ಕರ್ನಾಟಕ

karnataka

ETV Bharat / health

ದೇಶದಲ್ಲಿ ಹರಡುತ್ತಿರುವ ಅಪರೂಪದ ಕಾಯಿಲೆ: ವಾರದೊಳಗೆ 100 ಜನರಿಗೆ ತಗುಲಿದ ರೋಗ: ಏನಿದರ ಗುಣಲಕ್ಷಣ, ಕಾರಣಗಳೇನು? - GUILLAIN BARRE SYNDROME TREATMENT

Guillain Barre Syndrome Symptoms: ಗುಯಿಲಿನ್ ಬಾರ್ ಸಿಂಡ್ರೋಮ್ ಕಾಯಿಲೆ ಪುಣೆಯಲ್ಲಿ ವೇಗವಾಗಿ ಹರಡುತ್ತಿದೆ. ಜಿಬಿಎಸ್ ಕಾಯಿಲೆಗೆ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತದೆ ಹಾಗೂ ತಡೆಗಟ್ಟುವುದು ಹೇಗೆ ಎಂಬುದು ತಿಳಿಯೋಣ.

GUILLAIN BARRE SYNDROME SYMPTOMS  HOW TO CURE GUILLAIN BARRE SYNDROME  GUILLAIN BARRE SYNDROME PUNE CASES  GUILLAIN BARRE SYNDROME CAUSES
ಸಾಂದರ್ಭಿಕ ಚಿತ್ರ (Getty Images)

By ETV Bharat Health Team

Published : Jan 29, 2025, 5:29 PM IST

Guillain Barre Syndrome Symptoms:ದೇಶದಲ್ಲಿ ಮತ್ತೊಂದು ಹೊಸ ಕಾಯಿಲೆ ಭಾರಿ ಸಂಚಲನ ಮೂಡಿಸುತ್ತಿದೆ. ಇತ್ತೀಚೆಗೆ ಮಹಾರಾಷ್ಟ್ರದ ಪುಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಯಿಲಿನ್ ಬಾರ್ ಸಿಂಡ್ರೋಮ್ ಕಾಯಿಲೆ ಹರಡುತ್ತಿದೆ. ಸಾಮಾನ್ಯವಾಗಿ ಲಕ್ಷದಲ್ಲಿ ಒಬ್ಬರು ಇಲ್ಲವೇ ಇಬ್ಬರನ್ನು ಬಾಧಿಸುವ ಈ ಕಾಯಿಲೆ ಈಗ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಕೇವಲ ಒಂದು ವಾರದಲ್ಲಿ 100ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಕೆಲವರಿಗೆ ವೆಂಟಿಲೇಟರ್ ಸಹಾಯದಿಂದ ತುರ್ತು ಚಿಕಿತ್ಸೆ ನೀಡಲಾಗುತ್ತದೆ.

ಸಾಮಾನ್ಯವಾಗಿ ವಯಸ್ಕರಿಗೆ ಮಾತ್ರ ಸೀಮಿತವಾಗಿರುವ ಈ ರೋಗವು ಇದೀಗ ಮಕ್ಕಳು ಹಾಗೂ ಶಿಶುಗಳ ಮೇಲೆ ದಾಳಿ ಮಾಡುತ್ತಿದೆ. ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು. ಜೊತೆಗೆ ಇತರ ಪ್ರದೇಶಗಳಿಗೂ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಸರ್ಕಾರಗಳು ಈ ಕಾಯಿಲೆ ತಡೆಗಟ್ಟುವಿಕೆಯತ್ತ ಹೆಚ್ಚಿನ ಗಮನ ಹರಿಸಿವೆ. ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ನೇರವಾಗಿ ಹರಡುವುದಿಲ್ಲ. ಆದ್ರೆ, ಕಲುಷಿತ ನೀರು ಹಾಗೂ ಆಹಾರದ ಮೂಲಕ ಹರಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ತಜ್ಞರು ಸೂಚನೆ ನೀಡುತ್ತಾರೆ. ಈ ರೋಗದ ಲಕ್ಷಣ, ಕಾರಣಗಳೇನು ಹಾಗೂ ಚಿಕಿತ್ಸೆಯ ಕುರಿತು ವಿವರವಾಗಿ ತಿಳಿಯೋಣ.

