ಹೈದರಾಬಾದ್( ತೆಲಂಗಾಣ): ರಾಜ್ಯದ ಜನರಿಗೆ ಡಿಜಿಟಲ್ ಆರೋಗ್ಯದ ದಾಖಲೆಗಳನ್ನು ನೀಡಲು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮುಂದಾಗಿದೆ. 18 ವರ್ಷ ಮೇಲ್ಪಟ್ಟವರ ಡಿಜಿಟಲ್ ಆರೋಗ್ಯ ಕಾರ್ಡ್ ಮತ್ತು ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ತೆಲಂಗಾಣದ ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇದರ ರಚನೆಯ ಮಾರ್ಗಸೂಚಿಗಳತ್ತ ಗಮನ ಹರಿಸಿದೆ.
ಡಿಜಿಟಲ್ ದಾಖಲೆ ಸಿದ್ಧತೆ ಕಾರ್ಯದ ಭಾಗವಾಗಿ ಅನೇಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದರಲ್ಲಿ ವ್ಯಕ್ತಿಯ ಸಮಗ್ರ ಆರೋಗ್ಯ ಸ್ಥಿತಿಯ ಮಾಹಿತಿಗಳನ್ನ ಸಂಗ್ರಹಿಸುವ ಮೂಲಕ ಜನರಿಗೆ ಉತ್ತಮ ತುರ್ತು ವೈದ್ಯಕೀಯ ಸೇವೆ ನಿಡುವ ಆಶಯವನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಮೂಲಕ ಜನರ ಆರೋಗ್ಯ ಸಮಸ್ಯೆಗಳು, ನೀಡಬೇಕಾದ ಚಿಕಿತ್ಸೆ, ವೈದ್ಯಕೀಯ ಸೌಲಭ್ಯಗಳ ಸುಧಾರಣೆ, ನಿರ್ಧಾರ ತೆಗೆದುಕೊಳ್ಳುವಿಕೆ, ಹಣ ಹಂಚಿಕೆ, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಆದ್ಯತೆ ಸೇರಿದಂತೆ ಅನೇಕ ವಿಷಯಗಳ ಕುರಿತಂತೆ ರೋಗಿಯ ಹಾಗೂ ಅವರ ಕುಟುಂಬದ ಸಮಗ್ರ ಮಾಹಿತಿ ಈ ಮೂಲಕ ಲಭ್ಯವಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
ಡಿಜಿಟಲ್ ಹೆಲ್ತ್ ಕಾರ್ಡ್ಸ್ ರಚನೆಗೆ ಬೇಕಾಗಿರುವ ಅಗತ್ಯ ಅಂಶಗಳ ಕುರಿತು ಈಗಾಗಲೇ ಅಧಿಕಾರಿಗಳು ಕೆಲಸ ಮಾಡುತ್ತಿರುವುದಾಗಿ ಇಲಾಖೆ ತಿಳಿಸಿದೆ. ಈ ಆರೋಗ್ಯ ಕಾರ್ಡ್ನಲ್ಲಿ, ಸಂಬಂಧಿತ ವ್ಯಕ್ತಿಯ ಆರೋಗ್ಯದ ಮಾಹಿತಿ, ವೈದ್ಯಕೀಯ ಪರಿಸ್ಥಿತಿ, ಹಿಂದಿನ ಮೈದ್ಯಕೀಯ ಚಿಕಿತ್ಸೆ, ಔಷಧಗಳ ಬಳಕೆ, ಸಮಸ್ಯೆ, ವೈದ್ಯರ ಅಭಿಪ್ರಾಯ ಮತ್ತು ವಿಶ್ಲೇಷಣೆ ಮಾಹಿತಿಗಳು ಡಿಜಿಟಲ್ ರೆಕಾರ್ಡ್ ಮೂಲಕ ಲಭ್ಯವಿರಲಿದೆ. ಡಿಜಿಟಲ್ ಕಾರ್ಡ್ನಲ್ಲಿ ಈ ಮಾಹಿತಿ ಇರುವ ಹಿನ್ನೆಲೆ ಅವರು ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋದಾಗ ವೈದ್ಯರಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಸೇವೆ ನೀಡಲು ಸಹಾಯ ಆಗುತ್ತದೆ. ಈ ಕಾರ್ಡ್ ಆರೋಗ್ಯಶ್ರೀ ಮತ್ತು ಆಧಾರ್ ಜೊತೆ ಲಿಂಕ್ ಆಗಿರಲಿದೆ.