ನವದೆಹಲಿ: ಟಾಟಾ ಮೆಮೊರಿಯಲ್ ಸೆಂಟರ್ (ಟಿಎಂಸಿ) ಅಭಿವೃದ್ಧಿ ಪಡಿಸಿರುವ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ 100 ರೂ. ಮಾತ್ರೆಯ ಸಾಮರ್ಥ್ಯ ಕುರಿತು ಮಾನವರ ಮೇಲಿನ ಪ್ರಯೋಗ ಸಾಬೀತು ಆಗಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರ್ ಪ್ಲಸ್ ಸಿಯು ಎಂಬ ಹೆಸರಿನಲ್ಲಿ ಮುಂಬೈನ ಟಿಎಂಸಿ ಸಂಶೋಧಕರು ಈ ಮಾತ್ರೆಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಿದ್ದಾರೆ. ಇದರಲ್ಲಿ ತಾಮ್ರದ ಪ್ರೊ ಆಕ್ಸಿಡೆಂಟ್ ಮತ್ತು ರೆಸ್ವೆರಾಟ್ರೊಲ್ ಸಂಯೋಜನೆ ಇದೆ. ಇದು ಕ್ಯಾನ್ಸರ್ ಮರುಕಳಿಸುವುದನ್ನು ತಡೆಯಲು ಹೊಟ್ಟೆಯಲ್ಲಿ ಆಕ್ಸಿಜನ್ ರಾಡಿಕಲ್‌ಗಳನ್ನು ಉತ್ಪಾದಿಸುತ್ತದೆ.
ಇಲಿಗಳ ಮೇಲೆ ನಡೆಸಿದ ಅಧ್ಯಯನಲ್ಲಿ ಕ್ಯಾನ್ಸರ್ ರೋಗಿಗಳ ಗಣನೀಯ ಪ್ರಮಾಣದಲ್ಲಿ ಗುಣಪಡಿಸುವಿಕೆಗೆ ತೋರಿಸಿದೆ. ಆದರೆ, ಇದು ಕ್ಯಾನ್ಸರ್ಗೆ ಪರಿಹಾರವಲ್ಲ ಎಂದು ಶ್ರೀ ಗಂಗಾ ರಾಮ್ ಆಸ್ಪತ್ರೆಯ ಮೆಡಿಕಲ್ ಅಂಕೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ ಶ್ಯಾಮ್ ಅಗರ್ವಾಲ್ ತಿಳಿಸಿದ್ದಾರೆ.
ಇನ್ನು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಷ್ಟ್ರೀಯ ಐಎಂಎ ಕೋವಿಡ್ ಟಾಸ್ಕ್ ಫೋರ್ಸ್ನ ಸಹ ಮುಖ್ಯಸ್ಥೆ ಡಾ ರಾಜೀವ್ ಜಯದೇವ್, ಇದು ಆಸಕ್ತಿದಾಯಕ ಪ್ರಶಂಸಾರ್ಹವಾಗಿದೆ. ಆದರೆ, ಇದನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಹಾರದ ನಿಟ್ಟಿನಲ್ಲಿ ನೋಡಲಾಗುವುದಿಲ್ಲ ಎಂದಿದ್ದಾರೆ.
ತಾಮ್ರ ಮತ್ತು ರೆಸ್ವೆರಾಟ್ರೊಲ್ ಸಂಯೋಜನೆ ಬಳಕೆ ಜೀವಕೋಶ-ಮುಕ್ತ ಕ್ರೊಮಾಟಿನ್ ಅನ್ನು ಕುಗ್ಗಿಸುತ್ತದೆ. ಇದು ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಮಾನವನ ಮೇಲೆ ನಡೆಸಿದ ಅಧ್ಯಯನದಲ್ಲಿ ತೋರಿಸಿದೆ. ಇನ್ನೂ ಮಾನವನ ಮೇಲಿನ ಅಧ್ಯಯನ ಸಾಗಿದೆ. ಈ ಅಧ್ಯಯನವು ತಿಳಿಸುವಂತೆ, ಮಾತ್ರೆಗಳು ಕಿಮೊಥೆರಪಿಯಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಅರ್ಧದಷ್ಟು ಕಡಿಮೆ ಮಾಡುತ್ತವೆ. ಜೊತೆಗೆ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆಯನ್ನು ಶೇ 30ರಷ್ಟು ಕಡಿಮೆ ಮಾಡುತ್ತವೆ.