ಕರ್ನಾಟಕ

karnataka

ETV Bharat / health

ನಿಮ್ಮ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್ ಬೇಗ ಖಾಲಿ ಆಗ್ತಿದ್ಯಾ? ಈ ಸರಳ ಸಲಹೆಗಳನ್ನು ಪಾಲಿಸಿ ನೋಡಿ - Gas Cylinder Saving Tips - GAS CYLINDER SAVING TIPS

ನಿಮ್ಮ ಮನೆಯಲ್ಲಿರುವ ಅಡುಗೆ ಅನಿಲ ಬೇಗ ಖಾಲಿ ಆಗ್ತಿದ್ಯಾ?. ಇದಕ್ಕೆ ಬಲವಾದ ಕಾರಣಗಳಿವೆ. ಆದರೆ ಕೆಲವು ಸರಳ ಸಲಹೆಗಳನ್ನು ಪಾಲಿಸುವುದರಿಂದ​ ನಿಮ್ಮ ನಿರೀಕ್ಷೆಗೆ ತಕ್ಕಂತೆ ಗ್ಯಾಸ್​ ಉಳಿಸಬಹುದು.

Gas Cylinder Saving Tips
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Jun 21, 2024, 8:32 PM IST

ಮನೆಯ ಗ್ಯಾಸ್ ಸಿಲಿಂಡರ್ ಹೆಚ್ಚು ದಿನಗಳ ಕಾಲ ಬರುತ್ತಿಲ್ಲ ಎಂದರೆ ಅದಕ್ಕೆ ನಮ್ಮ ತಪ್ಪುಗಳೇ ಕಾರಣ. ಆ ಸಣ್ಣ ತಪ್ಪುಗಳನ್ನು ಪದೇ ಪದೇ ಮಾಡುವುದರಿಂದ ಸಿಲಿಂಡರ್ ಬೇಗನೆ ಖಾಲಿ ಆಗುತ್ತದೆ. ದೀರ್ಘಾವಧಿಯವರೆಗೆ ಗ್ಯಾಸ್ ಸಿಲಿಂಡರ್‌ ಬರಬೇಕೆಂದರೆ ಕೆಲವು ಸರಳ ಸಲಹೆಗಳನ್ನು ತಪ್ಪದೇ ಅನುಸರಿಸಬೇಕು. ಇದರಿಂದ ಜೇಬಿನ ಭಾರ ಇಳಿಸಬಹುದು.

ಬರ್ನರ್ ಸ್ವಚ್ಛವಾಗಿಡಿ:ಗ್ಯಾಸ್ ಬೇಗ ಖಾಲಿಯಾಗಲು ಬರ್ನರ್ ಸ್ವಚ್ಛತೆ ಇರದೇ ಇರುವುದು ಪ್ರಮುಖ ಕಾರಣ. ಗ್ಯಾಸ್ ಸ್ಟೌವ್‌ನ ಬರ್ನರ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಕೊಳಕಾಗಿದ್ದರೆ ಅನಿಲ ಹರಿವು ಸರಿಯಾಗಿ ಆಗದು. ಅನಿಲ ವ್ಯರ್ಥವಾಗುತ್ತದೆ. ಬರ್ನರ್ ಸ್ವಚ್ಛವಾಗಿಲ್ಲದಿದ್ದರೆ ಗ್ಯಾಸ್ ಲೀಕೇಜ್ ಆಗುವ ಸಾಧ್ಯತೆ ಇರುತ್ತದೆ.

ಒದ್ದೆ ಪಾತ್ರೆಗಳ ಬಳಕೆ ಬೇಡ: ನಾವು ಪಾತ್ರೆಗಳನ್ನು ಸ್ವಚ್ಛಗೊಳಿಸಿದ ತಕ್ಷಣ ಅಡುಗೆಗೆ ಬಳಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ಮಾಡುವ ಮೊದಲ ತಪ್ಪೇ ಇದು. ಹೀಗೆ ಮಾಡುವುದರಿಂದ ಪಾತ್ರೆ ಬಿಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಒಂದು ಅಥವಾ ಎರಡು ದಿನ ಹೀಗೆ ಮಾಡಿದರೆ ಸರಿ. ಆದರೆ, ಇದನ್ನೇ ಪ್ರತಿದಿನ ಪುನರಾವರ್ತಿಸುವುದರಿಂದ ಗ್ಯಾಸ್ ವ್ಯರ್ಥವಾಗುತ್ತದೆ. ಆದ್ದರಿಂದ ಪಾತ್ರೆಗಳು ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ, ಬಳಿಕ ಅಡುಗೆಗೆ ಬಳಸಿ.

ಪಾತ್ರೆಯ ಮೇಲೆ ಮುಚ್ಚಳ ಇರಲಿ: ಅನೇಕರು ಅಡುಗೆ ಮಾಡುವಾಗ ಪಾತ್ರೆಯ ಮೇಲೆ ಮುಚ್ಚುವ ಮುಚ್ಚಳ ಬಳಸುವುದಿಲ್ಲ. ಇದೂ ಕೂಡಾ ಗ್ಯಾಸ್ ​ಬೇಗ ಖಾಲಿಯಾಗಲು ಕಾರಣ. ಹೀಗೆ ಮಾಡುವುದರಿಂದ ತರಕಾರಿ ಮತ್ತು ಅನ್ನ ಬೇಯಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಅಡುಗೆ ಪಾತ್ರೆಗಳ ಮೇಲೆ ಮುಚ್ಚಳ ಹಾಕಿದರೆ ಬೇಗ ಬೇಯುತ್ತದೆ. ಮುಚ್ಚಳ ಬಳಸುವುದರಿಂದ ಶಾಖ ಮತ್ತು ಉಗಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಕಡಿಮೆ ಅನಿಲ ಬಳಸಿಕೊಂಡು ನಿಮ್ಮ ಆಹಾರವನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಬೇಯಿಸುತ್ತದೆ.

