಳು ಉತ್ತಮವಾಗಿವೆ, ಆದರೆ ಅಂಗಾಂಗ ದಾನ ಮತ್ತು ಕಸಿ ಬಗ್ಗೆ ಜನರಲ್ಲಿರುವ ಆತಂಕಗಳು ಮತ್ತು ಜ್ಞಾನದ ಕೊರತೆಯನ್ನು ಪರಿಗಣಿಸಿ ಅದು ಸುಲಭವಾಗಿರಲಿಲ್ಲ. ಬೆಂಬಲವನ್ನು ವಿಸ್ತರಿಸಲು ನೀವು ಜನರನ್ನು ಹೇಗೆ ಮನವೊಲಿಕೆ ಮಾಡಿದಿರಿ?
ಡಾ.ಗುಲ್ಲಪಲ್ಲಿ ನಾಗೇಶ್ವರ ರಾವ್ ಉತ್ತರಿಸಿ, ಜನರಿಗೆ ಮಾಹಿತಿ ಇದೆ ಮತ್ತು ಜನರು ನೇತ್ರದಾನಕ್ಕೆ ಸಿದ್ಧರಿದ್ದಾರೆ. ಆದ್ರೆ, ನಾವು ಅಭ್ಯಾಸ ಮಾಡುತ್ತಿಲ್ಲ. ನಾವು ಮಾಡಿದ್ದು ಎಲ್ಲಿಂದಲೋ ಪಾಠ ಕಲಿತು ಭಾರತದಲ್ಲಿ ಅಳವಡಿಸಿ ಕೆಲಸ ಮಾಡಿದ್ದೇವೆ. ಇದಕ್ಕಾಗಿ, ನಾವು ಅಮೆರಿಕದ ಕೆಲವು ಸಂಸ್ಥೆಗಳಿಂದ ಸಾಕಷ್ಟು ಬೆಂಬಲ ಮತ್ತು ಸಹಕಾರವನ್ನು ಪಡೆದುಕೊಂಡಿದ್ದೇವೆ. ಯಾವುದೇ ಅಂತಾರಾಷ್ಟ್ರೀಯ ಕಾರ್ನಿಯಲ್ ಟ್ರಾನ್ಸ್‌ಪ್ಲಾಂಟ್ ಇನ್‌ಸ್ಟಿಟ್ಯೂಟ್‌ಗೆ ಸಮಾನವಾದ ಮಾನದಂಡಗಳೊಂದಿಗೆ ನಮ್ಮ ಐ ಬ್ಯಾಂಕ್ ಮತ್ತು ವ್ಯವಸ್ಥೆಗಳನ್ನು ಸ್ಥಾಪಿಸಲು ಅವು ನಮಗೆ ಸಹಾಯ ಮಾಡಿವೆ. ನಾನು ಅಮೆರಿಕದಲ್ಲಿ ತರಬೇತಿ ಪಡೆದಿದ್ದರಿಂದ, ನಾನು ಹಿಂತಿರುಗಿದಾಗ ನಾನು ಭಾರತದಲ್ಲಿ ನನ್ನ ಪ್ರಾಕ್ಟೀಸ್ ಮುಂದುವರಿಸಿದೆ. ತರಬೇತಿ ವ್ಯವಸ್ಥೆಯನ್ನು ಸ್ಥಾಪಿಸಿದೆ. ಜೊತೆಗೆ ಅನೇಕ ವೈದ್ಯರಿಗೆ ತರಬೇತಿ ನೀಡಿದೆ. ಒಂದೇ ಸಮಯದಲ್ಲಿ ವೈದ್ಯರು ಮತ್ತು ಕಾರ್ನಿಯಲ್ ದಾನಿಗಳು ಲಭ್ಯವಿದ್ದರೆ, ಈ ಪ್ರಯಾಣವು ತುಲನಾತ್ಮಕವಾಗಿ ಸುಲಭವಾಗುತ್ತದೆ.
