ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಇದರ ನಡುವೆ ಹೆಚ್ಚಿನ ತಾಪಮಾನ ಇರುವ ದಿನಗಳಲ್ಲಿ ಮಧುಮೇಹ, (ಶುಗರ್), ರಕ್ತದೊತ್ತಡ (ಬಿಪಿ) ಮತ್ತು ಸ್ಥೂಲಕಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸಾಮಾನ್ಯ ತಾಪಮಾನದ ದಿನಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಸ್ಪೇನ್‌ನಲ್ಲಿ ಒಂದು ದಶಕದಲ್ಲಿ ಬೇಸಿಗೆಯ ಹೆಚ್ಚಿನ ತಾಪಮಾನದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಮಾಹಿತಿವನ್ನು ವಿಶ್ಲೇಷಿಸಿ, ಅಧ್ಯಯನ ವರದಿ ಮಾಡಲಾಗಿದೆ. ಇದರಲ್ಲಿ ಹಲವಾರು ವಿಷಯಗಳನ್ನು ಬಹಿರಂಗ ಪಡಿಸಲಾಗಿದೆ.
ಅಧಿಕ ತಾಪಮಾನವು ಶುಗರ್, ಬಿಪಿ ಮತ್ತು ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದಂತೆ. ಸ್ಥೂಲಕಾಯದ ಜನರು ಶಾಖದ ಹೊಡೆತಕ್ಕೆ ಹೆಚ್ಚು ಒಳಗಾಗುತ್ತಾರೆ. ಹೆಚ್ಚಿನ ಮಟ್ಟದ ವಾಯು ಮಾಲಿನ್ಯವು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಗೆ ಆಸ್ಪತ್ರೆಗೆ ಸೇರಿಸುವ ಅಪಾಯವನ್ನು ಹೆಚ್ಚಿಸುತ್ತದೆ. ಬಿಸಿಯಾದ ಈ ದಿನಗಳಲ್ಲಿ ಗಾಯಗಳಿಂದಾಗಿ ಪುರುಷರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಹೆಚ್ಚು. ಏತನ್ಮಧ್ಯೆ, ಸಾಂಕ್ರಾಮಿಕ ರೋಗಗಳು, ಹಾರ್ಮೋನುಗಳು, ಚಯಾಪಚಯ, ಉಸಿರಾಟ ಮತ್ತು ಮೂತ್ರದ ಕಾಯಿಲೆಗಳಿಂದಾಗಿ ಮಹಿಳೆಯರು ಆಸ್ಪತ್ರೆಗೆ ದಾಖಲಾಗುವ ಅಪಾಯವೂ ಹೆಚ್ಚಂತೆ.
ಬಿಸಿ ದಿನಗಳಲ್ಲಿ ದೇಹದಲ್ಲಿ ಹೆಚ್ಚು ರಕ್ತ ಹರಿಯುತ್ತದೆ. ಇದು ಬೆವರುವಿಕೆಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ತಾಪಮಾನವು ಏರಿದಾಗ, ಮಧುಮೇಹ, ಬಿಪಿ ಮತ್ತು ಬೊಜ್ಜುಗಳಿಂದ ಬಳಲುತ್ತಿರುವವರು ಕೆಲವು ತೊಂದರೆಗಳನ್ನು ಎದುರಿಸುತ್ತಾರೆ ಎಂದು ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಸಂಶೋಧಕ ಹಿಚಮ್ ಅಚೆ ಬಾಕ್ ಹೇಳಿದ್ದಾರೆ.
ರೋಗಿಗಳ ಮಾಹಿತಿ ವಿಶ್ಲೇಷಣೆ: ಸ್ಪೇನ್‌ನ 48 ಪ್ರಾಂತ್ಯಗಳು ಮತ್ತು ಪೂರ್ವ ಸ್ಪೇನ್‌ನ ದ್ವೀಪಸಮೂಹಗಳಲ್ಲಿನ ಆಸ್ಪತ್ರೆಗಳಲ್ಲಿ 2006-2019ರ ನಡುವೆ ಚಿಕಿತ್ಸೆ ಪಡೆದ 11.2 ಮಿಲಿಯನ್ ರೋಗಿಗಳ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ. ಬೇಸಿಗೆಯಲ್ಲಿ (ಜೂನ್-ಸೆಪ್ಟೆಂಬರ್) ಜನರು ಆಸ್ಪತ್ರೆಗಳಿಗೆ ದಾಖಲಾಗುವ ಕಾರಣಗಳಿಂದ ಇದನ್ನು ಪತ್ತೆ ಹಚ್ಚಲಾಗಿದೆ. ಹೆಚ್ಚಿನ ತಾಪಮಾನವು ಅವರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ. ಇದು ವಾಯು ಮಾಲಿನ್ಯದ ಮಟ್ಟಗಳು ಮತ್ತು ದೈನಂದಿನ ಸರಾಸರಿ ತಾಪಮಾನವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ.
ಅಧ್ಯಯನ ಪ್ರಕಾರ, ಒಂದು ವರ್ಷದೊಳಗಿನ ಮಕ್ಕಳು ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಜನರು ಹೆಚ್ಚಿನ ತಾಪಮಾನದಿಂದಾಗಿ ಹೆಚ್ಚು ದುರ್ಬಲರಾಗಿದ್ದಾರೆ. ಹೆಚ್ಚಿನ ತಾಪಮಾನವು ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೆಚ್ಚಿನ ತಾಪಮಾನದಿಂದಾಗಿ ಮೂತ್ರಪಿಂಡ ವೈಫಲ್ಯ, ಮೂತ್ರಪಿಂಡದ ಕಲ್ಲುಗಳು ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವ ಜನರು ಆಸ್ಪತ್ರೆಗೆ ದಾಖಲಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ಇದನ್ನೂ ಓದಿ:ಟೀ ಪ್ರಿಯರೇ ಹುಷಾರ್; ಹಾಲಿನೊಂದಿಗೆ ಚಹಾವನ್ನು ಹೆಚ್ಚು ಕುದಿಸುವುದು ಅಪಾಯಕಾರಿ!