ಪ್ರೆಷರ್ ಕುಕ್ಕರ್ ಬಳಕೆ: ಪ್ರೆಷರ್ ಕುಕ್ಕರ್ ನಿಮಗೆ ಆಹಾರವನ್ನು ವೇಗವಾಗಿ ಮತ್ತು ಕಡಿಮೆ ಅನಿಲದಿಂದ ಬೇಯಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಹೆಚ್ಚಿನ ಒತ್ತಡದಲ್ಲಿ ಆಹಾರ ಬೇಯಿಸಲು ಉಗಿಯನ್ನು ಬಳಸುತ್ತದೆ. ಇದರರ್ಥ ನೀವು ಕಡಿಮೆ ಸಮಯದಲ್ಲಿ ಆಹಾರವನ್ನು ಬೇಯಿಸಬಹುದು. ಇದು ಅನಿಲವನ್ನೂ ಸಹ ಉಳಿಸಬಹುದು.

ತಣ್ಣಗಾದ ನಂತರ ಬಳಸಿ:ಹಾಲಿನಿಂದ ಹಿಡಿದು ಇತರ ಆಹಾರ ಪದಾರ್ಥಗಳನ್ನು ಫ್ರಿಡ್ಜ್​​ನಲ್ಲಿ ಇಡುವುದು ಸಾಮಾನ್ಯ. ಫ್ರಿಡ್ಜ್​​ನಲ್ಲಿದ್ದ ಪದಾರ್ಥಗಳನ್ನು ತಕ್ಷಣ ಗ್ಯಾಸ್ ಸ್ಟೌವ್‌ನ ಮೇಲಿಡುವ ಮೊದಲು, ಅವುಗಳನ್ನು ತೆಗೆದುಕೊಂಡು ಸ್ವಲ್ಪ ಕಾಲ ಕೋಣೆಯಲ್ಲಿರಿಸಿ. ತಂಪಾಗಿರುವಾಗ ಬಳಸಿದರೆ ಬೆಚ್ಚಗಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಇದೂ ಕೂಡ ಗ್ಯಾಸ್ ನಷ್ಟಕ್ಕೆ ಕಾರಣವಾಗುತ್ತದೆ.

ಈ ಪಾತ್ರೆ ಬಳಸಿ: ನೀವು ಬಳಸುವ ಪ್ಯಾನ್ (ಪಾತ್ರೆ) ಕೂಡ ಗ್ಯಾಸ್ ಉಳಿಸುತ್ತದೆ. ನೀವು ಫ್ಲಾಟ್ ಪ್ಯಾನ್ ಬಳಸುತ್ತಿದ್ದರೆ ಅನಿಲ ಸಮವಾಗಿ ಹರಡುತ್ತದೆ. ಶಾಖ ಪೂರ್ತಿ ಹರಡುತ್ತದೆ. ಅಡುಗೆ ಬೇಗ ಮುಗಿಯುತ್ತದೆ. ಪಾತ್ರೆ ರಂಧ್ರ (ಆಳ) ಹೊಂದಿದ್ದರೆ, ಮಧ್ಯದಲ್ಲಿ ಮಾತ್ರ ಬೇಗನೆ ಬಿಸಿಯಾಗುತ್ತದೆ. ಶಾಖ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಫ್ಲಾಟ್ ಪ್ಯಾನ್ ಬಳಸಿದರೆ ಗ್ಯಾಸ್​ ಉಳಿಸಬಹುದು.

ಇವುಗಳ ಜೊತೆಗೆ ಅಕ್ಕಿ ಮತ್ತು ಕಾಳುಗಳನ್ನು ಮೊದಲು ನೆನೆಸಿ ನಂತರ ಬೇಯಿಸಿದರೆ ಸೂಕ್ತ. ಈ ಪ್ರಕ್ರಿಯೆ ಅವುಗಳನ್ನು ಬೇಗನೆ ಬೇಯಿಸುತ್ತದೆ. ಇದರಿಂದ ಸ್ವಲ್ಪ ಅನಿಲ ಉಳಿಸಬಹುದು. ಅಲ್ಲದೆ, ಗ್ಯಾಸ್ ಪೈಪ್ ಅನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಈ ವೇಳೆ ಲೀಕೇಜ್ ಆಗಿದ್ದರೆ ತಿಳಿದುಕೊಳ್ಳಬಹುದು. ಇದು ಗ್ಯಾಸ್ ಉಳಿತಾಯ ಮತ್ತು ಮುಂದಾಗುವ ಅನಾಹುತಗಳನ್ನು ತಡೆಯುತ್ತದೆ ಎನ್ನುತ್ತಾರೆ ಪರಿಣತರು.

ಇದನ್ನೂ ಓದಿ:ಸುಂದರವಾಗಿ ಕಾಣಬೇಕಾ?, ಹಾಗಾದರೆ ರಾಗಿ ಸಂಗಟಿ ಕುಡಿಯಿರಿ, ನಿರೋಗಿಯಾಗಿ; ರಾಗಿಯಲ್ಲಿ ಏನೆಲ್ಲಾ ಔಷಧ ಗುಣಗಳಿವೆ ಗೊತ್ತಾ? - HEALTH BENEFITS OF EAT RAGI FOODS

ABOUT THE AUTHOR

...view details