'ಗಿಲಿಯನ್ ಬಾರ್ ಸಿಂಡ್ರೋಮ್ ಒಂದು ರೀತಿಯ ಪರೋಕ್ಷ ಕಾಯಿಲೆ. ವಿಭಿನ್ನ ರೀತಿಯ ಪಾರ್ಶ್ವವಾಯು ಎಂದು ವಿವರಿಸಬಹುದು. ಇದರ ಪರಿಣಾಮವಾಗಿ ಪಾರ್ಶ್ವವಾಯು ತರಹದ ಸ್ನಾಯು ಪಾರ್ಶ್ವವಾಯು ಉಂಟಾಗುತ್ತದೆ. ಸಾಮಾನ್ಯವಾಗಿ ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಸಂಭವಿಸಿದಾಗ, ನಮ್ಮ ರೋಗನಿರೋಧಕ ವ್ಯವಸ್ಥೆಯು ಸಕ್ರಿಯಗೊಳ್ಳುತ್ತದೆ. ಅವುಗಳ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇವು ಹಾನಿಕಾರಕ ಅಂಶಗಳನ್ನು ನಿವಾರಿಸಲು ಮತ್ತು ಸೋಂಕುಗಳನ್ನು ತಡೆಗಟ್ಟಲು ಕೆಲಸ ಮಾಡುತ್ತವೆ. ಕೆಲವು ಜನರಲ್ಲಿ ಈ ಪ್ರತಿಕಾಯಗಳು ತಮ್ಮದೇ ಆದ ಅಂಗಾಂಶಗಳನ್ನು ಶತ್ರು ಎಂದು ತಪ್ಪಾಗಿ ಭಾವಿಸಿ ಅವುಗಳ ಮೇಲೆ ದಾಳಿ ಮಾಡುತ್ತವೆ. ಇದರ ಪರಿಣಾಮ ಏನೆಂದ್ರೆ, ಸೋರಿಯಾಸಿಸ್ ಹಾಗೂ ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳಾಗಿವೆ. ಗುಯಿಲಿನ್ ಬಾರ್ ಸಿಂಡ್ರೋಮ್ ಸಮಸ್ಯೆಯೂ ಈ ರೀತಿಯಲ್ಲಿ ಹರಡುತ್ತದೆ. ಈ ಪ್ರತಿಕಾಯಗಳು ಬೆನ್ನುಹುರಿಯಿಂದ ಕಾಲುಗಳು ಹಾಗೂ ತೋಳುಗಳಂತಹ ಭಾಗಗಳಿಗೆ ಚಲಿಸುವ ನರಗಳ ಮೇಲಿನ ಪೊರೆಯನ್ನು ಹಾನಿಗೊಳಿಸುವುದರಿಂದ ಈ ಸಮಸ್ಯೆ ಉದ್ಭವಿಸುತ್ತದೆ"

-ಡಾ. ಪಿ. ರಂಗನಾಥಮ್, ನರಶಸ್ತ್ರಚಿಕಿತ್ಸಕ

ಈ ಕಾಯಿಲೆ ಲಕ್ಷಣಗಳು?:

ಗುಯಿಲಿನ್ ಬಾರ್ ಸಿಂಡ್ರೋಮ್ ಸಾಮಾನ್ಯವಾಗಿ ಪಾದಗಳು ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆ ಹಾಗೂ ದೌರ್ಬಲ್ಯದಿಂದ ಪ್ರಾರಂಭವಾಗುತ್ತದೆ. ಜೊತೆಗೆ ತೋಳುಗಳು, ಎದೆ, ಕುತ್ತಿಗೆ ಹಾಗೂ ಮುಖದಂತಹ ದೇಹದ ಭಾಗಗಳಿಗೆ ಹರಡುತ್ತದೆ. ಅದಕ್ಕಾಗಿಯೇ ಇದನ್ನು ಆರೋಹಣ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಸಮಸ್ಯೆ ಉಲ್ಬಣಗೊಂಡಂತೆ ಸ್ನಾಯು ದೌರ್ಬಲ್ಯವು ಪಾರ್ಶ್ವವಾಯುವಿಗೆ ತಿರುಗಬಹುದು. ಇದು ಹೆಚ್ಚಾಗಿ ಚಲನೆಯನ್ನು ಬೆಂಬಲಿಸುವ ನರಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಜನರಲ್ಲಿ ಇದು ಹೃದಯ ಬಡಿತ ಮತ್ತು ಉಸಿರಾಟದಂತಹ ಕಾರ್ಯಗಳನ್ನು ನಿಯಂತ್ರಿಸುವ ಸ್ವನಿಯಂತ್ರಿತ ನರಮಂಡಲವನ್ನೂ ಹಾನಿಗೊಳಿಸುತ್ತದೆ. ಬಾಧಿತ ಅಂಗಗಳನ್ನು ಅವಲಂಬಿಸಿ ವಿಭಿನ್ನ ಲಕ್ಷಣಗಳು ಕಂಡು ಬರುತ್ತವೆ ಎಂದು ಡಾ. ಪಿ. ರಂಗನಾಥ್ ವಿವರಿಸುತ್ತಾರೆ.