- ಇದೆಲ್ಲವೂ ಬಹಳ ಭರವಸೆಯೆನಿಸಿದರೂ ಕೆಲವು ಸವಾಲುಗಳು ಎದುರಾಗುತ್ತವೆ. ಹೆಚ್ಚು ಗಮನ ಹರಿಸಬೇಕಾದ ಪ್ರದೇಶಗಳ ಬಗ್ಗೆ ನಮಗೆ ನೀವು ಹೇಳಲು ಬಯಸುವಿರಾ?
ಈ ಪ್ರಶ್ನೆಗೆ ಉತ್ತರಿಸಿದ ಡಾ.ಪ್ರಶಾಂತ್ ಗಾರ್ಗ್, ಕಾರ್ನಿಯಲ್ ಕಸಿ ಮಾಡುವ ಜರ್ನಿಯನ್ನು ಯಶಸ್ಸನ್ನು ಕಾಯ್ದುಕೊಳ್ಳುವುದು, ಸುಧಾರಿಸುವುದು ನನ್ನ ತಂಡದ ಸವಾಲಿನ ಕಾರ್ಯವಾಗಿದೆ. ಅನೇಕ ಜನರು ಫಾಲೋ-ಅಪ್‌ಗಾಗಿ ಹಿಂತಿರುಗುವುದಿಲ್ಲ. ಅವರು ಫಾಲೋ-ಅಪ್‌ಗೆ ಹಿಂತಿರುಗದಿದ್ದರೆ, ವೈಫಲ್ಯದ ಸಾಧ್ಯತೆ ಹೆಚ್ಚು. ಫಾಲೋ-ಅಪ್ ಬಹಳ ಮುಖ್ಯ ಎಂದು ಜನರು ಅರ್ಥಮಾಡಿಕೊಳ್ಳಬೇಕು. ಅವರು ವೈದ್ಯರು ನೀಡುವ ಔಷಧಿಗಳು ಮತ್ತು ಸೂಚನೆಗಳನ್ನು ಅನುಸರಿಸಬೇಕು. ಇದನ್ನು ಮಾಡದ ಹೊರತು, ಕಾರ್ನಿಯಲ್ ಕಸಿ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ.
- ಭಾರತದಲ್ಲಿ ಕಾರ್ನಿಯಾ ಕಸಿ ಯಶಸ್ಸಿನ ಪ್ರಮಾಣ ಎಷ್ಟು?
ಡಾ.ಪ್ರಶಾಂತ್ ಗಾರ್ಗ್ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಎಲ್ಲಾ ಅಂಗಾಂಗ ಕಸಿಗಳಲ್ಲಿ ಕಾರ್ನಿಯಾವು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ. ಪ್ರಾಥಮಿಕವಾಗಿ ಕಾರ್ನಿಯಾವು ಬದುಕುಳಿಯಲು ರಕ್ತ ಪೂರೈಕೆಯ ಮೇಲೆ ಅವಲಂಬಿತವಾಗಿಲ್ಲ. ಇದು ಕಣ್ಣಿನೊಳಗಿನ ಆಮ್ಲಜನಕದಿಂದ ಮತ್ತು ವಾತಾವರಣದಿಂದ ಪೋಷಣೆಯನ್ನು ಪಡೆಯುತ್ತದೆ. ಅದಕ್ಕಾಗಿಯೇ ನಾವು ಕಾರ್ನಿಯಾವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಕಸಿ ಮಾಡಿದಾಗ, ದೇಹವು ಅದನ್ನು ವಿದೇಶಿ ವಸ್ತು ಎಂದು ಗುರುತಿಸುವುದಿಲ್ಲ ಮತ್ತು ಆದ್ದರಿಂದ ಅದು ಇತರ ಅಂಗಗಳಿಗಿಂತ ಸುಲಭವಾಗಿ ಸ್ವೀಕರಿಸುತ್ತದೆ.
