How to Reduce Stretch Marks:ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ನಂತರ ಹೊಟ್ಟೆಯ ಸುತ್ತ ಸ್ಟ್ರೆಚ್ ಮಾರ್ಕ್ಸ್ ಸಾಮಾನ್ಯವಾಗಿ ಕಂಡುಬರುತ್ತದೆ. ಚರ್ಮವು ಹಿಗ್ಗುವುದರಿಂದ ಹೆರಿಗೆಯಾದವರಲ್ಲಿ ಮಾತ್ರವಲ್ಲ, ತೂಕ ಹಾಗೂ ಕೆಲಸದ ಒತ್ತಡದಲ್ಲಿನ ಏರಿಳಿತಗಳಿಂದಲೂ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತವೆ. ವಯಸ್ಕರಲ್ಲಿ ಮಾತ್ರವಲ್ಲದೆ ಮಕ್ಕಳಲ್ಲಿಯೂ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತವೆ ಎಂದು ತಜ್ಞರು ತಿಳಿಸುತ್ತಾರೆ. ಸ್ಟ್ರೆಚ್ ಮಾರ್ಕ್ಸ್ ಕಾಣಿಸಲು ಪ್ರಮುಖ ಕಾರಣಗಳೇನು ಹಾಗೂ ಈ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದನ್ನು ಅರಿತುಕೊಳ್ಳೋಣ.
ಸ್ಟ್ರೆಚ್ ಮಾರ್ಕ್ಸ್ ಕಾಣಿಸಲು ಕಾರಣಗಳೇನು?ಸೌಂದರ್ಯಶಾಸ್ತ್ರಜ್ಞೆ ಡಾ. ಶೈಲಜಾ ಸುರಪನೇನಿ ತಿಳಿಸುವ ಪ್ರಕಾರ, ಗರ್ಭಿಣಿಯರು ಹಾಗೂ ಹೆರಿಗೆಯಾದವರಲ್ಲಿ ಮಾತ್ರವಲ್ಲದೆ ಬೆಳೆಯುತ್ತಿರುವ ಮಕ್ಕಳಲ್ಲಿಯೂ ಸ್ಟ್ರೆಚ್ ಮಾರ್ಕ್ಸ್ ಕಂಡುಬರುತ್ತವೆ. ಜೊತೆಗೆ ನೀವು ಇದ್ದಕ್ಕಿದ್ದಂತೆ ತೂಕ ಹೆಚ್ಚಾದರೆ ಇಲ್ಲವೇ ಕಡಿಮೆಯಾದರೆ, ಎತ್ತರಕ್ಕೆ ಬೆಳೆದರೆ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತವೆ ಎಂದು ಅವರು ತಿಳಿಸುತ್ತಾರೆ. ಇದಕ್ಕೆ ಕಾರಣ ಹಾರ್ಮೋನುಗಳ ಬದಲಾವಣೆ, ಆನುವಂಶಿಕತೆ. ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಯು 13 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿದೆ. ಜೊತೆಗೆ ಗಾಢ ಕೆಂಪು ಬಣ್ಣದಿಂದ ಪ್ರಾರಂಭವಾಗಿ ಬಿಳಿ ಗೆರೆಗಳಾಗಿ ಕೊನೆಗೊಳ್ಳುತ್ತದೆ ಎಂದು ತಿಳಿಸುತ್ತಾರೆ.
ಈ ಮುನ್ನೆಚ್ಚರಿಕೆಗಳು :ಅನೇಕ ಜನರಿಗೆ ಸ್ಟ್ರೆಚ್ ಮಾರ್ಕ್ಸ್ ತಾನಾಗಿಯೇ ಮಾಯವಾಗುತ್ತವೆ. ಇಲ್ಲದಿದ್ದರೆ, ಆಲಿವ್ ಎಣ್ಣೆ, ಕೋಕೋ ಬೆಣ್ಣೆ, ವಿಟಮಿನ್ ಇ ಮತ್ತು ಹೈಲುರಾನಿಕ್ ಆಮ್ಲವನ್ನು ಹೊಂದಿರುವ ಕ್ರೀಮ್ಗಳನ್ನು ಹಚ್ಚಿಕೊಳ್ಳುವುದರಿಂದ ಚರ್ಮವು ತೇವಯುತವಾಗುತ್ತದೆ. ಜೊತೆಗೆ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ರಾತ್ರಿಯಲ್ಲಿ ರೆಟಿನೊಯಿಕ್ ಆ್ಯಸಿಡ್ ಕ್ರೀಮ್ಗಳು ಮತ್ತು ಸಿಲಿಕೋನ್ ಜೆಲ್ ಅನ್ನು ಹಚ್ಚಿ ಮಸಾಜ್ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಜಂಕ್ ಫುಡ್ ಸೇವಿಸುವುದನ್ನು ತಪ್ಪಿಸಬೇಕಾಗುತ್ತದೆ. ಕೇವಲ ಕ್ರೀಮ್ಗಳ ಬದಲಿಗೆ ವಿಟಮಿನ್ ಎ ಹಾಗೂ ಸಿ, ಖನಿಜಗಳು, ಸತು, ಸೆಲೆನಿಯಮ್, ಫೈಬರ್ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಲು ತಜ್ಞರು ಸೂಚನೆ ನೀಡುತ್ತಾರೆ.
ತಜ್ಞರ ಮತ್ತಷ್ಟು ಸಲಹೆಗಳು :
ಆಲಿವ್ ಎಣ್ಣೆ & ನಿಂಬೆ ರಸ : ಒಂದು ಕಪ್ ಸಕ್ಕರೆಗೆ ಕಾಲು ಕಪ್ ಆಲಿವ್ ಎಣ್ಣೆ ಹಾಗೂ ಕೆಲವು ಹನಿ ನಿಂಬೆ ರಸ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಬೇಕಾಗುತ್ತದೆ. ಸ್ವಲ್ಪ ಸಮಯದ ಬಳಿಕ, ಅದನ್ನು ಉಜ್ಜಿ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಲು ತಜ್ಞರು ಸಲಹೆ ನೀಡುತ್ತಾರೆ.