Health Benefits of Finger Millet:ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿ ಮಧುಮೇಹ, ಸ್ಥೂಲಕಾಯದ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಬಳಲುತ್ತಿದ್ದಾರೆ. ಈ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಗಳು ನಡೆಯುತ್ತಿವೆ. ಇವುಗಳನ್ನು ಹೋಗಲಾಡಿಸಲು ಸರಿಯಾದ ಆಹಾರ ನಿಯಮ ಪಾಲಿಸಬೇಕು. ಈ ನಿಟ್ಟಿನಲ್ಲಿ ರಾಗಿಯನ್ನು ನಿತ್ಯದ ಆಹಾರ ಭಾಗವಾಗಿಸಲು ತಜ್ಞರು ಸಲಹೆ ನೀಡುತ್ತಾರೆ. ರಾಗಿಯಿಂದ ಮಾಡಿರುವ ವಿವಿಧ ಆಹಾರಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ.
ಎಲುಬುಗಳಿಗೆ ಬಲ:ರಾಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು, ಮೂಳೆಗಳ ಬಲಕ್ಕೆ ನೆರವಾಗುತ್ತದೆ. ಇದು ಹಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಹಲ್ಲುಗಳನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಬೆಳೆಯುತ್ತಿರುವ ಮಕ್ಕಳಿಗೆ ನಿಯಮಿತವಾಗಿ ರಾಗಿ ನೀಡಬೇಕು. ಅಲ್ಲದೆ ವಯಸ್ಸಾದವರು ರಾಗಿ ಸೇವನೆಯಿಂದ ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆಗಳಿಂದ ದೂರವಿರಬಹುದು ಎಂದು ತಜ್ಞರು ವಿವರಿಸುತ್ತಾರೆ.
ತೂಕ ನಿಯಂತ್ರಣ:ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ರಾಗಿಯನ್ನು ಆಹಾರದ ಭಾಗವಾಗಿ ಮಾಡಿಕೊಂಡರೆ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ರಾಗಿಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಕಡಿಮೆ ಕೊಬ್ಬಿನಂಶವಿದೆ. ನಿಯಮಿತವಾಗಿ ನೀವು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಬೇಕಾದ ಪೋಷಕಾಂಶಗಳೂ ಸಿಗುತ್ತವೆ ಎನ್ನುತ್ತಾರೆ ತಜ್ಞರು.
ಗ್ಲೂಕೋಸ್ ನಿಯಂತ್ರಣಕ್ಕೆ ಬರುತ್ತೆ:ಅಕ್ಕಿ, ಗೋಧಿಗೆ ಹೋಲಿಸಿದರೆ, ರಾಗಿಯಲ್ಲಿ 'ಗ್ಲೈಸೆಮಿಕ್ ಇಂಡೆಕ್ಸ್' ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ರಾಗಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸದಸ್ಯರ ತಂಡವೂ ಇದನ್ನೇ ಸ್ಪಷ್ಟಪಡಿಸಿದೆ.