ತಾಜಾ, ಸಿಹಿ ಪಪ್ಪಾಯಿ ಹಣ್ಣಿನಲ್ಲಿ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಇದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು. ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಅಂಶ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಪಪ್ಪಾಯಿ ಹಣ್ಣಿನಲ್ಲಿರುವ ಕ್ಯಾರೊಟಿನಾಯ್ಡ್, ಆಲ್ಕಲಾಯ್ಡ್, ಮೊನೊಟರ್‌ಪೆನಾಯ್ಡ್, ಫ್ಲೇವನಾಯ್ಡ್, ಖನಿಜಗಳು, ವಿಟಮಿನ್‌ಗಳು ಮತ್ತು ಪೋಷಕಾಂಶಗಳು ದೇಹದಲ್ಲಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಮುಖವಾಗಿ ಜೀರ್ಣಕ್ರಿಯೆಗೆ ಸಹಕಾರಿ.
ಖಾಲಿ ಹೊಟ್ಟೆಗೆ ಪಪ್ಪಾಯಿ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸುತ್ತಾರೆ. ಮುಂಜಾನೆ ಈ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿನ ವಿಷಪೂರಿತ ಅಂಶಗಳು ಹೊರಹೋಗುತ್ತವೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಮೊದಲಾದ ಸಮಸ್ಯೆಗಳನ್ನು ತಡೆಯಲು ಸಹಾಯಕ.
ಪಪ್ಪಾಯಿಯಲ್ಲಿರುವ ಪಪೈನ್ ಅಂಶ ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುವುದಲ್ಲದೇ, ಜೀರ್ಣಾಂಗ ವ್ಯವಸ್ಥೆಗೆ ಪೂರಕವಾಗಿದೆ. ಅದೆಷ್ಟೋ ಜನರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದು, ಅವರಿಗೆ ಈ ಹಣ್ಣು ತುಂಬಾನೇ ಸಹಕಾರಿಯಾಗಿದೆ. ಮಲಬದ್ಧತೆಯಂತಹ ಸಮಸ್ಯೆಗಳು ಇರುವುದಿಲ್ಲ. ಜೊತೆಗೆ ಗ್ಯಾಸ್ ಮತ್ತು ಎದೆ (ಉಸಿರಾಟ) ಕಿರಿಕಿರಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪಪ್ಪಾಯಿ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಪ್ರತಿದಿನ ಮುಂಜಾನೆ ಈ ಹಣ್ಣನ್ನು ಸೇವಿಸಿದಷ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.