ಈ ಕಾರಣಕ್ಕಾಗಿ, ರೋಗಿಗಳಲ್ಲಿ ಕಾರ್ನಿಯಾ ಕಸಿ ಯಶಸ್ಸು 96 ರಿಂದ 97 ಪ್ರತಿಶತದಷ್ಟು ಹೆಚ್ಚಿದೆ. ಸೋಂಕಿನಂತಹ ಕೆಲವು ಕಾಯಿಲೆಗಳಲ್ಲಿ, ಯಶಸ್ಸಿನ ಪ್ರಮಾಣವು ಕಡಿಮೆಯಾಗಿರಬಹುದು. ಆದರೆ ಯಶಸ್ಸಿನ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಕಾರ್ನಿಯಾ ಕಸಿ ಮೊದಲ ಬಾರಿಗೆ ಕೆಲಸ ಮಾಡದಿದ್ದರೂ ಸಹ, ಅದನ್ನು ಎರಡನೇ ಬಾರಿಗೆ ಯಶಸ್ವಿಯಾಗಿ ಪುನರಾವರ್ತಿಸಬಹುದು. ಕಾರ್ನಿಯಾ ಕಸಿ ಮೂಲಕ ನಾವು ಕುರುಡುತನವನ್ನು ಗುಣಪಡಿಸಬಹುದು.
- ಕಣ್ಣಿನ ಸಮಸ್ಯೆ ಇರುವವರಲ್ಲಿ ಯಾರಿಗೆ ಕಾರ್ನಿಯಾ ಕಸಿ ಅಗತ್ಯವಿದೆ?
ಶಾಂತಿಲಾಲ್ ಸಾಂಘ್ವಿ ಕಾರ್ನಿಯಾ ಸಂಸ್ಥೆಯ ನಿರ್ದೇಶಕ ಡಾ.ಪ್ರವೀಣ್ ವಡವಳ್ಳಿ ಮಾತನಾಡಿ, ನಾವು ಬಹು ಆಯಾಮದ ವಿಧಾನವನ್ನು ಹೊಂದಿದ್ದೇವೆ. ಕಾರ್ನಿಯಲ್ ಟ್ರಾನ್ಸ್‌ಪ್ಲಾಂಟ್‌ಗಳ ಅಗತ್ಯವನ್ನು ಕಡಿಮೆ ಮಾಡುವುದು ಮೊದಲ ವಿಧಾನವಾಗಿದೆ. ರೋಗನಿರ್ಣಯದ ನಂತರ ಸರಿಯಾದ ಮಧ್ಯಸ್ಥಿಕೆ ಮತ್ತು ಆರಂಭಿಕ ಚಿಕಿತ್ಸೆಯು ಅನೇಕ ರೋಗಿಗಳು ಕಾರ್ನಿಯಲ್ ಕಸಿ ಅಗತ್ಯವಿರುವ ಹಂತವನ್ನು ತಲುಪುವುದನ್ನು ತಡೆಯಬಹುದು. ಅವರು ಆ ಹಂತವನ್ನು ತಲುಪಿದ ನಂತರ, ನಾವು ಈಗ ಲೇಯರ್-ಬೈ-ಲೇಯರ್ ಟ್ರಾನ್ಸ್‌ಪ್ಲಾಂಟ್‌ಗಳಂತಹ ಕಸಿ ವಿಧಾನಗಳಲ್ಲಿ ಪ್ರಗತಿಯನ್ನು ಹೊಂದಿದ್ದೇವೆ. ಇದು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ. ಒಮ್ಮೆ ಕಸಿ ಮಾಡಿದ ನಂತರ, ಪ್ರಯಾಣವು ವೈದ್ಯರಿಗೆ ಮತ್ತು ರೋಗಿಗೆ ಜೀವಿತಾವಧಿಯ ಬದ್ಧತೆಯಾಗುತ್ತದೆ. ನಮ್ಮ ಜೀವನದುದ್ದಕ್ಕೂ ಕಸಿ ಆರೈಕೆಯನ್ನು ನಾವು ಮುಂದುವರಿಸಬೇಕು. ಆದ್ದರಿಂದ ಇದು ಕೇವಲ ಒಂದು ಶಸ್ತ್ರಚಿಕಿತ್ಸೆಗಿಂತ ಬಹುಶಿಸ್ತಿನ ವಿಧಾನವಾಗಿದೆ.