  • ಬೆರಳುಗಳು, ಮಣಿಕಟ್ಟುಗಳು, ಹಿಮ್ಮಡಿಗಳಲ್ಲಿ ಚುಚ್ಚಿದ ಅನುಭವ ಆಗುತ್ತದೆ.
  • ಕಾಲು ನೋವು ಹಾಗೂ ದೌರ್ಬಲ್ಯವು ಕಾಲುಗಳಲ್ಲಿ ಆರಂಭವಾಗಿ ವಿವಿಧ ಭಾಗಗಳಿಗೆ ಹರಡುತ್ತದೆ.
  • ಸರಿಯಾಗಿ ನಡೆಯಲು ಕೂಡ ಅಸಮರ್ಥತೆ, ಮೆಟ್ಟಿಲುಗಳನ್ನು ಹತ್ತಲು ಶಕ್ತಿಯ ಕೊರತೆ, ನಡೆಯುವಾಗ ಒದ್ದಾಡುವುದು.
  • ಮಾತನಾಡಲು, ಅಗಿಯಲು, ನುಂಗಲು ತೊಂದರೆ ಹಾಗೂ ಬಾಯಿ ವಕ್ರವಾಗುತ್ತದೆ.
  • ಒಂದೇ ಬಾರಿ ಎರಡು ದೃಶ್ಯಗಳನ್ನು ನೋಡುತ್ತಿದ್ದರೆ, ಕಣ್ಣುಗಳನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ.
  • ಉಸಿರಾಟಕ್ಕೆ ಸಹಾಯ ಮಾಡುವ ಸ್ನಾಯುಗಳು ದುರ್ಬಲವಾಗುತ್ತವೆ. ತೀವ್ರವಾದ ಹಂತದಲ್ಲಿ ವೆಂಟಿಲೇಟರ್‌ನೊಂದಿಗೆ ಚಿಕಿತ್ಸೆ ನೀಡಬೇಕಾಗುತ್ತದೆ.
  • ಹೃದಯ ಬಡಿತ ಅನಿಯಮಿತ, ರಕ್ತದೊತ್ತಡ ಏರುಪೇರುಗುತ್ತದೆ. ಪರಿಸ್ಥಿತಿ ಹೊಂದಿರುವವರಿಗೆ ಪೇಸ್‌ಮೇಕರ್ ಅಳವಡಿಸಬೇಕಾಗುತ್ತದೆ.
  • ಇನ್ನು ಕೆಲವರಿಗೆ ಅತಿಯಾದ ಬೆವರುವಿಕೆಯು ವಿಶೇಷ ಲಕ್ಷಣವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಕಾಯಿಲೆ ಪತ್ತೆ ಮಾಡುವುದು ಹೇಗೆ?:

ಗುಯಿಲಿನ್ ಬಾರ್ ಸಿಂಡ್ರೋಮ್ ಲಕ್ಷಣಗಳ ಆಧಾರದ ಮೇಲೆ ನಿರ್ಣಯಿಸಬಹುದು. ನಿಮ್ಮ ಕಾಲುಗಳು ಹಾಗೂ ತೋಳುಗಳಲ್ಲಿ ಸುಸ್ತುಕಾಣಿಸಿಕೊಳ್ಳಲು ಪ್ರಾರಂಭಿಸುವ ಕೆಲವು ವಾರಗಳ ಮೊದಲು ನೀವು ಅತಿಸಾರ ಹಾಗೂ ಹೊಟ್ಟೆ ನೋವು ಅನುಭವಿಸಿದ್ದೀರಾ? ಇದನ್ನು ಗಮನಿಸುವುದು ಬಹಳ ಮುಖ್ಯ. ಒಂದು ವೇಳೆ ಸಮಸ್ಯೆ ಇರುವ ಬಗ್ಗೆ ಅನುಮಾನ ಬಂದರೆ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು ಎಂದು ವೈದ್ಯರು ವಿವರಿಸಿದರು.

