ಲಖನೌ, ಉತ್ತರಪ್ರದೇಶ: ತಮ್ಮ ದೇಹ ಸೌಂದರ್ಯದ ಬಗ್ಗೆ ಇಂದು ಹೆಚ್ಚಿನ ಜನರು ಕಾಳಜಿ ಹೊಂದಿದ್ದು, ಇದರಿಂದ ಜಿಮ್, ವರ್ಕ್ಔಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಜಿಮ್ಗೆ ಹೋಗುವ ಬಹುತೇಕರಲ್ಲಿ ಪ್ರೋಟೀನ್ ಸೇವನೆಗೆ ಒತ್ತು ನೀಡುತ್ತಾರೆ. ಜಿಮ್ಗೆ ಮೊದಲು ಅಥವಾ ನಂತರ ಪೂರಕ ಪ್ರೋಟೀನ್ ಸೇವನೆಗೆ ಮುಂದಾಗುತ್ತಾರೆ. ಆದರೆ, ವೈದ್ಯರ ಸಲಹೆ ಪಡೆಯದೇ ಈ ರೀತಿ ಪೂರಕ ಪ್ರೋಟೀನ್ ಸೇವನೆ ಅಪಾಯಕಾರಿ ಎನ್ನುತ್ತಾರೆ ತಜ್ಞರು.
ಈ ಕುರಿತು ಮಾತನಾಡುರುವ ಕೆಜಿಎಂಯುನ ಮೆಡಿಸಿನ್ ವಿಭಾಗದ ಡಾ ಸತ್ಯೇಂದ್ರ ಕುಮಾರ್ ಸೊನ್ಕರ್, ಇಂದು ಜನರು ಫಿಟ್ ಆಗಿರಬೇಕು ಎಂದು ಬಯಸುತ್ತಿರುವುದು ಸಹಜವಾದ ಆಶಯವಾಗಿದೆ. ಆದರೆ, ಯುವ ಜನತೆ ಶೀಘ್ರದಲ್ಲೇ ಸ್ನಾಯು ಬೆಳವಣಿಗೆ ಆಗಲಿ, ಉತ್ತಮ ದೇಹ ಸೌಂದರ್ಯ ಬರಲಿ ಎಂದು ಬಯಸುತ್ತಾರೆ. ಇದಕ್ಕಾಗಿ ಪೂರಕ ಪ್ರೋಟೀನ್ ಮೊರೆ ಹೋಗುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಉತ್ತಮ ಅಲ್ಲ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಅವರು ಬೇಸರ ಕೂಡಾ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆಯಲ್ಲಿರುವ ಎಲ್ಲ ಪೂರಕಗಳಿಗೆ ಸ್ಟಿರಿಯಾಡ್ಗಳನ್ನು ಬಳಕೆ ಮಾಡುತ್ತಾರೆ. ಸ್ಟಿರಿಯಾಡ್ಗಳು ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಇಂದು ಗೊತ್ತಿದ್ದೊ, ಗೊತ್ತಿಲ್ಲದೇ ಪ್ರೋಟಿನ್ ಜೊತೆಗೆ ಸ್ಟಿರಿಯಾಡ್ ಸೇವನೆ ಮಾಡುತ್ತಿದ್ದೇವೆ. ಇದು ದೇಹದ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುತ್ತದೆ. ದಿನದಲ್ಲಿ 3 ರಿಂದ 4 ಬಾರಿ ಪ್ರೋಟಿನ್ ಪೌಡರ್ ಸೇವಿಸಿದರೆ ನಿಧಾನವಾಗಿ ಸ್ಟಿರಿಯಾಡ್ ನಮ್ಮ ದೇಹ ಸೇರಿ, ಅದು ಹೃದಯ ಸ್ತಂಭನದಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಪರೀಕ್ಷೆ ಬಳಿಕ ವರ್ಕ್ಔಟ್ ನಡೆಸಿ: ಇಂದು ಜಿಮ್ಗೆ ಹೋಗುವ ಅನೇಕರಿಗೆ ನಮ್ಮ ರಕ್ತದೊತ್ತಡದ ಪರಿಮಾಣ ಎಷ್ಟು ಅಂತಾ ತಿಳಿದಿಲ್ಲ. ಅದೇ ರೀತಿ ರಕ್ತದಲ್ಲಿ ಸಕ್ಕರೆ ಮಟ್ಟದ ಬಗ್ಗೆ, ಥೈರಾಯ್ಡ್, ಯುರಿಕ್ ಮತ್ತು ಪ್ರೋಟೀನ್ ಬಗ್ಗೆಯೂ ಅಷ್ಟೊಂದು ಅರಿವಿರುವುದಿಲ್ಲ. ಅನೇಕ ರಕ್ತದೊತ್ತಡದ ರೋಗಿಗಳಲ್ಲಿ ಆರಂಭಿಕ ಹಂತದ ಹೃದಯ ಸಮಸ್ಯೆಗಳಿರುತ್ತದೆ. ಆದರೆ, ಈ ಬಗ್ಗೆ ತಿಳಿಯದೇ ಅವರು ಅಧಿಕ ವ್ಯಾಯಾಮ ಮತ್ತು ವರ್ಕ್ಔಟ್ಗೆ ಮುಂದಾಗುತ್ತಾರೆ. ಇದರಿಂದ ಹೃದಯ ಸ್ತಂಭನ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ವರ್ಕ್ಔಟ್ಗಾಗಿ ಜಿಮ್ಗೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಉತ್ತಮ. ಈ ವೇಳೆ ರಕ್ತದೊತ್ತಡ, ಮಧುಮೇಹ, ರಕ್ತದ ಸಕ್ಕರೆ ಮಟ್ಟ, ಥೈರಾಯ್ಡ್ ಪರೀಕ್ಷೆ ನಡೆಸುವುದು ಅವಶ್ಯವಾಗಿದೆ.
ವೈದ್ಯರ ಸೂಚನೆ ಅನುಸರಿಸುವುದು ಒಳ್ಳೆಯದು: ವೈದ್ಯರ ಶಿಫಾರಸ್ಸಿಲ್ಲದೇ ಪ್ರೋಟೀನ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಸಾಮಾನ್ಯವಾಗಿ ನೈಸರ್ಗಿಕವಾಗಿ ನಿತ್ಯ ನಮ್ಮ ದೇಹಕ್ಕೆ ಆಹಾರದ ಮೂಲಕ ಪ್ರೋಟಿನ್ ಸೇರುತ್ತಿರುತ್ತದೆ. ಈ ಹಿನ್ನೆಲೆ ಅನಗತ್ಯವಾಗಿ ಪೂರಕ ಪ್ರೋಟಿನ್ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಯಾವುದೇ ಅಂಶ ಹೆಚ್ಚಾದರೂ ಅಥವಾ ಕಡಿಮೆಯಾದರೂ ಪರೀಕ್ಷೆಯ ಹೊರತಾಗಿ ಅದರ ಲಕ್ಷಣಗಳು ಕಾಣುವುದಿಲ್ಲ. ದೇಹದಲ್ಲಿ ಯಾವುದರ ಕೊರತೆ ಇದೆ. ಯಾವ ಅಂಶ ಹೆಚ್ಚಿದೆ ಎಂದು ತಿಳಿಯದೇ ತೀವ್ರತರದ ವ್ಯಾಯಾಮ ಚಟುವಟಿಕೆಗೆ ಒಳಗಾಗುವುದರಿಂದ ಇದು ಹೃದಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುತ್ತದೆ.