- ನೀವು ಕಾರ್ನಿಯಲ್ ಐ ಬ್ಯಾಂಕ್ ಅನ್ನು ನಿರ್ವಹಿಸುತ್ತಿದ್ದೀರಿ. ಅಂತಹ ಮಹತ್ವದ ವ್ಯಾಪ್ತಿಯನ್ನು ನಿರ್ವಹಿಸುವ ಸವಾಲುಗಳೇನು?
ಡಾ.ಪ್ರವೀಣ್ ವಡವಳ್ಳಿ ಮಾತನಾಡಿ, ದೇಶದಲ್ಲಿ ನೇತ್ರ ಬ್ಯಾಂಕಿಂಗ್ ಸ್ಥಿತಿಯ ಬಗ್ಗೆ ಹೇಳುವುದಾದರೆ, ಹಲವಾರು ಸಮಸ್ಯೆಗಳಿವೆ. ನಮ್ಮ ದೇಶದಲ್ಲಿ ಸುಮಾರು 200 ನೇತ್ರ ಬ್ಯಾಂಕ್‌ಗಳಿವೆ. ಆದರೆ, ಅವುಗಳಲ್ಲಿ 90 ಪ್ರತಿಶತವು ಕಾರ್ಯನಿರ್ವಹಿಸುತ್ತಿಲ್ಲ. ಕಾರ್ನಿಯಾ ಸಂಗ್ರಹಣೆಗೆ ಅವರು ಯಾವುದೇ ವ್ಯವಸ್ಥೆಯನ್ನು ಹೊಂದಿಲ್ಲ. ಪ್ರಸ್ತುತ ದೇಶದಲ್ಲಿ ಸಂಗ್ರಹವಾಗಿರುವ 60,000 ಕಾರ್ನಿಯಾಗಳಲ್ಲಿ 70 ಪ್ರತಿಶತವು ಕೇವಲ 10 ನೇತ್ರ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿದೆ.
ಅಂದರೆ, ದೇಶದಲ್ಲಿ ನೇತ್ರ ಬ್ಯಾಂಕ್ಗಳು ಸ್ಟೇಟಸ್ ಸಿಂಬಲ್ ಆಗಿಬಿಟ್ಟಿವೆ. ಯಾವುದೇ ನೇತ್ರ ಬ್ಯಾಂಕ್‌ನಲ್ಲಿ ಬದ್ಧತೆ ಇಲ್ಲ. ಮತ್ತೊಂದೆಡೆ, ನಾನು ನಮ್ಮ ನಾಲ್ಕು ನೇತ್ರ ಬ್ಯಾಂಕ್‌ಗಳನ್ನು ನಮ್ಮ ಸಂಸ್ಥೆಯ ವಿವಿಧ ಕೇಂದ್ರಗಳಲ್ಲಿ ಅಸ್ತಿತ್ವದಲ್ಲಿರುವ ಇತರ ಬ್ಯಾಂಕುಗಳೊಂದಿಗೆ ಹೋಲಿಸಿದಾಗ, ಅವುಗಳಲ್ಲಿ ಪ್ರತಿಯೊಂದೂ ಅದರ ಸಂಬಂಧಿತ ನೇತ್ರದಾನ ಕೇಂದ್ರಗಳನ್ನು ಹೊಂದಿದೆ. ನಾವು ಪ್ರತಿ ವರ್ಷ 12,000 ಕ್ಕೂ ಹೆಚ್ಚು ಕಾರ್ನಿಯಾಗಳನ್ನು ಸಂಗ್ರಹಿಸಬಹುದು. ಇದು ದೇಶದಲ್ಲಿ ಸಂಗ್ರಹಿಸಲಾದ ಕಾರ್ನಿಯಾಗಳಲ್ಲಿ ಸುಮಾರು 20 ಪ್ರತಿಶತವಾಗಿದೆ. ನಾನು ನೋಡುವ ಕೆಲವು ಸಮಸ್ಯೆಗಳೆಂದರೆ ಬದ್ಧತೆಯ ಕೊರತೆ ಮತ್ತು ಕಣ್ಣಿನ ಬ್ಯಾಂಕ್‌ಗಳನ್ನು ಸಮರ್ಪಕವಾಗಿ ತರಬೇತಿ ಪಡೆದ ಸಂಪನ್ಮೂಲಗಳಿಂದ ನಡೆಸಬೇಕು.
