ಡ್ರೈ ಫ್ರೂಟ್ಸ್ (ಒಣ ಹಣ್ಣುಗಳು) ಹೇರಳ ಪೋಷಕಾಂಶಗಳನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕೆಲವರು ಇದನ್ನು ಹಾಗೆಯೇ ತಿಂದರೆ, ಇನ್ನು ಕೆಲವರು ನೀರಿನಲ್ಲಿ ನೆನೆಸಿ ಅಥವಾ ಜ್ಯೂಸ್ ಮಾಡಿ ಸೇವಿಸುತ್ತಾರೆ. ಈ ಒಣಹಣ್ಣುಗಳ ಪೈಕಿ ಖರ್ಜೂರ ಪ್ರಮುಖವಾದದ್ದು. ಖರ್ಜೂರ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಜನರು ಹೆಚ್ಚು ಇಷ್ಟಪಡುತ್ತಾರೆ. ಇದನ್ನು ನೆನೆ ಹಾಕಿ ತಿನ್ನುವುದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಯೋಜನವಿದೆ.
ಹೇರಳ ಫೈಬರ್:ನೆನೆ ಹಾಕಿದ ಖರ್ಜೂರ ಆಹಾರದಲ್ಲಿರುವ ಫೈಬರ್‌ನ ಅತ್ಯುತ್ತಮ ಮೂಲ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಹಸಿವು ನೀಗಿಸುತ್ತದೆ.
ದೇಹದ ಶಕ್ತಿ ವೃದ್ಧಿ:ಖರ್ಜೂರ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ನೈಸರ್ಗಿಕ ಮೂಲವಾಗಿದೆ. ಕಾರ್ಬೋಹೈಡ್ರೇಟ್‌ಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ವ್ಯಾಯಾಮಕ್ಕೂ ಮೊದಲು ಸೇವಿಸಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಮೂಳೆಗಳಿಗೆ ಬಲ: ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧ. ಇವು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಅವಶ್ಯಕ.