ನರ್ವ್​ ಕಂಡಕ್ಷನ್:ಈ ಪರೀಕ್ಷೆಯನ್ನು ಮಾಡಲು, ನರಗಳ ಮೇಲೆ ಚರ್ಮದ ಮೇಲೆ ವಿದ್ಯುದ್ವಾರಗಳನ್ನು ಇರಿಸಲಾಗುತ್ತದೆ. ಇದರಿಂದ ನರ ಸಂಕೇತಗಳು ಎಷ್ಟು ವೇಗವಾಗಿ ಹರಡುತ್ತಿವೆ ಹಾಗೂ ಸಮಸ್ಯೆ ಇದೆಯೇ ಎಂಬುದನ್ನು ಬಹಿರಂಗಪಡಿಸುತ್ತದೆ.

ಎಲೆಕ್ಟ್ರೋಮ್ಯೋಗ್ರಫಿ:ಇದರಲ್ಲಿರುವ ತೆಳುವಾದ ವಿದ್ಯುದ್ವಾರಗಳನ್ನು ಸ್ನಾಯುಗಳಿಗೆ ಸೇರಿಸಲಾಗುತ್ತದೆ ಹಾಗೂ ನರಗಳ ಕಾರ್ಯವನ್ನು ಮೇಲ್ವಿಚಾರಣೆ ಮಾಡಲು ಸಹಾಯವಾಗುತ್ತದೆ.

ಸಿಎಸ್ಎಫ್ ಪರೀಕ್ಷೆ:ಇದು ಬೆನ್ನುಹುರಿಯಿಂದ ದ್ರವವನ್ನು (CSF) ತೆಗೆದುಕೊಂಡು ಮಾಡುವ ಪರೀಕ್ಷೆಯಾಗಿದೆ. ಎನ್ಸೆಫಾಲಿಟಿಸ್‌ನಂತಹ ಪರಿಸ್ಥಿತಿಗಳಿಗಿಂತ ಭಿನ್ನವಾಗಿ ಗುಯಿಲಿನ್ ಬಾರ್ ಸಿಂಡ್ರೋಮ್ ಇರುವ ಜನರನ್ನು ಹೆಚ್ಚಿನ ಮಟ್ಟದ ಪ್ರೋಟೀನ್ (ಆಲ್ಬುಮಿನ್) ಹಾಗೂ ಸಾಮಾನ್ಯ, ಕಡಿಮೆ ಬಿಳಿ ರಕ್ತ ಕಣಗಳ ಎಣಿಕೆ (ಆಲ್ಬುಮಿನ್ ಸೈಟೋಲಾಜಿಕಲ್ ಡಿಸೋಸಿಯೇಶನ್) ಇರುವಿಕೆಯ ಆಧಾರದ ಮೇಲೆ ರೋಗವನ್ನು ಪತ್ತೆ ಮಾಡಲಾಗುತ್ತದೆ.

ಎಂಆರ್​ಐ:ಬೇರೆ ಯಾವುದೇ ನರವೈಜ್ಞಾನಿಕ ಸಮಸ್ಯೆಗಳಿವೆಯೇ ಎಂದು ನಿರ್ಧರಿಸಲು MRI ಪರೀಕ್ಷೆಯೂ ಅಗತ್ಯವಾಗುತ್ತದೆ.