ಕಣ್ಣಿನ ಬ್ಯಾಂಕ್‌ಗಳನ್ನು ಪ್ರಾರಂಭಿಸುವ ಅನೇಕ ಜನರು ಮಾನವ ಸಂಪನ್ಮೂಲಗಳನ್ನು ತರಬೇತಿ ಮಾಡಲು ಹೂಡಿಕೆ ಮಾಡುವುದಿಲ್ಲ. ಅವರು ತಂತ್ರಜ್ಞರು ಮತ್ತು ಸಲಹೆಗಾರರಿಗೆ ತರಬೇತಿ ನೀಡುವುದಿಲ್ಲ. ಆದ್ದರಿಂದ, ಐ ಬ್ಯಾಂಕ್‌ಗಳ ಚಟುವಟಿಕೆಗಳು ಕಡಿಮೆ ತರಬೇತಿ ಪಡೆದ ಅಥವಾ ತರಬೇತಿ ಪಡೆಯದ ಜನರ ಕೈಗೆ ಹೋಗುತ್ತವೆ. ಇದರಿಂದಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಮಾನವ ಕಾರ್ನಿಯಾಗಳನ್ನು ಸಂಗ್ರಹಿಸುತ್ತಿದ್ದೀರಿ ಮತ್ತು ಈ ಅಂಗಾಂಶಗಳನ್ನು ಇನ್ನೊಬ್ಬ ಮನುಷ್ಯನಿಗೆ ಕಸಿ ಮಾಡಲು ಹೊರಟಿದ್ದೀರಿ, ಆದ್ದರಿಂದ ಕಾರ್ನಿಯಾದ ಗುಣಮಟ್ಟ ಸರಿಯಾಗಿಲ್ಲದಿದ್ದರೆ ರೋಗಗಳು ಹರಡುವ ಅಪಾಯವಿದೆ. ಇದು ಕೇವಲ ಒಬ್ಬ ವ್ಯಕ್ತಿಯಿಂದ ಕಾರ್ನಿಯಾವನ್ನು ತೆಗೆದುಕೊಂಡು ಅದನ್ನು ಇನ್ನೊಬ್ಬರಿಗೆ ಕಸಿ ಮಾಡುವ ವಿಷಯವಲ್ಲ, ನೀವು ಕೆಲವು ವೈದ್ಯಕೀಯ ಮಾನದಂಡಗಳನ್ನು ಅನುಸರಿಸಬೇಕು. ಇದರಿಂದ ಕಾರ್ನಿಯಾ ಕಸಿ ಮಾಡುವಿಕೆಯ ಅಪೇಕ್ಷಿತ ಉದ್ದೇಶವನ್ನು ಸಾಧಿಸಲಾಗುತ್ತದೆ, ಇದರಿಂದ ದೃಷ್ಟಿ ಮರುಸ್ಥಾಪನೆಯಾಗಿದೆ.