ನವದೆಹಲಿ: ಆರೋಗ್ಯಯುತ ಜೀವನಶೈಲಿಗೆ ನಿಯಮಿತ ವ್ಯಾಯಾಮ ಅವಶ್ಯ. ಆದರೆ, ನಿತ್ಯ ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎಂಬ ಚಿಂತೆ ಕಾಡುತ್ತಿದ್ದರೆ, ಪರವಾಗಿಲ್ಲ. ವಾರದಲ್ಲಿ ಒಂದೇ ದಿನವೇ ವ್ಯಾಯಾಮ ಮಾಡಿ, ಯಾವುದೇ ದೈಹಿಕ ಚಟುವಟಿಕೆ ಇಲ್ಲದಿರುವಿಕೆಗಿಂತ ವಾರದಲ್ಲಿ ಮಾಡುವ ಒಂದು ದಿನದ ವ್ಯಾಯಾಮವೇ ಸಾಕಷ್ಟು ಪ್ರಯೋಜನ ನೀಡುತ್ತದೆ ಎಂದು ಹೈದರಾಬಾದ್ ಮೂಲದ ನರರೋಗಶಾಸ್ತ್ರಜ್ಞರು ತಿಳಿಸಿದ್ದಾರೆ.
ಹೈದರಾಬಾದ್ ಡಾಕ್ಟರ್ ಎಂದೇ ಎಕ್ಸ್.ಕಾಂನಲ್ಲಿ ಚಿರಪರಿಚಿತ ಆಗಿರುವ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾತನಾಡಿದ್ದಾರೆ. ಇತ್ತೀಚಿನ ಅಧ್ಯಯನ ಮಂಡಿಸಿರುವ ಅವರು ವಾರಾಂತ್ಯದಲ್ಲಿ ಮಾತ್ರ ವ್ಯಾಯಾಮದಂತೆ ಚಟುವಟಿಕೆ ನಡೆಸುವವರನ್ನು ವಾರಾಂತ್ಯದ ಯೋಧರು ಎಂದಿದ್ದಾರೆ.
ತುಂಬಾ ಬ್ಯುಸಿ ಇರುವವರು ವಾರಾಂತ್ಯದ ವ್ಯಾಯಾಮ ನಡೆಸಬಹುದಾಗಿದೆ ಎಂದಿದ್ದಾರೆ. ಈ ಕುರಿತ ಅಧ್ಯಯನವನ್ನು ಬಿಎಂಜೆಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಎರಡು ದಶಕಗಳ ಕಾಲ 1,50,000 ಜನರನ್ನು ಗಮನಿಸಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ ವಾರದಲ್ಲಿ ಒಂದು ಅಥವಾ ಎರಡು ದಿನ ವ್ಯಾಯಾಮ ಮಾಡುವವರು, ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ದಿನ ವ್ಯಾಯಾಮ ಮಾಡುವವರಷ್ಟೇ ಪ್ರಮಾಣದಲ್ಲಿ ಶೇ 15ರಷ್ಟು ಅಕಾಲಿಕ ಸಾವಿನ ಅಪಾಯ ಕಡಿಮೆ ಮಾಡಬಹುದು. ಆದಾಗ್ಯೂ ಈ ವ್ಯಾಯಾಮದ ಪ್ರಯೋಜನ ಸಮಯದ ಮೇಲೆ ಆಧಾರವಾಗಿದ್ದು, ವಾರಾಂತ್ಯ ವ್ಯಾಯಾಮ ಮಾಡುವವರು ಕನಿಷ್ಠ 30 - 60 ನಿಮಿಷ ವ್ಯಾಯಾಮ ಮಾಡಬೇಕು.