'ನಾವು ನಡೆಯುವಂತಹ ಕಾರ್ಯಗಳನ್ನು ಮಾಡಲು ನಿರ್ಧರಿಸಿದಾಗ ಮೆದುಳು ಮೊದಲು ಬೆನ್ನುಹುರಿಗೆ ವಿದ್ಯುತ್ ಸಂಕೇತಗಳನ್ನು ಕಳುಹಿಸುತ್ತದೆ. ಇವು ಬೆನ್ನುಹುರಿಯಿಂದ ಬರುವ ಬಾಹ್ಯ ನರಗಳ ಮೂಲಕ ದೇಹದ ಭಾಗಗಳಲ್ಲಿರುವ ಸ್ನಾಯುಗಳಿಗೆ, ಉದಾಹರಣೆಗೆ ತೋಳುಗಳು, ಕಾಲುಗಳು ಹಾಗೂ ಎದೆ. ಮನೆಯಲ್ಲಿರುವ ವಿದ್ಯುತ್ ತಂತಿಗಳ ಮೇಲಿನ ದಪ್ಪ ಪ್ಲಾಸ್ಟಿಕ್ ಲೇಪನದಂತೆಯೇ, ಮೈಲಿನ್ ಎಂಬ ರಕ್ಷಣಾತ್ಮಕ ಪದರವು ನರಗಳನ್ನು ಸುತ್ತುವರೆದಿದೆ. ಈ ಹಾನಿಯು ಗುಯಿಲಿನ್ ಬಾರ್ ಸಿಂಡ್ರೋಮ್​ಗೆ ಪ್ರಮುಖ ಕಾರಣವಾಗಿದೆ. ಮೈಲಿನ್ ಪೊರೆ ಹದಗೆಟ್ಟಾಗ, ನರ ಸಂಕೇತಗಳ ಪ್ರಸರಣ ನಿಧಾನವಾಗುತ್ತದೆ. ಶಾರ್ಟ್ ಸರ್ಕ್ಯೂಟ್ ಕೂಡ ಸಂಭವಿಸಬಹುದು ಹಾಗೂ ಸಿಗ್ನಲ್‌ಗಳು ವಿರೂಪಗೊಳ್ಳಬಹುದು. ಇದರಿಂದ ಕಾಲುಗಳು ಹಾಗೂ ತೋಳುಗಳಂತಹ ಅಂಗಗಳು ದುರ್ಬಲಗೊಳ್ಳುತ್ತವೆ. ನರ ಸಂಕೇತಗಳು ತುಂಬಾ ನಿಧಾನವಾಗಿದ್ದರೆ ಇಲ್ಲವೇ ಅಡಚಣೆಯಾಗಿದ್ದರೆ, ದೌರ್ಬಲ್ಯ ಹೆಚ್ಚಾಗುತ್ತದೆ ಹಾಗೂ ಪಾರ್ಶ್ವವಾಯುವಿನಂತೆಯೇ ಸ್ನಾಯುಗಳಿಗೆ ಅಪಾಯವಿರುತ್ತದೆ'

-ಡಾ. ಪಿ. ರಂಗನಾಥಮ್, ನರಶಸ್ತ್ರಚಿಕಿತ್ಸಕ

ಈ ಕಾಯಿಲೆ ಕಾರಣಗಳೇನು?:

ಗುಯಿಲಿನ್ ಬಾರ್ ಸಿಂಡ್ರೋಮ್‌ಗೆ ನಿಖರವಾದ ಕಾರಣ ತಿಳಿದಿಲ್ಲ. ಆದರೆ, ಬಹುಪಾಲು ಜನರಲ್ಲಿ ಸೋಂಕು ಪ್ರಾರಂಭವಾದ ಒಂದು, ಎರಡು ವಾರಗಳ ನಂತರ ಮಾತ್ರ ಇದು ಕಾಣಿಸಿಕೊಳ್ಳುತ್ತದೆ. ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ಸೈಟೊಮೆಗಾಲೊವೈರಸ್, ಎಪ್ಸ್ಟೀನ್ ಬಾರ್ ವೈರಸ್ ಮತ್ತು ಜಿಕಾ ವೈರಸ್ ಇದಕ್ಕೆ ಕಾರಣವಾಗಿರುತ್ತದೆ. ಪುಣೆಯಲ್ಲಿ ಈಗ ಹರಡುತ್ತಿರುವ ಸಮಸ್ಯೆಗೆ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಕಾರಣ ಎಂದು ತಜ್ಞರು ತಿಳಿಸುತ್ತಾರೆ.

ರೋಗಿಗಳ ಮೂತ್ರ, ಮಲ, ರಕ್ತ ಮತ್ತು ಲಾಲಾರಸದ ಮಾದರಿಗಳನ್ನು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಹೋಟೆಲ್‌ಗಳು ಹಾಗೂ ನೀರಿನ ಟ್ಯಾಂಕರ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಿ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಯಿತು. ಈ ಜನರಲ್ಲಿ ಸುಮಾರು 21 ಜನರಿಗೆ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಹಾಗೂ ನೊರೊವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅನೇಕ ಆಸ್ಪತ್ರೆಗಳಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ರೋಗಿ ಮಲದಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಜೆಜುನಿ ಇರುವಿಕೆಯಿಂದ ಇದು ಸಂಭವಿಸಿದೆ ಎಂದು ದೃಢಪಟ್ಟಿದೆ. ಈ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಹರಡಲು ಪ್ರಮುಖ ಕಾರಣ ರೋಗಿಗಳ ಮಲದಿಂದ ಕಲುಷಿತಗೊಂಡ ನೀರು ಹಾಗೂ ಆಹಾರವೇ ಮುಖ್ಯ ಕಾರಣವಾಗಿದೆ. ಅಪರೂಪವಾಗಿ ಬಳಸುವ ಇನ್ಫ್ಲುಯೆನ್ಸ ಮತ್ತು ಟೆಟನಸ್ ಲಸಿಕೆಗಳು ಸಹ ಗುಯಿಲಿನ್ ಬಾರ್ ಸಿಂಡ್ರೋಮ್​ಗೆ ಕಾರಣವಾಗಬಹುದು ಎಂದು ತಜ್ಞರು ವಿವರಿಸುತ್ತಾರೆ.

ಈ ರೋಗ ತಡೆಗಟ್ಟುವುದು ಹೇಗೆ?:

  • ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಇಲ್ಲದಿದ್ದರೆ ಶುದ್ಧವಾಗಿರುವ ನೀರನ್ನು ಸೇವಿಸಬೇಕು.
  • ತರಕಾರಿಗಳು, ಹಣ್ಣುಗಳನ್ನು ಒಮ್ಮೆಯನ್ನು ಎರಡು ಬಾರಿ ಚೆನ್ನಾಗಿ ತೊಳೆದ ನಂತರವೇ ತಿನ್ನಬೇಕಾಗುತ್ತದೆ.
  • ಕೋಳಿ, ಕುರಿ ಮಾಂಸದಂತಹ ಪದಾರ್ಥಗಳನ್ನು ಸಂಪೂರ್ಣವಾಗಿ ಬೇಯಿಸುವವರೆಗೆ ಸರಿಯಾದ ತಾಪಮಾನಕ್ಕೆ (75 ಡಿಗ್ರಿ ಸೆಲ್ಸಿಯಸ್) ಬೇಯಿಸಬೇಕು.
  • ವಿಶೇಷವಾಗಿ ಹಸಿ ಮೊಟ್ಟೆಗಳನ್ನು ತಿನ್ನಬಾರದು. ಮೀನು, ಸೀಗಡಿ ಮತ್ತು ಏಡಿಗಳನ್ನು ಸಂಪೂರ್ಣವಾಗಿ ಬೇಯಿಸಿದ ನಂತರವೇ ಸೇವಿಸಬೇಕು.
  • ಊಟ ಮಾಡುವ ಮೊದಲು ಹಾಗೂ ಮಲವಿಸರ್ಜನೆ ಮಾಡಿದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಬೇಕು.
  • ಅಡುಗೆ ಮಾಡುವ ಮುನ್ನ ಯಾವಾಗಲೂ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಮಾಂಸ ತೊಳೆದು ಕತ್ತರಿಸಿದ ಸ್ಥಳಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಬೇಕು.
  • ಕೋವಿಡ್-19 ರೀತಿ, ನೊರೊವೈರಸ್ ಅನ್ನು ಸ್ಯಾನಿಟೈಸರ್ ನಿಂದ ಕೊಲ್ಲಲು ಆಗುವುದಿಲ್ಲ. ನೀವು ಅದನ್ನು ಸೋಪಿನಿಂದ ಚೆನ್ನಾಗಿ ತೊಳೆದರೆ ಮಾತ್ರ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್​ ಹೋಗುತ್ತದೆ.

ಈ ರೋಗಕ್ಕೆ ಚಿಕಿತ್ಸೆ ಹೇಗೆ?:

ಐವಿಐಜಿ:ತಜ್ಞರು ಹೇಳುವಂತೆ ಇಮ್ಯುನೊಗ್ಲಾಬ್ಯುಲಿನ್‌ಗಳನ್ನು (IVIG) ರಕ್ತನಾಳದ ಮೂಲಕ ನೀಡುವುದು ಒಳ್ಳೆಯದು. ಇವು ಪ್ರತಿಕಾಯಗಳು, ಇತರ ವಿಷಗಳನ್ನು ತಟಸ್ಥಗೊಳಿಸುತ್ತವೆ. ಇವುಗಳನ್ನು ದೇಹದ ತೂಕದ ಪ್ರತಿ ಕಿಲೋಗ್ರಾಂಗೆ 0.4 ಗ್ರಾಂ ಪ್ರಮಾಣದಲ್ಲಿ, ಐದು ದಿನಗಳವರೆಗೆ ದಿನಕ್ಕೆ ಒಮ್ಮೆ ನೀಡಬೇಕು ಎಂದು ವೈದ್ಯರು ತಿಳಿಸುತ್ತಾರೆ.

ಪ್ಲಾಸ್ಮಾಫೆರೆಸಿಸ್:ಪ್ಲಾಸ್ಮಾಫೆರೆಸಿಸ್ ಒಂದು ರೀತಿಯ ರಕ್ತ ಶುದ್ಧೀಕರಣ ಚಿಕಿತ್ಸೆ. ರಕ್ತದ ಪ್ಲಾಸ್ಮಾದಲ್ಲಿ ತೇಲುತ್ತಿರುವ ಪ್ರತಿಕಾಯಗಳನ್ನು ಶೋಧಿಸುವುದು ಪ್ರಮುಖ ಅಂಶವಾಗಿದೆ. ಈ ಚಿಕಿತ್ಸೆಯನ್ನು ದಿನಕ್ಕೆ ಐದು ಬಾರಿ ಒಂದರಿಂದ ಎರಡು ವಾರಗಳವರೆಗೆ ಮಾಡಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗುಯಿಲಿನ್ ಬಾರ್ ಸಿಂಡ್ರೋಮ್‌ಗೆ ಬೇಗ ಚಿಕಿತ್ಸೆ ನೀಡಿದಷ್ಟೂ ಚೇತರಿಕೆ ಉತ್ತಮವಾಗಿರುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನ ಒಂದು, ಎರಡು ವಾರಗಳ ನಂತರ ನೀರಿನಂಶದ ಅತಿಸಾರ, ಹೊಟ್ಟೆ ನೋವು ಮತ್ತು ಕಾಲುಗಳಲ್ಲಿ ದೌರ್ಬಲ್ಯದಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಯಾವುದೇ ಸಂದೇಹಗಳನ್ನು ನಿವಾರಿಸಲು ತಕ್ಷಣ ನರತಜ್ಞ ವೈದ್ಯರನ್ನು ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಚಿಕಿತ್ಸೆ ವಿಳಂಬವಾದರೆ, ಕಾಲು ಮತ್ತು ತೋಳುಗಳಲ್ಲಿ ದೌರ್ಬಲ್ಯ ಮುಂದುವರಿಯಬಹುದು. ಈ ಚಿಕಿತ್ಸೆಗಳಲ್ಲಿ ಯಾವುದಾದರು ಒಂದು ಸಾಕಾಗುತ್ತದೆ.

ಚಿಕಿತ್ಸೆಯ ಬಳಿಕ ಶೇ. 85 ರಿಂದ 90 ರಷ್ಟು ಜನರು ಗುಣಮುಖರಾಗುತ್ತಾರೆ. ಆದರೆ ಕೆಲವು ಜನರು ಕೆಲವು ಅಂಗವಿಕಲ ಲಕ್ಷಣಗಳನ್ನು ಅನುಭವಿಸಬಹುದು. ಅಪರೂಪದ ಸಂದರ್ಭಗಳಲ್ಲಿ ವೆಂಟಿಲೇಟರ್‌ನಲ್ಲಿರುವುದರಿಂದ ಉಂಟಾಗುವ ಇತರ ತೊಂದರೆಗಳಿಂದಾಗಿ ಕೆಲವು ಜನರು ಸಾವಿನ ಅಪಾಯವು ಇರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಓದುಗರಿಗೆ ಪ್ರಮುಖ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ABOUT THE AUTHOR

...view details